×
Ad

ಪ್ರವಾಹ ಪೀಡಿತರಿಗೆ ಪರಿಹಾರ ಒದಗಿಸುವಲ್ಲಿ ಸರಕಾರ ಸಂಪೂರ್ಣ ವಿಫಲ: ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ

Update: 2020-03-06 21:55 IST

ಬೆಂಗಳೂರು, ಮಾ.6: ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾದ ಪ್ರವಾಹಪೀಡಿತ ಉತ್ತರ ಕರ್ನಾಟಕ ಪ್ರದೇಶಗಳಲ್ಲಿನ ಸಂತ್ರಸ್ತರಿಗೆ ಇದುವರೆಗೂ ಸಮರ್ಪಕವಾಗಿ ಪರಿಹಾರ ಒದಗಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ಆರೋಪಿಸಿದರು.

ಶುಕ್ರವಾರ ವಿಧಾನಪರಿಷತ್‌ನಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ನೆರೆ ಹಾವಳಿಯನ್ನು ನಿಭಾಯಿಸುವಲ್ಲಿ ಸರಕಾರ ಪ್ರಯತ್ನ ಮಾಡಿದೆ. ಆದರೆ, ಇದೇ ವೇಳೆ ದೊಡ್ಡ ಪ್ರಮಾಣದಲ್ಲಿ ಲೋಪವಾಗಿದೆ ಎಂದು ದೂರಿದರು.

ರಾಜ್ಯ ಹಿಂದೆಂದೂ ಕಾಣದಂತಹ ರೀತಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹದಿಂದ ಜನರು ಮನೆ, ಭೂಮಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಆದರೆ, ಅಧಿಕಾರಿಗಳು ಸರಕಾರದಿಂದ ಅನುದಾನ ಬಿಡುಗಡೆಯಾಗಿದ್ದರೂ, ಅದನ್ನು ಫಲಾನುಭವಿಗಳಿಗೆ ತಲುಪಿಸಿಲ್ಲ. ಹೀಗಾಗಿ, ಅನುದಾನ ನೀಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕೆಲವು ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಹಣ ಬಿಡುಗಡೆ ಮಾಡಿದ್ದಾರೆ. ಇದರಿಂದ ನೈಜ ಫಲಾನುಭವಿಗೆ ಪರಿಹಾರವೇ ಸಿಕ್ಕಿಲ್ಲ. ನೆರೆ ಪರಿಹಾರದಲ್ಲಿ ಆಗಿರುವ ಲೋಪವನ್ನು ಗೃಹ ಸಚಿವ ಬೊಮ್ಮಾಯಿ, ವಸತಿ ಸಚಿವ ಸೋಮಣ್ಣ ಒಪ್ಪಿಕೊಂಡಿದ್ದಾರೆ. ಹೀಗಾಗಿ, ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ರಾಜ್ಯ ಸರಕಾರ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ಚಿಕ್ಕಮಗಳೂರಿನಲ್ಲಿ ಅಂಗವಿಕಲ ಮಹಿಳೆಯೊಬ್ಬರು ಪರಿಹಾರ ನೀಡುವಂತೆ ಅಲೆದು ಅಲೆದು ಸುಸ್ತಾಗಿ, ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಆಗಿದೆ. ಈಗಲೂ ಇಲಾಖೆಯ ಸುತ್ತಲೂ ಹಲವಾರು ಜನರು ಸುತ್ತಾಡುತ್ತಿದ್ದಾರೆ. ಸರಕಾರಕ್ಕೆ ಇಷ್ಟೂ ತಿಳಿಯುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಶಾಸಕರು ತಮ್ಮ ಕ್ಷೇತ್ರದ 3 ಶಾಲೆಗಳನ್ನು ದತ್ತು ಪಡೆಯುವಂತೆ ಸಿಎಂ ಹೇಳಿದ್ದಾರೆ. ಆದರೆ, ಶಾಸಕರ ನಿಧಿ ನೋಡಿಯೇ 10 ತಿಂಗಳು ಕಳೆದಿದೆ. ಇನ್ನು, ಅತಿಥಿ ಉಪನ್ಯಾಸಕರಿಗೆ, ಶಿಕ್ಷಕರಿಗೆ ವೇತನವನ್ನೇ ನೀಡಿಲ್ಲ. ಶಾಸಕರ ಆಪ್ತ ಕಾರ್ಯದರ್ಶಿಗಳಿಗೆ ವೇತನ ನೀಡಲಾಗದಂತಹ ದುಸ್ಥಿತಿಯಲ್ಲಿ ಇದ್ದೇವೆ. ಇನ್ನು ಸಾಮಾನ್ಯರ ಪರಿಸ್ಥಿತಿ ಹೇಗೆ ಎಂದರು.

ಶ್ರೀಕಂಠೇಗೌಡ ಮಾತನಾಡುವ ವೇಳೆ ಮಧ್ಯಪ್ರವೇಶಿಸಿದ ಡಿಸಿಎಂ ಗೋವಿಂದ ಕಾರಜೋಳ, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಹಾಗೂ ಪುನರ್ ನಿರ್ಮಾಣಕ್ಕಾಗಿ ಬಜೆಟ್‌ನಲ್ಲಿ 10 ಸಾವಿರ ಕೋಟಿ ಹೆಚ್ಚುವರಿಯಾಗಿ ಸೇರಿಸಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

2020-21 ನೇ ಸಾಲಿನಿಂದ ಒಟ್ಟು ಮೂರು ವರ್ಷದ ಅವಧಿಯಲ್ಲಿ 1.32 ಲಕ್ಷ ಸಂತ್ರಸ್ತರಿಗೆ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News