ಕೆರೆಗಳ ಒತ್ತುವರಿ ವಿಚಾರ: 148 ಕೆರೆಗಳ ಒತ್ತುವರಿ ತೆರವು ಮಾಡಲು ಹೈಕೋರ್ಟ್ ಆದೇಶ
ಬೆಂಗಳೂರು, ಮಾ.4: ನಗರ ವ್ಯಾಪ್ತಿಯಲ್ಲಿ ಕೆರೆಗಳ ಒತ್ತುವರಿ ತೆರವು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಅಕ್ರಮವಾಗಿ ಒತ್ತುವರಿ ಮಾಡಿರುವ 148 ಕೆರೆಗಳನ್ನು ತೆರವುಗೊಳಿಸಬೇಕೆಂದು ನಿರ್ದೇಶಿಸಿರುವ ಹೈಕೋರ್ಟ್ ಈ ಕುರಿತು ಎ.17ರಂದು ರಾಜ್ಯ ಸರಕಾರ ಹಾಗೂ ಬಿಬಿಎಂಪಿಗೆ ಪ್ರಮಾಣ ಪತ್ರ ಸಲ್ಲಿಸಲು ಸೂಚಿಸಿದೆ.
ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿತು.
ಕೆರೆಗಳಲ್ಲಿ ಕಸವನ್ನು ಹಾಕುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಕೆರೆಗಳನ್ನು ಒತ್ತುವರಿ ಮಾಡಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು. ಸುಪ್ರೀಂಕೋರ್ಟ್ ಆದೇಶದಂತೆ ಜಿಲ್ಲಾ ಕೇಂದ್ರಗಳಲ್ಲಿ ರಚನೆಯಾಗಿರುವ ಕೆರೆಗಳ ಅಭಿವೃದ್ಧಿ ಸಮಿತಿಗಳ ವರದಿಯನ್ನೂ ಪೀಠಕ್ಕೆ ನೀಡಬೇಕೆಂದು ನ್ಯಾಯಪೀಠವು ತಿಳಿಸಿತು.
ಸರಕಾರದ ಪರ ವಾದಿಸಿದ ವಕೀಲರು, ನಗರದಲ್ಲಿ 160 ಕೆರೆಗಳನ್ನು ರಕ್ಷಿಸಲಾಗಿದ್ದು, ಕೆರೆಗಳನ್ನು ಒತ್ತುವರಿ ಮಾಡಿರುವವರ ವಿರುದ್ಧ ಕ್ರಮದ ಜೊತೆಗೆ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಒತ್ತುವರಿ ಮಾಡಿರುವ ಕೆರೆಗಳನ್ನು ತೆರವುಗೊಳಿಸಲು ಸೂಚಿಸಿದೆ. ಹಾಗೂ ಎ.17ರಂದು ಪ್ರಮಾಣ ಪತ್ರ ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ಮುಂದೂಡಿದೆ.