×
Ad

ಕೆಎಸ್‌ಒಯು ನೇಮಕಾತಿಯಲ್ಲಿ ಅಕ್ರಮ ಆರೋಪ: ತಪ್ಪಿತಸ್ಥರ ವಿರುದ್ಧ ಕ್ರಮ- ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್

Update: 2020-03-05 21:49 IST

ಬೆಂಗಳೂರು, ಮಾ.5: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ(ಕೆಎಸ್‌ಒಯು)ದಲ್ಲಿ ನಡೆದಿದೆ ಎನ್ನಲಾದ ನೇಮಕಾತಿ ಮತ್ತು ಹಣಕಾಸು ವಹಿವಾಹಿಟಿನ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ. 

ಈ ಕುರಿತು ಮೈಸೂರಿನ ಕರ್ನಾಟಕ ರಾಜ್ಯ ವಿವಿ ಸೇರಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ವಕೀಲರ ವಾದ ಆಲಿಸಿದ ನ್ಯಾಯಪೀಠವು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಯ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರ ನಿರ್ದೇಶನದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಕುಲಪತಿಗಳು ಪ್ರಮಾಣಪತ್ರ ಹಾಗೂ ಹೆಚ್ಚುವರಿ ಆಕ್ಷೇಪಣಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅರ್ಜಿದಾರರು ಕೋರಿರುವ ಮನವಿಯಂತೆ ಕ್ರಮ ಜರುಗಿಸಲಾಗಿದೆ. ಕುಲಪತಿಗಳು ಕುಲಾಧಿಪತಿಗಳಿಗೆ ಉತ್ತರದಾಯಿಗಳು. ಹೀಗಾಗಿ, ಈ ಅರ್ಜಿಯ ವಿಚಾರಣೆಯನ್ನು ಮುಂದುವರಿಸುವ ಅವಶ್ಯಕತೆ ಕಂಡು ಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟು, ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿತು.

ನ್ಯಾ.ಡಾ.ಕೆ.ಭಕ್ತವತ್ಸಲ ನೇತೃತ್ವದ ಸಮಿತಿ ನೀಡಿದ್ದ ವರದಿಯನ್ನು ಆಧರಿಸಿ ವಿಶ್ರಾಂತ ಕುಲಪತಿಗಳಾದ ಪ್ರೊ.ರಂಗಪ್ಪ ಮತ್ತು ಕೃಷ್ಣನ್ ಹಾಗೂ ಇತರ ನಾಲ್ವರ ವಿರುದ್ಧ ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ ಅವರ ವಿರುದ್ಧ ಸರಕಾರ ಯಾವುದೇ ಕ್ರಮ ಜರುಗಿಸಿಲ್ಲ. ಆರೋಪ ಸಾಬೀತಾಗಿಲ್ಲ ಎಂದು ಹೇಳಿ ಇಬ್ಬರು ವಿಶ್ರಾಂತ ಕುಲಪತಿಗಳ ವಿರುದ್ಧ ಬಿ-ರಿಪೋರ್ಟ್ ಹಾಕಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News