ಮೀಸಲಾತಿಯು ನಿರಂತರವಾಗಿರಬೇಕೇ? ನಿರ್ಧರಿಸುವವರು ಯಾರು?

Update: 2020-03-06 18:06 GMT

ಭಾಗ-3

ಅನುಚ್ಛೇದದ 16(4) ಪ್ರಕಾರ, ಸರಕಾರಿ ಸೇವೆಗಳಲ್ಲಿ ಹಿಂದುಳಿದ ವರ್ಗಗಳಿಗೆ ನೀಡಲಾಗಿರುವ ಮೀಸಲಾತಿ ಸೌಲಭ್ಯಕ್ಕೆ ಕಾಲಮಿತಿಯಿಲ್ಲ. ಹಾಗಾದರೆ, ಈ ಮೀಸಲಾತಿಯು ನಿರಂತರವೇ? ಖಂಡಿತವಾಗಿಯೂ ಇಲ್ಲ! ಅನುಚ್ಛೇದ 16(4) ಪ್ರಕಾರ, ಸರಕಾರವು ತನ್ನ ದೃಷ್ಟಿಯಲ್ಲಿ ಸರಕಾರಿ ಸೇವೆಗಳಲ್ಲಿ ಸೂಕ್ತ ಪ್ರಾತಿನಿಧ್ಯವನ್ನು ಹೊಂದಿರದ ಯಾವುದೇ ಹಿಂದುಳಿದ ವರ್ಗದ ಪೌರರಿಗೆ ಮೀಸಲಾತಿಯನ್ನು ಕಲ್ಪಿಸಬಹುದು. ಎಸ್ಸಿ/ಎಸ್ಟಿಗಳು 1911ರಿಂದಲೇ, ಪ್ರತ್ಯೇಕವಾಗಿ ಗುರುತಿಸಲ್ಪಟ್ಟು ತಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತಲೇ ಬಂದಿದ್ದು, ಸ್ವತಂತ್ರ ಭಾರತದಲ್ಲೂ ಸಹ ಅವರ ಹಕ್ಕುಗಳನ್ನು ಪಡೆಯುವುದರಲ್ಲಿ ಅವರಿಗೆ ತ್ರಾಸವಾಗಲಿಲ್ಲ. ಆದರೆ ಇತರ ಹಿಂದುಳಿದ ವರ್ಗಗಳು ಯಾರು ಎಂಬುದೇ ಗುರುತಿಸಲ್ಪಟ್ಟಿರಲಿಲ್ಲ. ಆದಕಾರಣ ತಮಗೂ ಮೀಸಲಾತಿ ಸೌಲಭ್ಯವನ್ನು ನೀಡುವಂತೆ ಮನವಿ ಮಾಡಿಕೊಂಡ ಇತರ ಹಿಂದುಳಿದ ವರ್ಗಗಳ ಸಲುವಾಗಿ ಬಾಬಾಸಾಹೇಬರು ಅನುಚ್ಛೇದ 340ನ್ನು ಅಳವಡಿಸಿ, ಅವರನ್ನು ಗುರುತಿಸಿ, ಅವರ ಸ್ಥಿತಿಗತಿಗಳನ್ನು ಸುಧಾರಿಸುವ ಸಲುವಾಗಿ ಆಯೋಗವೊಂದನ್ನು ನೇಮಿಸುವ ವ್ಯವಸ್ಥೆಯನ್ನು ಕಲ್ಪಿಸಿದರು. ಈ ಅನುಚ್ಛೇದದ ಅನುಸಾರ ನೇಮಿಸಲ್ಪಟ್ಟ ಮಂಡಲ್ ಆಯೋಗವು ಇತರ ಹಿಂದುಳಿದ ವರ್ಗಗಳಿಗೆ ಶೇ. 27ರಷ್ಟು ಮೀಸಲಾತಿಯನ್ನು ಸಾರ್ವಜನಿಕ ಸೇವೆಗಳಲ್ಲಿ ನಿಗದಿ ಮಾಡಿತು. ಹೀಗೆ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳಿಗೆ ಕ್ರಮವಾಗಿ ಶೇ. 15, ಶೇ. 7.5 ಮತ್ತು ಶೇ. 27ರಂತೆ ಒಟ್ಟಾರೆ ಶೇ. 49.5ರಷ್ಟು ಪ್ರಮಾಣದ ಸರಕಾರಿ ನೌಕರಿಗಳನ್ನು 1992ರಿಂದ ಮೀಸಲಿರಿಸಲಾಗಿದೆ.

