ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದರೆ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ: ಸಚಿವ ಶ್ರೀಮಂತ ಪಾಟೀಲ್
ಬೆಂಗಳೂರು, ಮಾ.4: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆಎಂಡಿಸಿ)ದ ಅರಿವು ಶಿಕ್ಷಣ ಸಾಲ ಯೋಜನೆ ಅನುದಾನ ಒದಗಿಸುವ ಪ್ರಕ್ರಿಯೆಯಲ್ಲಿ ತಡೆ ಆಗಿರುವುದು ನಿಜ. ಆದರೆ, ಶೀಘ್ರದಲ್ಲಿಯೇ ಹಣ ಬಿಡುಗಡೆಗೆ ಕ್ರಮ ವಹಿಸಲಾಗುವುದು. ಈ ಮಧ್ಯೆ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳು ಕಿರುಕುಳ ನೀಡಿದರೆ, ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ್ ಹೇಳಿದರು.
ಬುಧವಾರ ವಿಧಾನಸಭೆಯಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಚರ್ಚೆಯಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಜೊತೆಗೆ, ಯೋಜನೆಗೆ ಅನುದಾನ ಒದಗಿಸಲಾಗುವುದು ವಿಶ್ವಾಸ ವ್ಯಕ್ತಪಡಿಸಿದರು.
ಅರಿವು ಯೋಜನೆಗೆ ಸೂಕ್ತ ಸಮಯಕ್ಕೆ ಅನುದಾನ ಬಿಡುಗಡೆಗೊಳಿಸದ ಪರಿಣಾಮ, ಕೆಲ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದು, ಪರೀಕ್ಷೆ ಪತ್ರ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಪ್ರಶ್ನಿಸುವ ಮೂಲಕ ಯು.ಟಿ.ಖಾದರ್ ಗಮನ ಸೆಳೆದರು.
ಕಳೆದ ಮೂರು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಗೆ ಬಿಡುಗಡೆಯಾದ ಹಣ ಮತ್ತು ಖರ್ಚಿನ ಅನುದಾನ ಎಷ್ಟು ಎಂದು ಕೇಳಲಾಗಿತ್ತು. ಆದರೆ, ಬರೀ ವಕ್ಫ್ ಗೆ ಸಂಬಂಧಿಸಿದಂತೆ ಉತ್ತರ ನೀಡಿದ್ದು, ಇದರಲ್ಲಿ 1.71 ಕೋಟಿ ರೂ. ಅನುದಾನ ಬಂದಿದೆ. 90 ಲಕ್ಷ ರೂ. ಬಿಡುಗಡೆಯಾಗಿದ್ದು, ಬಾಕಿ ಇರುವ 71 ಲಕ್ಷ ರೂ. ಅನುದಾನ ನೀಡುವಂತೆ ಯು.ಟಿ.ಖಾದರ್ ಸಚಿವರಲ್ಲಿ ಮನವಿ ಮಾಡಿದರು.