ಅತಿಯಾದ ಸಕ್ಕರೆ ಸೇವನೆ ಖಿನ್ನತೆಗೆ ಕಾರಣವಾಗುತ್ತದೆಯೇ?

Update: 2020-03-05 13:46 GMT

ಪ್ರತಿ ಏಳು ಜನರಲ್ಲಿ ಓರ್ವ ತನ್ನ ಜೀವಮಾನದಲ್ಲಿ ಖಿನ್ನತೆಯಿಂದ ನರಳುವ ಅಪಾಯವನ್ನು ಎದುರಿಸುತ್ತಿರುತ್ತಾನೆ. ನಮ್ಮನ್ನು ಖಿನ್ನತೆಯ ಅಪಾಯಕ್ಕೆ ತಳ್ಳುವ ಹಲವಾರು ಕಾರಣಗಳಿವೆ. ಹಲವಾರು ಅಧ್ಯಯನಗಳು ತಂಪು ಪಾನೀಯಗಳು ಮತ್ತು ಹಣ್ಣುಗಳ ರಸಗಳಂತಹ ಸಕ್ಕರೆ ಬೆರೆತ ಆಹಾರಗಳ ಅತಿಯಾದ ಸೇವನೆಗೂ ಖಿನ್ನತೆಯ ಅಪಾಯಕ್ಕೂ ತಳುಕು ಹಾಕಿವೆ.

 ಅತಿಯಾದ ಸಕ್ಕರೆ ಸೇವನೆಯು ಬೊಜ್ಜು,ಮಧುಮೇಹ ಮತ್ತು ಇತರ ಸಂಬಂಧಿತ ಕಾಯಿಲೆಗಳಿಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದು ಗೊತ್ತಿರುವ ವಿಷಯವೇ ಆಗಿದೆ. ಆದರೆ ಮಾನಸಿಕ ಆರೋಗ್ಯ ಸ್ಥಿತಿಗಳಲ್ಲಿ ಸಕ್ಕರೆಯ ಪಾತ್ರದ ಬಗ್ಗೆ ಹೆಚ್ಚು ಗೊತ್ತಿಲ್ಲ. ಸಂಸ್ಕರಿತ ಕಾರ್ಬೊಹೈಡ್ರೇಟ್‌ಗಳು ಮತ್ತು ಸಕ್ಕರೆಯನ್ನು ಅಧಿಕವಾಗಿ ಒಳಗೊಂಡಿರುವ ಆಹಾರ ಸೇವನೆಯೂ ಖಿನ್ನತೆಯ ಕಾಯಿಲೆಗೆ ಕಾರಣವಾಗುವ ಅಪಾಯದ ಅಂಶವಾಗಿದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಸಕ್ಕರೆ ನಮ್ಮನ್ನು ಹೇಗೆ ಖಿನ್ನತೆಗೆ ದೂಡುತ್ತದೆ ಎನ್ನುವ ಬಗ್ಗೆ ಮಾಹಿತಿಗಳಿಲ್ಲಿವೆ.....

