ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಸಿನಿಮಾ ವಿತರಕ ಬಂಧನ
ಬೆಂಗಳೂರು, ಮಾ.6: ಆಸ್ಟ್ರೇಲಿಯಾದಲ್ಲಿ ಪರಿಚಯವಾದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಕನ್ನಡ ಚಿತ್ರಗಳ ವಿದೇಶಿ ವಿತರಕನನ್ನು ಇಲ್ಲಿನ ನಂದಿನಿ ಲೇಔಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಶವಂತಪುರದ ಜೆಪಿ ಪಾರ್ಕ್ ನಿವಾಸಿ ರೂಪೇಶ್(33) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಕನ್ನಡ ಮತ್ತು ದಕ್ಷಿಣ ಭಾರತದ ಭಾಷೆಗಳ ಚಲನಚಿತ್ರಗಳ ವಿತರಕನಾಗಿದ್ದ ರೂಪೇಶ್, ಕನ್ನಡ ಯಶಸ್ವಿ ರಂಗಿ ತರಂಗ, ಅವನೇ ಶ್ರೀಮನ್ನಾರಾಯಣ ಇನ್ನಿತರ ಚಿತ್ರಗಳನ್ನು ವಿತರಣೆ ಮಾಡಿದ್ದ ಎಂದು ತಿಳಿದುಬಂದಿದೆ.
ರೂಪೇಶ್, ಚಲನಚಿತ್ರ ವಿತರಣೆ ವೇಳೆ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಪತಿ, ಮಕ್ಕಳೊಂದಿಗೆ ವಾಸವಾಗಿದ್ದ. ಈ ಸಂದರ್ಭದಲ್ಲಿ ಬೆಂಗಳೂರಿನ ಮಹಿಳೆಯೊಬ್ಬರಿಗೆ ಹೊಟೇಲ್ಲೊಂದರಲ್ಲಿ ಪರಿಚಯವಾಗಿದ್ದ. ಇಬ್ಬರು ಒಂದೇ ರಾಜ್ಯದವರಾಗಿದ್ದರಿಂದ ಆತ್ಮೀಯತೆ ಬೆಳೆದಿತ್ತು. ಆಕೆಯೊಂದಿಗೆ ಕೆಲವು ಫೋಟೊಗಳನ್ನು ತೆಗೆದುಕೊಂಡು ಅವುಗಳನ್ನಿಟ್ಟುಕೊಂಡು ಬೆದರಿಸಿ ಲೈಂಗಿಕವಾಗಿ ಸಹಕರಿಸುವಂತೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಬಳಿಕ ಮಹಿಳೆಯಿಂದ 6 ಲಕ್ಷ ರೂ.ವಸೂಲು ಮಾಡಿದ್ದ ಎಂದು ಆರೋಪಿಸಿ ಮಹಿಳೆ ನೀಡಿದ ದೂರು ದಾಖಲಿಸಿಕೊಂಡ ನಂದಿನಿ ಲೇಔಟ್ ಪೊಲೀಸರು, ರೂಪೇಶ್ ಅನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.