ಅನುಚ್ಛೇದ 16(4)ರ ಪ್ರಕಾರ, ಉದ್ಯೋಗ ಮೀಸಲಾತಿಗೆ ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿಲ್ಲ. ಆದರೆ ಈ ಮೀಸಲಾತಿಯು ತನ್ನಷ್ಟಕ್ಕೆ ತಾನೇ ಕೊನೆಯಾಗುವಂತಹ ಸಾಧ್ಯತೆಗಳನ್ನು ತಿಳಿಸಲಾಗಿದೆ. ಎಲ್ಲಿಯತನಕ ಯಾವುದೇ ಹಿಂದುಳಿದ ವರ್ಗಕ್ಕೆ ಸಾರ್ವಜನಿಕ ಸರಕಾರಿ ಸೇವೆಗಳಲ್ಲಿ ಸೂಕ್ತ ಪ್ರಾತಿನಿಧ್ಯವು ದೊರಕಿರುವುದಿಲ್ಲವೋ ಅಲ್ಲಿಯತನಕ ಈ ಮೀಸಲಾತಿಯು ಅನಿವಾರ್ಯವಾಗಿರುತ್ತದೆ. ಅಂದರೆ, ಎಲ್ಲಾ ಹಿಂದುಳಿದ ವರ್ಗಗಳಿಗೂ ತಮ್ಮ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಸಮನಾದ ಪಾಲು ದೊರಕುವತನಕ ಈ ಮೀಸಲಾತಿಯು ಕೊನೆಯಾಗುವುದಿಲ್ಲ, ಹಾಗಾದರೆ, ಎಲ್ಲಿಯತನಕ ಹಿಂದುಳಿದ ವರ್ಗಗಳಿಗೆ ತಮ್ಮ ತಮ್ಮ ಪಾಲುದೊರಕುವುದಿಲ್ಲ? ಜಾತುರ್ವರ್ಣ್ಯ ವ್ಯವಸ್ಥೆಯಲ್ಲಿನ ಹಳೆಯ ಮೀಸಲಾತಿಯ ಪ್ರಕಾರ ಹೆಚ್ಚುವರಿ ಪಾಲನ್ನು ಪಡೆದಿರುವ ಮುಂದುವರಿದ ವರ್ಗಗಳು ಎಲ್ಲಿಯತನಕ ತಮ್ಮ ಜನಸಂಖ್ಯೆಯ ಪ್ರಮಾಣಕ್ಕಿಂತ ಹೆಚ್ಚಿಗೆ ಪಡೆದಿರುವುದನ್ನು ಬಿಟ್ಟುಕೊಡುವುದಿಲ್ಲವೋ ಅಲ್ಲಿಯತನಕ ಈ ಮೀಸಲಾತಿ ಸೌಲಭ್ಯವು ಇರಲೇಬೇಕಾಗುತ್ತದೆ! ಅಂದರೆ, ಚಾತುರ್ವರ್ಣ್ಯ ಧರ್ಮದ ಪ್ರಭಾವವು ಎಲ್ಲಿಯತನಕ ಪ್ರಭಾವಶಾಲಿಯಾಗಿರುತ್ತದೋ ಅಲ್ಲಿಯತನಕ ಹೊಸ ಮೀಸಲಾತಿ ವ್ಯವಸ್ಥೆಯು ಜಾರಿಯಲ್ಲಿರಬೇಕಾಗುತ್ತದೆ. ಹಳೆಯ ಮೀಸಲಾತಿ ನೀತಿಯಿಂದ ಆಗಿರುವ ಅನ್ಯಾಯವನ್ನು ಸರಿಗಟ್ಟಲೆಂದೇ ಜಾರಿಗೆ ಬಂದಿರುವ ಹೊಸ ಮೀಸಲಾತಿಯ ಅಸ್ತಿತ್ವವು ಹಳೆಯ ಮೀಸಲಾತಿಯ ಅಂತ್ಯವನ್ನು ಅವಲಂಬಿಸಿದೆ!