►ಅಧಿಕ ಸಕ್ಕರೆ ಉರಿಯೂತಕ್ಕೆ ಕಾರಣವಾಗುತ್ತದೆ

ಅಧಿಕ ಪ್ರಮಾಣದಲ್ಲಿ ಸಂಸ್ಕರಿತ ಕಾರ್ಬೊಹೈಡ್ರೇಟ್‌ಗಳನ್ನು ಒಳಗೊಂಡಿರುವ ಆಹಾರವು ಉರಿಯೂತದ ಅಪಾಯವನ್ನು ಹೆಚ್ಚಿಸಿದರೆ ಹಣ್ಣುಗಳು ಮತ್ತು ತರಕಾರಿಗಳಂತಹ ಒಮೆಗಾ-3 ಕೊಬ್ಬನ್ನು ಸಮೃದ್ಧವಾಗಿ ಹೊಂದಿರುವ ಆಹಾರವು ಉರಿಯೂತದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಖಿನ್ನತೆಯಲ್ಲಿ ಉರಿಯೂತದ ಕಾರಣಗಳ ಪಾತ್ರವನ್ನು ಹಲವಾರು ಅಧ್ಯಯನಗಳು ಸಾಬೀತುಗೊಳಿಸಿವೆ. ಸಂಸ್ಕರಿತ ಪಿಷ್ಟಗಳು,ಸಕ್ಕರೆ ಮತ್ತು ಸ್ಯಾಚ್ಯುರೇಟೆಡ್ ಫ್ಯಾಟ್‌ಗಳು ಹೆಚ್ಚಾಗಿರುವ ಮತ್ತು ನೈಸರ್ಗಿಕ ಉತ್ಕರ್ಷಣ ನಿರೋಧಗಳು ಕಡಿಮೆ ಪ್ರಮಾಣದಲ್ಲಿರುವ ಆಹಾರಗಳು ಉರಿಯೂತಕ್ಕೆ ಕಾರಣಗಳನ್ನು ಉತ್ತೇಜಿಸುತ್ತವೆ. ಹೀಗಾಗಿ ಉರಿಯೂತವನ್ನು ಹೆಚ್ಚಿಸುವ ಆಹಾರಗಳು ಖಿನ್ನತೆಗೂ ಕಾರಣವಾಗುತ್ತವೆ.

►ಸಕ್ಕರೆ ವಿಟಾಮಿನ್‌ಗಳ ಮಟ್ಟ ಕುಸಿಯುವಂತೆ ಮಾಡುತ್ತದೆ

   ನೈಸರ್ಗಿಕ ಸಕ್ಕರೆಗೆ ವ್ಯತಿರಿಕ್ತವಾಗಿ ಸಂಸ್ಕರಿತ ಸಕ್ಕರೆಯಲ್ಲಿ ಅಗತ್ಯ ಪೋಷಕಾಂಶಗಳ ಕೊರತೆಯಿರುತ್ತದೆ. ಅದನ್ನು ಸೇವಿಸುವುದರಿಂದ ಹೆಚ್ಚಿನ ಕ್ಯಾಲರಿಗಳು ಶರೀರವನ್ನು ಪ್ರವೇಶಿಸುತ್ತವೆ,ಅಷ್ಟೇ. ಅಲ್ಲದೆ ಅದು ಆಹಾರದಲ್ಲಿರುವ ವಿಟಾಮಿನ್‌ಗಳು ಮತ್ತು ಖನಿಜಗಳಿಂದ ಶರೀರವನ್ನು ವಂಚಿತಗೊಳಿಸುತ್ತದೆ. ನಾವು ಸಂಸ್ಕರಿತ ಸಕ್ಕರೆಯನ್ನು ಸೇವಿಸಿದಾಗ ಅದನ್ನು ಜೀರ್ಣಿಸಲು ಶರೀರವು ದಾಸ್ತಾನಿರುವ ಪೋಷಕಾಂಶಗಳನ್ನು ಬಳಸಿಕೊಳ್ಳುತ್ತದೆ ಮತ್ತು ಇದು ಪೋಷಕಾಂಶಗಳ ಕೊರತೆಗೆ ಕಾರಣವಾಗಬಲ್ಲದು. ವಿಟಾಮಿನ್ ಡಿ,ವಿಟಾಮಿನ್ ಬಿ ಮತ್ತು ಮ್ಯಾಗ್ನೀಷಿಯಂ ಕೊರತೆಗೂ ಖಿನ್ನತೆಗೂ ಸಂಬಂಧವಿದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಬಿ12 ವಿಟಾಮಿನ್‌ನ ತೀವ್ರ ಕೊರತೆಯು ಜ್ಞಾಪಕ ಶಕ್ತಿ ನಷ್ಟ,ಮಾನಸಿಕ ಅಸ್ವಸ್ಥತೆ ಮತ್ತು ಖಿನ್ನತೆಗೆ ಕಾರಣವಾಗುತ್ತದೆ.

