ಮಹಾಭಾರತವನ್ನು ಕೆಳಜಾತಿಯ ವಾಲ್ಮೀಕಿ ಬರೆದರು ಎಂದ ಶಾಸಕ ಯತ್ನಾಳ್ !

Update: 2020-03-06 15:01 GMT

ಬೆಂಗಳೂರು, ಮಾ.6: ಅಂಬೇಡ್ಕರ್ ತ್ರಿಕಾಲ ಜ್ಞಾನಿಯಾಗಿದ್ದರು. ದೇಶದ ಹಿಂದಿನ ಇತಿಹಾಸ ಹಾಗೂ ಭವಿಷ್ಯದ ಬಗ್ಗೆ ಸ್ಪಷ್ಟವಾದ ಕಲ್ಪನೆ ಹೊಂದಿದ್ದರು. ಅದರ ಪರಿಣಾಮವಾಗಿಯೇ ಅವರು ಇಂತಹ ಮಹತ್ವದ ಸಂವಿಧಾನ ರಚನೆ ಮಾಡಲು ಸಾಧ್ಯವಾಯಿತು ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಶುಕ್ರವಾರ ವಿಧಾನಸಭೆಯಲ್ಲಿ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ನಂತರ ಅಂಬೇಡ್ಕರ್ ಪ್ರಧಾನಿಯಾಗಬೇಕಿತ್ತು. ಆದರೆ, ಅವರಿಗೆ ಅವಕಾಶ ಸಿಕ್ಕಿಲ್ಲ ಎಂದರು.

ನಾನು ಹಿಂದೂ ಆಗಿ ಸಾಯುವುದಿಲ್ಲ ಎಂದು ಅವರು ಹೇಳಬೇಕಾದರೆ, ಅವರ ಮನಸ್ಸಿಗೆ ಎಷ್ಟು ನೋವಾಗಿರಬಹುದು. ಈ ಸಮಾಜ ಅವರನ್ನು ಯಾವ ರೀತಿ ನಡೆಸಿಕೊಂಡಿರಬಹುದು. ಒಂದು ವೇಳೆ ಅಂಬೇಡ್ಕರ್ ಬೌದ್ಧ ಧರ್ಮದ ಬದಲು ಇಸ್ಲಾಮ್ ಧರ್ಮ ಸ್ವೀಕರಿಸಿದ್ದರೆ ನಮ್ಮ ಪರಿಸ್ಥಿತಿ ಏನಾಗಿರುತ್ತಿತ್ತು ಎಂದು ಯತ್ನಾಳ್ ಪ್ರಶ್ನಿಸಿದರು.

ಭಾರತದ ವಿಭಜನೆಗೆ ಅಂಬೇಡ್ಕರ್ ವಿರೋಧ ವ್ಯಕ್ತಪಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರು ಸಂವಿಧಾನದ ಚೌಕಟ್ಟಿನಲ್ಲೆ ಸಿಎಎ ಜಾರಿಗೆ ತಂದಿದ್ದಾರೆ. ಆದರೆ, ಸಂವಿಧಾನಕ್ಕೆ ಅವಮಾನ ಆಗುವ ರೀತಿಯಲ್ಲಿ ವ್ಯವಸ್ಥಿತ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು.

ಸಂವಿಧಾನವನ್ನು ರಚನೆ ಮಾಡಲು ಅಂದು 65 ಲಕ್ಷ ರೂ.ಖರ್ಚಾಗಿತ್ತು. ಮೂರು ವರ್ಷ ಸಮಯ ಬೇಕಾಯಿತು. ಸಂವಿಧಾನ ರಚನೆ ವೇಳೆ ಅಂಬೇಡ್ಕರ್‌ಗೆ ಸಾಕಷ್ಟು ಕಿರುಕುಳ ನೀಡಲಾಗಿತ್ತು. ರಾಷ್ಟ್ರನಾಯಕರಾಗಿದ್ದ ಅಂಬೇಡ್ಕರ್‌ರನ್ನು ದಲಿತರಿಗೆ ಸೀಮಿತ ಮಾಡಿದ್ದು ದುರ್ದೈವ. ಅವರೊಬ್ಬ ಸಾಮಾಜಿಕ ಕ್ರಾಂತಿಯ ಸೂರ್ಯ ಎಂದು ಯತ್ನಾಳ್ ಬಣ್ಣಿಸಿದರು.