ಈಗ ಹೇಳಿ, ಮೀಸಲಾತಿಯನ್ನು ಕೊನೆಗೊಳಿಸಬೇಕಾದವರು ಯಾರು? ಮೀಸಲಾತಿ ನೀತಿಗೆ ಜೋತುಬಿದ್ದಿರುವವರು ಯಾರು? ಚಾತುರ್ವರ್ಣ್ಯ ವ್ಯವಸ್ಥೆಯ ಹಳೆಯ ಮೀಸಲಾತಿಯಿಂದ ಆಗಿರುವ ಅಸಮಾನತೆಯನ್ನು, ಇಂದಿನ ಸಂವಿಧಾನದ ಆಶಯದಂತೆ ತೊಡೆದು ಹಾಕಬೇಕಾದ ಅಧಿಕಾರವು ಪ್ರಸ್ತುತ ಯಾರ ಕೈಯಲ್ಲಿದೆ? ಒಟ್ಟು ಶೇ. 85ರಷ್ಟಿರುವ ಎಸ್ಸಿ(ಶೇ.20) ಎಸ್ಟಿ(ಶೇ.10) ಮತ್ತು ಧಾರ್ಮಿಕ ಅಲ್ಪ ಸಂಖ್ಯಾತರನ್ನೂ ಒಳಗೊಂಡಂತಹ ಒಬಿಸಿಗಳಿಗೆ (ಶೇ.55) ಕೇವಲ ಶೇ. 50ರಷ್ಟು ಮೀಸಲಾತಿಯನ್ನು ನೀಡಿರುವುದು ಯಾವ ನ್ಯಾಯ? ಜನಸಂಖ್ಯೆಯ ಪ್ರಮಾಣಕ್ಕಿಂತ ಕಡಿಮೆ ಮೀಸಲಾತಿಯನ್ನು ನೀಡಿದ ಮೇಲೆ ಸೂಕ್ತ ಪ್ರಾತಿನಿಧ್ಯವನ್ನು ಸಾಧಿಸುವುದು ಹೇಗೆ? ಈಗ ಇರುವ ಶೇ. 50ರಷ್ಟು ಮೀಸಲಾತಿಯನ್ನಾದರೂ ನ್ಯಾಯವಾಗಿ ತುಂಬಲಾಗಿದೆಯಾ? ಆಗಸ್ಟ್ 11, 2012ರಂದು, ಕೇಂದ್ರ ಸಚಿವರಾಗಿದ್ದ ಮಾನ್ಯ ನಾರಾಯಣಸ್ವಾಮಿಯವರು ಸಂಸತ್‌ನಲ್ಲಿ ಮಂಡಿಸಿದ ವರದಿಯ ಪ್ರಕಾರ, ಒಟ್ಟು ಕೇಂದ್ರ ಸರಕಾರದ ಸೇವೆಯಲ್ಲಿರುವವರ ಪೈಕಿ ಎಸ್ಸಿ/ಎಸ್ಟಿ/ಒಬಿಸಿಗಳ ಪಾಲು ಶೇ. 25ನ್ನು ದಾಟಿಲ್ಲ! ಉನ್ನತ ದರ್ಜೆಯ ಹುದ್ದೆಗಳಲ್ಲಂತೂ ಶೇ. 5ರಷ್ಟೂ ಭರ್ತಿಯಾಗಿಲ್ಲ! ಒಟ್ಟು ಆರ್ಥಿಕ ಚಟುವಟಿಕೆಯಲ್ಲಿ ಶೇ. 98ರಷ್ಟಿರುವ ಕೃಷಿ, ಕೈಗಾರಿಕೆ ಮತ್ತು ಖಾಸಗಿ ಸೇವಾ ವಲಯಗಳಲ್ಲಿ ಎಸ್ಸಿ/ಎಸ್ಟಿಗಳ ಪಾಲು ಶೂನ್ಯವಾಗಿದೆ ಮತ್ತು ಒಬಿಸಿಗಳ ಪಾಲು ಅತ್ಯಲ್ಪವಾಗಿದೆ.