ಉದಾಹರಣೆಗೆ ಅತಿಯಾದ ಫ್ರುಕ್ಟೋಸ್ ಸೇವನೆಯು ವಿಟಾಮಿನ್ ಡಿ ಅವನತಿಗೆ ಕಾರಣವಾಗುವ ಮತ್ತು ಈ ವಿಟಾಮಿನ್‌ನ ಸಂಶ್ಲೇಷಣೆಗೆ ವ್ಯತ್ಯಯವನ್ನುಂಟು ಮಾಡುವ ಕಿಣ್ವದ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇದು ವಿಟಾಮಿನ್ ಡಿ ಮಟ್ಟ ಕುಗ್ಗುವಂತೆ ಮಾಡುತ್ತದೆ ಮತ್ತು ದೀರ್ಘಾವಧಿಯಲ್ಲಿ ವಿಟಾಮಿನ್ ಡಿ ಕೊರತೆಗೆ ಕಾರಣವಾಗುತ್ತದೆ. ಶರೀರವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ವಿಟಾಮಿನ್ ಡಿ ಅಗತ್ಯವಾಗಿರುವುದರಿಂದ ಕ್ಯಾಲ್ಸಿಯಂ ಮಟ್ಟವೂ ಕುಸಿಯುತ್ತದೆ.

►ಕಾರ್ಬೊಹೈಡ್ರೇಟ್‌ಗಳು ಮನಃಸ್ಥಿತಿಯ ಮೇಲೆ ಪರಿಣಾಮ ಹೊಂದಿವೆ

 ಮಾನಸಿಕ ಆರೋಗ್ಯದ ಕಾರ್ಯನಿರ್ವಹಣೆಯಲ್ಲಿ ಕಾರ್ಬೊಹೈಡ್ರೇಟ್‌ಗಳು ಪ್ರಮುಖ ಪಾತ್ರವನ್ನು ಹೊಂದಿವೆ. ಅದು ನಮ್ಮ ಮನಃಸ್ಥಿತಿ ಮತ್ತು ವರ್ತನೆಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಕಾರ್ಬೊಹೈಡ್ರೇಟ್ ಅಧಿಕವಾಗಿರುವ ಆಹಾರವು ಇನ್ಸುಲಿನ್ ಬಿಡುಗಡೆಯನ್ನು ಪ್ರಚೋದಿಸುತ್ತದೆ ಮತ್ತು ಇನ್ಸುಲಿನ್ ಗ್ಲುಕೋಸ್‌ನ ಹೀರುವಿಕೆಯಲ್ಲಿ ನೆರವಾಗುವ ಜೊತೆಗೆ ಟ್ರಿಪ್ಟೊಫಾನ್ ಎಂಬ ಅಮಿನೊ ಆ್ಯಸಿಡ್ ಮಿದುಳನ್ನು ಪ್ರವೇಶಿಸುವಂತೆ ಮಾಡುತ್ತದೆ. ಟ್ರಿಪ್ಟೊಫಾನ್ ನಮ್ಮನ್ನು ಖುಷಿಯಾಗಿರಿಸುವ ನರಪ್ರೇಕ್ಷಕಗಳು ಅಥವಾ ಮಿದುಳು ರಾಸಾಯನಿಕಗಳ ಮಟ್ಟವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಮಿದುಳಿನ ಒಟ್ಟಾರೆ ಕಾರ್ಯನಿರ್ವಹಣೆಗೆ ಕಾರ್ಬೊಹೈಡ್ರೇಟ್‌ಗಳು ಅಗತ್ಯವಾಗಿವೆಯಾದರೂ,ಸರಿಯಾದ ವಿಧದ ಕಾರ್ಬೊಹೈಡ್ರೇಟ್‌ನ ಆಯ್ಕೆ ಮುಖ್ಯವಾಗಿದೆ. ನಾವು ಸೇವಿಸುವ ಕಾರ್ಬೊಹೈಡ್ರೇಟ್‌ನ ಗುಣಮಟ್ಟ ಮುಖ್ಯವೇ ಹೊರತು ಪ್ರಮಾಣ ಮುಖ್ಯವಲ್ಲ. ಹೆಚ್ಚು ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಆಹಾರಗಳನ್ನು ಸೇವಿಸುವ ಮಹಿಳೆಯರಿಗೆ ಹೋಲಿಸಿದರೆ ಕಡಿಮೆ ಜಿಐ ಆಹಾರವನ್ನು ಸೇವಿಸುವ ಮಹಿಳೆಯರಲ್ಲಿ ಖಿನ್ನತೆಗೆ ಗುರಿಯಾಗುವ ಅಪಾಯ ಕಡಿಮೆಯಾಗಿರುತ್ತದೆ ಎನ್ನುವುದು ಅಧ್ಯಯನಗಳಿಂದ ಬೆಳಕಿಗೆ ಬಂದಿದೆ. ಕಡಿಮೆ ಜಿಐ ಆಹಾರಗಳು ಮಿದುಳಿನ ಕಾರ್ಯ,ಮನಃಸ್ಥಿತಿ ಮತ್ತು ಶಕ್ತಿಯ ಮಟ್ಟಗಳ ಮೇಲೆ ಮಧ್ಯಮ,ಆದರೆ ದೀರ್ಘಕಾಲಿಕ ಪರಿಣಾಮವನ್ನುಂಟು ಮಾಡುವುದು ಇದಕ್ಕೆ ಕಾರಣವಾಗಿದೆ. ಸಿಹಿಖಾದ್ಯಗಳಂತಹ ಅಧಿಕ ಜಿಐ ಆಹಾರಗಳು ಸಾದಾ ಕಾರ್ಬೊಹೈಡ್ರೇಟ್‌ಗಳನ್ನು ಒಳಗೊಂಡಿರುತ್ತವೆ ಮತ್ತು ಇವು ರಕ್ತದಲ್ಲಿಯ ಸಕ್ಕರೆ ಅಂಶವನ್ನು ದಿಢೀರನೆ ಹೆಚ್ಚಿಸುತ್ತವೆ ಮತ್ತು ಮನಃಸ್ಥಿತಿ ಹಾಗೂ ಶಕ್ತಿಯ ಮಟ್ಟಗಳನ್ನು ತಾತ್ಕಾಲಿಕವಾಗಿ ಹೆಚ್ಚಿಸುತ್ತವೆ.

