ಕೊರೊನಾವೈರಸ್ ಅಪಾಯದಿಂದ ಪಾರಾಗಲು ಏನು ಮಾಡಬೇಕು: ಇಲ್ಲಿದೆ ವಿವರ

Update: 2020-03-05 14:14 GMT

ಇಡೀ ವಿಶ್ವವನ್ನು ತಲ್ಲಣಗೊಳಿಸಿರುವ ಕೊರೊನಾವೈರಸ್‌ನ ವಿರುದ್ಧ ಲಸಿಕೆಯು ಈವರೆಗೂ ಸಿದ್ಧಗೊಂಡಿಲ್ಲ. ಹೀಗಾಗಿ ಕೊರೋನವೈರಸ್‌ನ್ನು ತಡೆಗಟ್ಟುವುದೇ ಈವರೆಗಿನ ಅತ್ಯುತ್ತಮ ಚಿಕಿತ್ಸೆಯಾಗಿರುವಂತಿದೆ. ಈ ಮಾರಣಾಂತಿಕ ವೈರಸ್‌ನ್ನು ದೂರವಿಡಲು ಪ್ರತಿಯೊಬ್ಬರೂ ಅಗತ್ಯವಾಗಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳು ಇಲ್ಲಿವೆ.

ಅನಾರೋಗ್ಯಕ್ಕೆ ಗುರಿಯಾಗಿರುವ ವ್ಯಕ್ತಿಗಳ ನಿಕಟ ಸಂಪರ್ಕವನ್ನು ನಿವಾರಿಸಿ. ಕೆಮ್ಮುತ್ತಿರುವ ಅಥವಾ ಸೀನುತ್ತಿರುವ ಯಾವುದೇ ವ್ಯಕ್ತಿ ಮತ್ತು ನಿಮ್ಮ ನಡುವೆ ಕನಿಷ್ಠ ಮೂರು ಅಡಿಗಳ ಅಂತರವನ್ನು ಕಾಯ್ದುಕೊಳ್ಳಿ.

ನಿಮ್ಮ ಕಣ್ಣುಗಳು,ಮೂಗು ಮತ್ತು ಬಾಯಿಯನ್ನು ಕೈಗಳಿಂದ ಸ್ಪರ್ಶಿಸಬೇಡಿ.

ನಿಮಗೆ ಅನಾರೋಗ್ಯ ಕಾಡುತ್ತಿದ್ದರೆ ಮನೆಯಲ್ಲಿಯೇ ಇರಿ.

ಕೆಮ್ಮುವಾಗ ಅಥವಾ ಸೀನುವಾಗ ಟಿಶ್ಯೂ ಪೇಪರ್‌ನಿಂದ ಮುಖವನ್ನು ಮುಚ್ಚಿಕೊಳ್ಳಿ. ಬಳಸಿದ ಟಿಶ್ಯೂ ಪೇಪರ್‌ನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಿ.

ಆಗಾಗ್ಗೆ ಸ್ಪರ್ಶಿಸುವ ವಸ್ತುಗಳನ್ನು ಮತ್ತು ಮೇಲ್ಮೈಗಳನ್ನು ಮನೆಯಲ್ಲಿ ಬಳಸುವ ಕ್ಲೀನಿಂಗ್ ಸ್ಪ್ರೇ ನಿಂದ ಸ್ವಚ್ಛಗೊಳಿಸುತ್ತಿರಿ ಅಥವಾ ಸ್ವಚ್ಛವಾದ ಬಟ್ಟೆಯಿಂದ ಒರೆಸುತ್ತಿರಿ. ಇದರಿಂದಾಗಿ ಅವುಗಳಲ್ಲಿ ವಾಸವಿರುವ ಕೀಟಾಣುಗಳು ನಿವಾರಣೆಯಾಗುತ್ತವೆ.

ಕೊರೋನ ಸೋಂಕುಪೀಡಿತ ವ್ಯಕ್ತಿಯ ಆರೈಕೆಯಲ್ಲಿ ನೀವು ತೊಡಗಿಕೊಂಡಿಲ್ಲವಾದರೆ ಮುಖಕ್ಕೆ ಮಾಸ್ಕ್ ಧರಿಸಬೇಕಿಲ್ಲ. ಸೋಂಕಿಗೊಳಗಾಗಿರುವ ವ್ಯಕ್ತಿಗಳು ಮಾತ್ರ ಸೋಂಕು ಇತರರಿಗೆ ಹರಡದಂತಿರಲು ಮಾಸ್ಕ್‌ಗಳನ್ನು ಧರಿಸಬೇಕು ಎಂದು ರೋಗ ನಿಯಂತ್ರಣ ಕೇಂದ್ರಗಳು ಶಿಫಾರಸು ಮಾಡಿವೆ.

ಆಗಾಗ್ಗೆ ಸಾಬೂನು ಮತ್ತು ನೀರು ಬಳಸಿ ಕನಿಷ್ಠ 20 ಸೆಕೆಂಡ್‌ಗಳ ಕಾಲ ಕೈಗಳನ್ನು ತೊಳೆದುಕೊಳ್ಳುವುದನ್ನು ರೂಢಿಸಿಕೊಳ್ಳಿ. ಬಾತ್‌ರೂಮ್‌ನಿಂದ ಹೊರಕ್ಕೆ ಬರುವಾಗ,ಆಹಾರ ಸೇವನೆಗೆ ಮೊದಲು,ಮೂಗಿನಿಂದ ಸಿಂಬಳ ಹೊರಕ್ಕೆ ಹಾಕಿದ್ದರೆ,ಕೆಮ್ಮಿದರೆ ಅಥವಾ ಸೀನಿದರೆ ಕೈಗಳನ್ನು ಕಡ್ಡಾಯವಾಗಿ ತೊಳೆದುಕೊಳ್ಳಿ.

 ಸಾಬೂನು ಮತ್ತು ನೀರು ತಕ್ಷಣಕ್ಕೆ ಲಭ್ಯವಿಲ್ಲದಿದ್ದರೆ ಅಲ್ಕೋಹಾಲ್ ಅಂಶವನ್ನೊಳಗೊಂಡಿರುವ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಬಳಸಿ. ಕೈಗಳಲ್ಲಿ ಕೊಳೆ ಎದ್ದುಕಾಣುತ್ತಿದ್ದರೆ ಸಾಬೂನು ಮತ್ತು ನೀರನ್ನು ಬಳಸಿ ಅವುಗಳನ್ನು ತೊಳೆದುಕೊಳ್ಳಿ.

ಜ್ವರ,ಕೆಮ್ಮು ಮತ್ತು ಉಸಿರಾಟದಲ್ಲಿ ತೊಂದರೆ ಈ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

 ದೂರದ ಪ್ರಯಾಣವನ್ನು ಆದಷ್ಟು ತಪ್ಪಿಸಿ. ಅನಿವಾರ್ಯವಾಗಿದ್ದರೆ ಆರೋಗ್ಯ ಸಚಿವಾಲಯವು ಹೊರಡಿಸಿರುವ ಪ್ರಯಾಣ ಸಲಹೆಗಳನ್ನು ಪಾಲಿಸಲು ಪ್ರಯತ್ನಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News