ಕೇವಲ ಶೇ. 2ರಷ್ಟಿರುವ ಸರಕಾರಿ ವಲಯವೂ ಸಹ ಖಾಸಗೀಕರಣಗೊಳ್ಳುತ್ತಿರುವಾಗ, ಎಸ್ಸಿ/ಎಸ್ಟಿ/ಒಬಿಸಿಗಳು ಅದು ಹೇಗೆ ತಾನೇ ಇತರರೊಂದಿಗೆ ಸ್ಪರ್ಧಿಸಲು ಸಾಧ್ಯ? ಮೀಸಲಾತಿಯ ಬೆಂಬಲವಿಲ್ಲದೆ, ಇತರರಂತೆ ಮೇಲೆ ಬರಲು ಛಲ ಹೊಂದಬೇಕು ಎನ್ನುವ ಉಪದೇಶವು ಅಮಾನವೀಯ ಜೋಕ್ ಎನಿಸುವುದಿಲ್ಲವೇ? ಸಂವಿಧಾನದ ಆಶಯದಂತೆ, ಸಾಮಾಜಿಕ- ಆರ್ಥಿಕ ಸಮಾನತೆಯನ್ನು 70 ವರ್ಷಗಳಾದರೂ ಸಾಧಿಸಲು ವಿಫಲವಾಗಿರುವ ಮುಂದುವರಿದ ವರ್ಗಗಳ ನೇತೃತ್ವದ ಸರಕಾರಗಳು ತಮ್ಮ ಸೋಲನ್ನು ಮುಚ್ಚಿಡಲು ಇಂತಹ ಬೇಜವಾಬ್ದಾರಿ ಮಾತುಗಳನ್ನು ಆಡುತ್ತಿದ್ದಾರಲ್ಲವೇ? ದೇಶದ ಐಕ್ಯತೆಗಾಗಿ ಮತ್ತು ಮಹಾತ್ಮಾಗಾಂಧೀಜಿಯವರ ಪ್ರಾಣವನ್ನು ಉಳಿಸುವ ಸಲುವಾಗಿ, ಅಂದು 1932ರಲ್ಲಿ, ಶೋಷಿತ ವರ್ಗಗಳು ತಮ್ಮ ನಾಯಕ ಬಾಬಾಸಾಹೇಬರ ಮೂಲಕ ತಾವು ಗಳಿಸಿದ್ದ ಬಲು ದೊಡ್ಡ ಶಕ್ತಿಯಾಗಿದ್ದ ಪ್ರತ್ಯೇಕ ಚುನಾಯಕಗಳನ್ನು ಬಿಟ್ಟುಕೊಡುವಂತಹ ಬಲುದೊಡ್ಡ ತ್ಯಾಗವನ್ನು ಮಾಡಿದರು. ಶತಮಾನಗಳ ಕಾಲ ಶೋಷಣೆ ಯಲ್ಲಿ ಮುಳುಗಿದ್ದ ಸಮಾಜಕ್ಕೆ ಪ್ರತ್ಯೇಕ ಚುನಾಯಕಗಳು ಖಂಡಿತವಾಗಿಯೂ ಒಂದು ವಿಮೋಚನಾ ಮಾರ್ಗವಾಗಿತ್ತು. ಅದನ್ನು ಬಿಟ್ಟುಕೊಡುವಂತೆ ಕೇಳುವ ಅಧಿಕಾರ ಅಥವಾ ಅರ್ಹತೆಯು ಯಾರಿಗೂ ಇರಲಿಲ್ಲ. ಆದರೆ ಮಹಾನ್ ರಾಷ್ಟ್ರೀಯವಾದಿಯಾಗಿದ್ದ ಡಾ. ಅಂಬೇಡ್ಕರ್‌ರವರು, ತನಗಿಂತ ತನ್ನ ಜನರು ಮುಖ್ಯ ಮತ್ತು ತನ್ನ ಜನರಿಗಿಂತ ಈ ದೇಶ ಮುಖ್ಯ ಎಂದು ತಿಳಿದು, ಪ್ರತ್ಯೇಕ ಚುನಾಯಕಗಳನ್ನು ಬಿಟ್ಟುಕೊಡುವಂತಹ ಐತಿಹಾಸಿಕ ನಿರ್ಧಾರವನ್ನು ಕೈಗೊಂಡರು. ಎಸ್ಸಿ/ಎಸ್ಟಿಗಳು ಬಿಟ್ಟುಕೊಟ್ಟ ಪ್ರತ್ಯೇಕ ಚುನಾಯಕಗಳ ಮುಂದೆ, ಅವರಿಗೆ ನೀಡಲಾದ ಮೀಸಲು ಕ್ಷೇತ್ರಗಳಾಗಲೀ ಅಥವಾ ಉದ್ಯೋಗ ಮೀಸಲಾತಿಯಾಗಲೀ ಜುಜುಬಿಯಾಗಿವೆ. ಮೂರು ಹೆಜ್ಜೆಗಳ ಭೂಮಿಯನ್ನು ಬೇಡಿದ ವಾಮನ ಮೂರ್ತಿಯು, ಬಲಿ ಚಕ್ರವರ್ತಿಯ ತಲೆಯ ಮೇಲೆ ತನ್ನ ಪಾದವನ್ನಿರಿಸಿ, ಪಾತಾಳಕ್ಕೆ ತುಳಿದಂತಹ ದುರಂತ ಕತೆಯಿದು.