►ಸಕ್ಕರೆ ಮತ್ತು ಖಿನ್ನತೆ:ಯಾರಿಗೆ ಅಪಾಯ?

 ಮಹಿಳೆಯರಿಗೆ ಹೋಲಿಸಿದರೆ ಪುರುಷರು ಸಕ್ಕರೆಯಿಂದುಂಟಾಗುವ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. 2017ರಲ್ಲಿ ್ಲ ನಡೆಸಲಾದ ಅಧ್ಯಯನವೊಂದರಂತೆ ಪ್ರತಿ ದಿನ 67 ಗ್ರಾಂ ಅಥವಾ ಹೆಚ್ಚಿನ ಸಕ್ಕರೆಯನ್ನು ಸೇವಿಸುವ ಪುರುಷರಲ್ಲಿ ಖಿನ್ನತೆಗೆ ಗುರಿಯಾಗುವ ಸಾಧ್ಯತೆ ಶೇ.23ರಷ್ಟು ಹೆಚ್ಚಾಗಿದೆ ಎನ್ನುವುದು ಬೆಳಕಿಗೆ ಬಂದಿದೆ. 40 ಗ್ರಾಂ ಅಥವಾ ಕಡಿಮೆ ಸಕ್ಕರೆಯನ್ನು ಸೇವಿಸುವ ಪುರುಷರಲ್ಲ್ಲಿ ಖಿನ್ನತೆಗೆ ಗುರಿಯಾಗುವ ಅಪಾಯ ಕಡಿಮೆಯಿರುತ್ತದೆ ಎಂದೂ ಈ ಅಧ್ಯಯನವು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News