ಮೈಸೂರು ದಸರಾ ರೀತಿಯಲ್ಲೇ ರಾಜ್ಯದಲ್ಲಿ ಮೂರು ಅಂತರ್‌ರಾಷ್ಟ್ರೀಯ ಉತ್ಸವ: ಸಿ.ಟಿ.ರವಿ
ಬೆಂಗಳೂರು, ಮಾ.6: ಮೈಸೂರು ದಸರಾ ಮಾದರಿಯಲ್ಲಿಯೇ ಮೂರು ಅಂತರ್‌ರಾಷ್ಟ್ರೀಯ ಉತ್ಸವಗಳನ್ನು ಕರ್ನಾಟಕದಲ್ಲಿ ಆಚರಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಶುಕ್ರವಾರ ವಿಧಾನಪರಿಷತ್ತಿನಲ್ಲಿ ಅಲ್ಲಂ ವೀರಭದ್ರಪ್ಪ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಅಂತರ್‌ರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಈ ಉತ್ಸವಗಳನ್ನು ಮಾಡಲಾಗುತ್ತಿದೆ. ದಸರಾ ಜತೆಗೆ ಬೆಂಗಳೂರು ಹಬ್ಬ ಹಾಗೂ ಹಂಪಿ ಉತ್ಸವವನ್ನು ಆಚರಿಸಲಾಗುವುದು ಎಂದರು.
ಜ.10 ರಂದು ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕ ನಡೆದ ದಿನ ಎಂಬ ಹಿನ್ನೆಲೆಯಲ್ಲಿ ಅಂದಿನಿಂದ ಮೂರು ದಿನಗಳ ಕಾಲ ಹಂಪಿ ಉತ್ಸವವನ್ನು ಆಚರಿಸಲಾಗಿತ್ತು. ಇದಕ್ಕೆ ಸರಕಾರದಿಂದಲೂ ಅನುದಾನ ನೀಡಲಾಗಿದೆ. ಪ್ರತಿ ವರ್ಷ ಇಲಾಖೆಯ ಕ್ರಿಯಾ ಯೋಜನೆಯಲ್ಲಿ ಉತ್ಸವ ಆಚರಣೆಗೆ ಅನುದಾನ ನಿಗದಿ ಮಾಡಲಾಗಿದೆ. ಆಯಾ ವರ್ಷದ ಕಾರ್ಯಕ್ರಮದ ಬೇಡಿಕೆಯನ್ನಾಧರಿಸಿ ಹೆಚ್ಚುವರಿ ಅನುದಾನ ನೀಡಲಾಗುವುದು ಎಂದು ಹೇಳಿದರು.
ಮುಂದಿನ ವರ್ಷದಿಂದ ರಾಷ್ಟ್ರೀಯ ಉತ್ಸವಗಳ ಜತೆಗೆ 9 ರಾಷ್ಟ್ರೀಯ ಉತ್ಸವಗಳನ್ನು ಆಚರಿಸಲು ನಿರ್ಧರಿಸಲಾಗಿದೆ. ಕದಂಬ, ಚಾಲುಕ್ಯರು, ಹೊಯ್ಸಳರು ಸೇರಿದಂತೆ ಹಲವಾರು ರಾಜ, ಮಹಾರಾಜರು ನೀಡಿದ ಒಳ್ಳೆಯ ಆಡಳಿತವನ್ನಾಧರಿಸಿ ಯಾವ ಉತ್ಸವ ಆಚರಿಸಬೇಕು ಎಂದು ನಿರ್ಧರಿಸಲಾಗುವುದು ಎಂದು ನುಡಿದರು.
ರಾಜ್ಯದಲ್ಲಿರುವ ಸ್ಮಾರಕಗಳ ಸಂರಕ್ಷಣೆ ಹಾಗೂ ಪುನರುಜ್ಜೀವನಕ್ಕಾಗಿ ಬಜೆಟ್‌ನಲ್ಲಿ ಅನುದಾನವನ್ನು ಮೀಸಲಿಡಲಾಗಿದೆ. ಅಲ್ಲದೆ, ಈ ಕುರಿತು ಕೇಂದ್ರ ಸರಕಾರಕ್ಕೂ ಮನವಿ ಸಲ್ಲಿಸುವ ಮೂಲಕ ಅನುದಾನ ನೀಡುವಂತೆ ಕೋರುತ್ತೇವೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.