ವಿಧಾನ ಪರಿಷತ್‌ನಲ್ಲಿ ಖಾಸಗಿ ವಿಧೇಯಕ ಮಂಡನೆ

Update: 2020-03-06 16:56 GMT

ಬೆಂಗಳೂರು, ಮಾ.6: ಕರ್ನಾಟಕ ಅಸಲು ಹಣಕ್ಕಿಂತ ಹೆಚ್ಚು ಬಡ್ಡಿ ವಿಧಿಸುವಿಕೆ ನಿಷೇಧ ವಿಧೇಯಕ-2018 ಎಂಬ ಖಾಸಗಿ ವಿಧೇಯಕವನ್ನು ಪರಿಷತ್ ಸದಸ್ಯ ಶರಣಪ್ಪ ಮಟ್ಟೂರ್ ವಿಧಾನಪರಿಷತ್‌ನಲ್ಲಿಂದು ಮಂಡಿಸಿದರು.

ಶುಕ್ರವಾರ ವಿಧಾನಪರಿಷತ್‌ನಲ್ಲಿ ಶೂನ್ಯವೇಳೆಯ ಬಳಿಕ ವಿಧೇಯಕ ಮಂಡಿಸಿದ ಅವರು, ರೈತರಿಗೆ ಅತ್ಯಂತ ಅನುಕೂಲಕರವಾಗಿರುವ ವಿಧೇಯಕ ಇದಾಗಿದ್ದು, ಸರಕಾರ ಹಾಗೂ ಎಲ್ಲ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸುವಂತೆ ಕೋರಿದರು.

ವಿಧೇಯಕದ ಉದ್ದೇಶದ ಕುರಿತು ವಿವರಿಸಿದ ಅವರು, ಈಗಾಗಲೇ ಸಾಲ ಹಾಗೂ ಬಡ್ಡಿ ಹಣಕ್ಕೆ ಸಂಬಂಧಿಸಿದಂತೆ ಹಲವು ವಿಧೇಯಕಗಳು ಜಾರಿಯಾಗಿವೆ. ಆದರೆ, ನಿರ್ದಿಷ್ಟವಾಗಿ ರೈತರು, ಕೃಷಿಕರನ್ನು ಉದ್ದೇಶಿಸಿ ಯಾವುದೇ ವಿಧೇಯಕವಿಲ್ಲ. ಕೃಷಿಕರು ತಮ್ಮ ಅತ್ಯಾವಶ್ಯಕ ಅಗತ್ಯತೆಗಳಿಗೆ ಸಾಲ ಮಾಡುತ್ತಾರೆ. ಶ್ರೀಮಂತರು ಸಹಾಯ ಮಾಡುವ ನೆಪದಲ್ಲಿ ಅವರ ರಕ್ತವನ್ನು ಹೀರಿ ಅಂತಃಸತ್ವ ಹುಡುಗಿಸುತ್ತಾರೆ. ಸಾಲ ನೀಡುವುದು ರಾಜ್ಯದ ಕಲ್ಯಾಣಕ್ಕೆ ನ್ಯಾಯಯುತ ಹಾಗೂ ಸಾಧಕವಾಗಿದೆ ಎಂದು ತೋರಿದರೂ, ಅದೇ ಸಂದರ್ಭದಲ್ಲಿ ಅದು ಸಾಲ ಪಡೆದವನ ದುರದೃಷ್ಟವೂ ಆಗಿದೆ. ಅಸಲಿಗಿಂತ ಹೆಚ್ಚು ಬಡ್ಡಿ ವಿಧಿಸುವ ಮೂಲಕ ಸಾಲಗಾರನ ಕನಸೆಲ್ಲವೂ ನುಚ್ಚು ನೂರಾಗುತ್ತದೆ. ಹೀಗಾಗಿ, ಅಸಲಿಗಿಂತ ಹೆಚ್ಚು ಬಡ್ಡಿ ನಿಷೇಧಿಸುವ ಉದ್ದೇಶವನ್ನು ವಿಧೇಯಕ ಹೊಂದಿದೆ ಎಂದು ವಿವರಿಸಿದರು.

