ದೊರೆಸ್ವಾಮಿಯವರ ಸ್ವಾತಂತ್ರ್ಯ ಹೋರಾಟ ಅನುಮಾನಿಸುವುದು ನಾಚಿಕೆಗೇಡು: ಇತಿಹಾಸಕಾರ ಡಾ.ರಾಮಚಂದ್ರ ಗುಹಾ

Update: 2020-03-05 16:23 GMT

ಬೆಂಗಳೂರು, ಮಾ.4: ಎಚ್.ಎಸ್.ದೊರೆಸ್ವಾಮಿ ಅವರ ಸ್ವಾತಂತ್ರ್ಯ ಹೋರಾಟ ಕುರಿತು ಅನುಮಾನದ ರೀತಿಯಲ್ಲಿ ಪ್ರಶ್ನಿಸಿ, ಅವಹೇಳನ ಮಾಡುವುದು ನಾಚಿಕೆಗೇಡು ಎಂದು ಇತಿಹಾಸಕಾರ ಡಾ.ರಾಮಚಂದ್ರ ಗುಹಾ ಹೇಳಿದರು.

ಗುರುವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಎಐಡಿವೈಒ, ಎಐಡಿಎಸ್‌ಒ, ಎಐಎಂಎಸ್‌ಎಸ್ ಹಾಗೂ ಎಐಎಸ್‌ಇಸಿ ನೇತೃತ್ವದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಮೇಲಿನ ಅವಹೇಳನಕಾರಿ ಮಾತುಗಳನ್ನು ಖಂಡಿಸಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಬರೋಬ್ಬರಿ 8 ದಶಕಗಳ ಕಾಲ ತಮ್ಮ ಜೀವನವನ್ನೇ ಜನಪರ ಹೋರಾಟಕ್ಕಾಗಿ ದೊರೆಸ್ವಾಮಿ ಅವರು ಮೀಸಲಿಟ್ಟಿದ್ದಾರೆ. ಇಂತಹ ವ್ಯಕ್ತಿಗಳೇ ಅಪರೂಪವಾಗಿದ್ದು, ಇವರನ್ನು ಗುರಿಯಾಗಿಸಿಕೊಂಡು ಅವಹೇಳನ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

ದೊರೆಸ್ವಾಮಿ ಅವರನ್ನು 1981ರಿಂದಲೂ ಬಲ್ಲೇ ಎಂದ ಅವರು, ನಾಲ್ಕು ದಶಕಗಳಿಂದ ಅವರೊಂದಿಗೆ ಸಂಪರ್ಕ ಇದೆ. ಆದರೆ, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸಿರುವುದು ಖಂಡನೀಯ. ಇದರ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕ್ರಮಕೈಗೊಳ್ಳುತ್ತಾರೆ ಎನ್ನುವ ನಂಬಿಕೆ ಇತ್ತು. ಆದರೆ, ಎಲ್ಲರೂ ಅವರನ್ನು ಸಮರ್ಥನೆ ಮಾಡಕೊಳ್ಳುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

ಈ ಸಂದರ್ಭದಲ್ಲಿ ರೈತ ಮುಖಂಡ ಚಾಮರಸ ಪಾಟೀಲ್, ದಲಿತ ಮುಖಂಡ ಮಾವಳ್ಳಿ ಶಂಕರ್, ಎಐಡಿಎಸ್‌ಒ ಪ್ರಧಾನ ಕಾರ್ಯದರ್ಶಿ ಅಜಯ್ ಕಾಮತ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News