×
Ad

ಸಾರಿಗೆ ನೌಕರರಿಗೆ ಸರಕಾರಿ ನೌಕರಿ: ಶೀಘ್ರದಲ್ಲಿಯೇ ವರದಿ ಸಲ್ಲಿಕೆ- ಲಕ್ಷ್ಮಣ ಸವದಿ

Update: 2020-03-04 23:39 IST

ಬೆಂಗಳೂರು, ಮಾ.4: ಕೆಎಸ್ಸಾರ್ಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಸಂಬಂಧ ಶೀಘ್ರದಲ್ಲಿಯೇ ವರದಿ ಸಲ್ಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಬುಧವಾರ ವಿಧಾನಸಭೆಯಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಚರ್ಚೆ ವೇಳೆಯಲ್ಲಿ ಅವರು, ಸಾರಿಗೆ ನೌಕರರನ್ನು ಸರಕಾರಿ ಸಿಬ್ಬಂದಿಯಂತೆ ಮಾಡಬೇಕೆಂದು ನಮಗೂ ಮನಸ್ಸಿದೆ. ಹೀಗಾಗಿಯೇ, ಹಿರಿಯ ಅಧಿಕಾರಿಗಳ ತಂಡ ರಚನೆ ಮಾಡಿ, ಬೇರೆ ರಾಜ್ಯಗಳಿಂದ ಅಧ್ಯಯನ ಮಾಡಲು ಕಳುಹಿಸಲಾಗಿದ್ದು, ಈ ಸಂಬಂಧ ಈಗಾಗಲೇ ಪ್ರಾಥಮಿಕ ವರದಿ ಬಂದಿದೆ. ಜೊತೆಗೆ, ಉನ್ನತ ಅಧಿಕಾರಿಗಳ ವರದಿಯೊಂದಕ್ಕೆ ಕಾಯುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಸಾರಿಗೆ ನಿಗಮಗಳು ನಷ್ಟದಲ್ಲಿರುವ ಕಾರಣ ಕೆಲ ಸಿಬ್ಬಂದಿ ಅಭದ್ರತೆಯ ಆತಂಕದಲ್ಲಿದ್ದಾರೆ. ಆದರೆ, ಸರಕಾರ ಇರುವವರೆಗೂ ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದ ಅವರು, ಅಧಿಕಾರಿ ವರ್ಗದಲ್ಲಿ ಸೋರಿಕೆ ಆಗುತ್ತಿದ್ದ ನಷ್ಟದ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.

ಕೆಎಸ್ಸಾರ್ಟಿಸಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೇತನ, ತಾರತಮ್ಯ, ಭದ್ರತೆ ಕುರಿತು ಬಿಜೆಪಿ ಶಾಸಕ ಹರತಾಳ್ ಹಾಲಪ್ಪ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ, ವೇತನ ಸಂಬಂಧ ಈಗಾಗಲೇ ಸಿಬ್ಬಂದಿ ವರ್ಗ ತಮ್ಮ ಬಳಿ ಮನವಿ ಮಾಡಿದ್ದು, ವೇತನದಲ್ಲಿ ವ್ಯತ್ಯಾಸ ಆಗದಂತೆ ನೋಡಿಕೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಮಂಗಳೂರು ನಗರ ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಆರ್‌ಟಿಓ ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಸಂಬಂಧ ಪ್ರಶ್ನೆಗೆ ಉತ್ತರಿಸಿದ ಸವದಿ, ಮಂಗಳೂರು ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಗಮನಕ್ಕೆ ಬಂದಿದ್ದು, ಒಟ್ಟಾರೆ ರಾಜ್ಯದಲ್ಲಿ 150ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಕೆಲವು ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಸಂಬಂಧ ಆಯ್ಕೆಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News