ದುಬಾರಿ ಬಡ್ಡಿ ವಿಧಿಸಿ ಸಾಲ ನೀಡುವುದನ್ನು ಮತ್ತು ಬಾಕಿ ಹಣದ ಮೇಲಿನ ಬಡ್ಡಿಯ ನೆಪದಲ್ಲಿ ಹಣವನ್ನು ವಸೂಲಿ ಮಾಡುವ ಇತರ ವಿಧಾನಗಳನ್ನು ನಿರ್ಬಂಧಿಸುವುದು. ಹಾಲಿಯಿರುವ ಕಾನೂನಿನಲ್ಲಿನ ಕೆಲವು ನ್ಯೂನತೆಗಳನ್ನು ಸರಿಪಡಿಸಿ ಅಂಥ ಅನಿಷ್ಟ ವ್ಯವಸ್ಥೆಯನ್ನು ತೊಡೆದು ಹಾಕುವುದು. ಕೃಷಿಕರ ಸಾಲದ ಹೊರೆಗಳಿಂದ ಮುಕ್ತರನ್ನಾಗಿಸುವುದು. ಆತ್ಮಹತ್ಯೆಗಳನ್ನು ತಪ್ಪಿಸುವುದು ಸೇರಿದಂತೆ ಹಲವಾರು ಅಂಶಗಳನ್ನು ವಿಧೇಯಕ ಒಳಗೊಂಡಿದ್ದು, ಅದನ್ನು ಅವರು ವಿವರಿಸಿದರು.

ವಿಧೇಯಕ ಮಂಡಿಸಿದ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಸಾಲದ ಮೇಲಿನ ಅಧಿಕ ಬಡ್ಡಿ ಪಡೆಯುವುದರ ವಿರುದ್ಧ ಈಗಾಗಲೇ ಕಾನೂನು ಇದೆ. ಆದರೆ, ಅದರ ನಡುವೆ ಮತ್ತೊಂದು ಕಾಯಿದೆಯ ಅಗತ್ಯವೇನಿದೆ. ಇದನ್ನು ವಾಪಸ್ಸು ಪಡೆಯಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಒಪ್ಪದ ಶರಣಪ್ಪ ಮಟ್ಟೂರ್, ಕಾನೂನು ಇದ್ದರೂ ಸಹ ಇಂದಿಗೂ ರೈತರ ಆತ್ಮಹತ್ಯೆಗಳು ಯಾಕೆ ನಿಂತಿಲ್ಲ. ಹೀಗಾಗಿ, ರೈತರ ಪರವಾಗಿರುವ ಕಾಯ್ದೆಯೊಂದನ್ನು ರೂಪಿಸಲು ಮುಂದಾಗಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಾಲ ಪಡೆದವರು ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದಾರೆ ಎಂದು ದೂರು ನೀಡದೆಯೇ ಆತ್ಮಹತ್ಯೆಗೆ ಮುಂದಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಅಧಿಕ ಬಡ್ಡಿ ವಸೂಲಿ ಮಾಡುವವರ ವಿರುದ್ಧ ನ್ಯಾಯಾಲಯಕ್ಕೆ ಹೋಗಬೇಕು. ಅಲ್ಲದೆ, ಈ ಕಾಯ್ದೆಯನ್ನು ಎಲ್ಲರೂ ಬಳಸಿಕೊಳ್ಳಲು ಅವಕಾಶವಿದೆ. ನೀವು ಯಾಕೆ ಇದನ್ನು ಸೀಮಿತಗೊಳಿಸುತ್ತಿದ್ದೀರಾ ಎಂದ ಸಚಿವ ಮಾಧುಸ್ವಾಮಿ, ನಾವು ಈ ಅಧಿನಿಯಮವನ್ನು ಅನುಮೋದಿಸಲ್ಲ. ದಯವಿಟ್ಟು ವಾಪಸ್ಸು ಪಡೆಯಬೇಕು ಇಲ್ಲ ಸಭಾಪತಿಗಳು ತಿರಸ್ಕರಿಸಬೇಕು ಎಂದರು. ಸಭಾಪತಿ ಯಾವುದಕ್ಕೂ ಉತ್ತರಿಸದೆಯೇ ಸದನವನ್ನು ಸೋಮವಾರಕ್ಕೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News