ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಬಸ್‌ಪಾಸ್ ಗೆ ಚಿಂತನೆ: ಸಾರಿಗೆ ಸಚಿವ ಲಕ್ಷ್ಮಣ ಸವದಿ
ಬೆಂಗಳೂರು, ಮಾ.6: ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್ ವಿತರಿಸುವ ಸಂಬಂಧ ಮುಂದಿನ ದಿನಗಳಲ್ಲಿ ಗಂಭೀರವಾಗಿ ಚಿಂತನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಶುಕ್ರವಾರ ವಿಧಾನಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮರಿತಿಬ್ಬೇಗೌಡ ಕೇಳಿದ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಸಾರಿಗೆ ಇಲಾಖೆಗೆ ಸರಕಾರದಿಂದ ಸಾವಿರಾರು ಕೋಟಿ ಸಾಲವಿದೆ. ಈ ಹಿನ್ನೆಲೆಯಲ್ಲಿ ಎಲ್ಲವನ್ನು ನಿಗಮದಿಂದ ಮಾಡಬೇಕು ಎಂದರೆ ಕಷ್ಟವಾಗುತ್ತದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಪಾಸ್ ವಿತರಿಸುವ ಸಂಬಂಧ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಕೆಎರ್ಸ್ಸಾಟಿಸಿ, ನಗರ ಸಾರಿಗೆ ಹಾಗೂ ಬಿಎಂಟಿಸಿ ಬಸ್‌ಗಳಲ್ಲಿ ರಿಯಾಯಿತಿ ಬಸ್‌ಪಾಸ್‌ಗಳನ್ನು ನೀಡಲಾಗುತ್ತಿದೆ. ಅಲ್ಲದೆ, ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲ ತರಗತಿಯ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ನೀಡಲಾಗುತ್ತಿದೆ ಎಂದು ಸವದಿ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮರಿತಿಬ್ಬೇಗೌಡ, ಬಸವರಾಜ ಹೊರಟ್ಟಿ ಹಾಗೂ ಶ್ರೀಕಂಠೇಗೌಡ ಎಲ್ಲರಿಗೂ ಉಚಿತ ಪಾಸ್ ನೀಡುವಂತೆ ಮನವಿ ಮಾಡಿದರು.
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕೆಎಸ್ಸಾರ್ಟಿಸಿಯಲ್ಲಿ 6,06,464, ಬಿಎಂಟಿಸಿಯಲ್ಲಿ 3,44,718, ವಾಕರಸಾಸಂಯಲ್ಲಿ 4,80,885 ಹಾಗೂ ಈಕರಸಾಸಂಯಲ್ಲಿ 3,73,807 ವಿದ್ಯಾರ್ಥಿಗಳಿಗೆ ಪಾಸ್ ವಿತರಿಸಲಾಗಿದೆ ಎಂದು ಅವರು ವಿವರಿಸಿದರು.