ನಮ್ಮ ದೇಶದಲ್ಲಿ ಇಬ್ಬರು ಗಾಂಧಿಗಳಿಗೆ ಮಾತ್ರ ಮಹತ್ವ ನೀಡಲಾಗಿದೆ. ಒಂದು ಗಾಂಧೀಜಿ, ಇನ್ನೊಂದು ಈಗಿನ ಗಾಂಧಿ ಪರಿವಾರ. ಉಳಿದೆಲ್ಲಾ ಸ್ವಾತಂತ್ರ ಹೋರಾಟಗಾರರಿಗೆ ಮಹತ್ವವೇ ಸಿಕ್ಕಿಲ್ಲ. ಕೆಲವರು ವೀರ ಸಾವರ್ಕರ್ ಬಗ್ಗೆ ಏನೇನೊ ಹೇಳುತ್ತಾರೆ, ಅವರು 14 ವರ್ಷ ಕಾಲಪಾನಿ ಶಿಕ್ಷೆಗೆ ಗುರಿಯಾಗಿದ್ದರು. ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದ್ದರು ಎಂದು ಅವರು ಹೇಳಿದರು.

ಪೇಚಿಗೆ ಸಿಲುಕಿದ ಯತ್ನಾಳ್

ಮಹಾಭಾರತವನ್ನು ರಚಿಸಿದ್ದು ವಾಲ್ಮೀಕಿ ಎಂದು ಹೇಳುವ ಮೂಲಕ ವಿಧಾನಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಕೆಲಕಾಲ ಪೇಚಿಗೆ ಸಿಲುಕಿದರು. ಆನಂತರ ತಮ್ಮ ತಪ್ಪನ್ನು ಸರಿಪಡಿಸಿಕೊಂಡು ರಾಮಾಯಣ ರಚಿಸಿದ್ದು ವಾಲ್ಮೀಕಿ, ಮಹಾಭಾರತ ರಚಿಸಿದ್ದು ವ್ಯಾಸರು ಎಂದರು.

1954ರ ಅಕ್ಟೋಬರ್ 3ರಂದು ಆಕಾಶವಾಣಿಯಲ್ಲಿ ಮಾತನಾಡಿದ ಅಂಬೇಡ್ಕರ್ ‘ಹಿಂದೂಗಳಿಗೆ ವೇದಗಳು ಬೇಕಾಗಿತ್ತು, ಅದನ್ನು ವ್ಯಾಸರಿಂದ ಬರೆಸಿದರು. ಮಹಾಭಾರತವನ್ನು ಕೆಳಜಾತಿಯವರಾದ ವಾಲ್ಮೀಕಿ ಬರೆದರು, ಇವರಿಗೆ ಸಂವಿಧಾನ ಬೇಕಾಗಿತ್ತು. ಅದಕ್ಕಾಗಿ ನನ್ನನ್ನು ಕರೆದರು’ ಎಂದು ಹೇಳಿದ್ದರೆಂದು ಯತ್ನಾಳ್ ತಿಳಿಸಿದರು.

ಈ ವೇಳೆ ಕೆಲವರು ಮಹಾಭಾರತ ಬರೆದದ್ದು ವಾಲ್ಮೀಕಿ ಅಲ್ಲ ಎಂದು ಗಮನ ಸೆಳೆದರು. ಆಗ ತಮ್ಮ ತಪ್ಪನ್ನು ಸರಿಪಡಿಸಿಕೊಂಡ ಯತ್ನಾಳ್, ರಾಮಾಯಣವನ್ನು ವಾಲ್ಮೀಕಿ ರಚಿಸಿದರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News