ಮಾದಕ ವಸ್ತು ಮಾರಾಟ ಆರೋಪ: ಕೇರಳ ಮೂಲದ ನಾಲ್ವರು ವಿದ್ಯಾರ್ಥಿಗಳ ಬಂಧನ

Update: 2020-03-06 12:48 GMT

ಬೆಂಗಳೂರು, ಫೆ.6: ಮಾದಕ ವಸ್ತು ಮಾರಾಟ ಆರೋಪದಡಿ ಕೇರಳ ಮೂಲದ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು 50 ಲಕ್ಷ ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಾಗಿರುವ ಹರಿಕೃಷ್ಣ (26) ಎಂಎಸ್ಸಿ ವಿದ್ಯಾರ್ಥಿಯಾದರೆ, ಮುಹಮ್ಮದ್ ಪಿ.(24) ಬಿಎಸ್ಸಿ ವಿದ್ಯಾರ್ಥಿ, ಹರಿಶಂಕರ್(26) ಮತ್ತು ರಾಹುಲ್(26) ಎಂಬುವರು ಮೆಕ್ಯಾನಿಕಲ್ ಇಂಜಿನಿಯರ್ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.

ಇಲ್ಲಿನ ಭಟ್ಟರಹಳ್ಳಿ ಸಿಗ್ನಲ್ ಹತ್ತಿರ ನಾಲ್ಕು ಮಂದಿ ಆಂಧ್ರಪ್ರದೇಶದ ವೈಜಾಕ್‌ನಿಂದ ಬಸ್‌ನಲ್ಲಿ ಮಾದಕ ವಸ್ತು, ಗಾಂಜಾ, ಎಲ್ಎಸ್‌ಡಿ ಸ್ಟ್ರಿಪ್ಸ್‌ಗಳನ್ನು ತಂದು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ.

ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೇರಳ ಮೂಲದ ನಾಲ್ವರನ್ನು ಬಂಧಿಸಿ 7 ಕೆಜಿ ಗಾಂಜಾ, 12 ಕೆಜಿ 300 ಗ್ರಾಂ ತೂಕದ ಹ್ಯಾಶಿಶ್ ಆಯಿಲ್, 3 ಸಾವಿರ ಹಣ, ಆ್ಯಕ್ಟೀವ್ ಸ್ಕೂಟರ್, 5 ಮೊಬೈಲ್ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಇವುಗಳ ಒಟ್ಟು ಮೌಲ್ಯ 50 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಈ ಸಂಬಂಧ ಕೆಆರ್‌ಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News