ಇದೀಗ, ಒಂದು ವೇಳೆ, ಎಸ್ಸಿ/ಎಸ್ಟಿಗಳು ತಮಗೆ ಕೊಡಲಾಗಿರುವ ಮೀಸಲಾತಿಯನ್ನು ಬಿಟ್ಟುಕೊಡುವುದಾದರೆ, ಮುಂದುವರಿದ ವರ್ಗಗಳು ಅವರಿಗೆ ಪ್ರತ್ಯೇಕ ಚುನಾಯಕಗಳನ್ನು ಬಿಟ್ಟುಕೊಡಲು ಸಿದ್ಧರಾಗುವರೇ? ಸೆಪ್ಟಂಬರ್ 24, 1932ರ ಪುಣೆಕರಾರಿನ ಶರತ್ತುಗಳನ್ನು ಮುರಿದು ಮಾತು ತಪ್ಪಿರುವ ಮುಂದುವರಿದ ವರ್ಗಗಳ ನಾಯಕರು ಪುಣೆ ಕರಾರಿನ ಪೂರ್ವ ಪರಿಸ್ಥಿತಿಗೆ ಬರಲು ತಯಾರಿರುವರೇ? ಸಮಾನ ಸಾಮರ್ಥ್ಯವುಳ್ಳವರ ನಡುವೆ ಮಾತ್ರ ಸ್ಪರ್ಧೆಯನ್ನು ಏರ್ಪಡಿಸಬೇಕು, ಅಸಮಾನರ ನಡುವೆ ಸ್ಪರ್ಧೆ ಏರ್ಪಡಿಸುವುದು ಅಸಮಾನತೆಯನ್ನು ಪೋಷಿಸುವ ಕ್ರೌರ್ಯವಾಗಿರುತ್ತದೆ. ಭೂಮಿ, ಕೈಗಾರಿಕೆ ಮತ್ತು ಖಾಸಗಿ ಸೇವಾ ವಲಯಗಳನ್ನು ಸಂಪೂರ್ಣವಾಗಿ ತಮ್ಮ ಏಕಸ್ವಾಮ್ಯದಲ್ಲಿ ಭದ್ರಪಡಿಸಿಕೊಂಡಿರುವ ಮುಂದುವರಿದ ವರ್ಗಗಳು, ಹಿಂದುಳಿದ ವರ್ಗಗಳನ್ನು ತಮ್ಮಂತೆ ಮೇಲೆ ಬರಬೇಕೆಂದು ಹೇಳುವುದು ಅಭಾಸವಾಗಿದೆ.

ತಮಗಿರುವಂತೆಯೇ, ಭೂಮಿ, ಕೈಗಾರಿಕೆ ಮತ್ತು ಖಾಸಗಿ ಸೇವಾ ವಲಯಗಳಲ್ಲಿ, ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಆಶಯದಂತೆ, ವಂಚಿತರಿಗೂ ಸಮಪಾಲನ್ನು ಮೊದಲು ನೀಡಲಿ. ಮೀಸಲಾತಿಯ ಅಗತ್ಯವೇ ಇಲ್ಲದಂತಹ ಸಮಾನ ಸಾಮಾಜಿಕ-ಆರ್ಥಿಕ ವ್ಯವಸ್ಥೆಯುಳ್ಳ ಮುಕ್ತ ಸಮಾಜದಲ್ಲಿ ಬದುಕಲು ಹಿಂದುಳಿದ ವರ್ಗಗಳು ಬಯಸುತ್ತಾರೆ. ಆದರೆ ಅಂತಹ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸಲು ವಿಫಲವಾಗಿರುವ ಮುಂದುವರಿದ ಆಳುವ ವರ್ಗಗಳೇ ಇಂದು ಅತ್ಯಂತ ಅನಾರೋಗ್ಯಕರವಾಗಿ ಮೀಸಲಾತಿ ವ್ಯವಸ್ಥೆಯನ್ನು ಮುಂದುವರಿಸಲು ಕಾರಣಕರ್ತರಾಗಿದ್ದಾರೆ. ಹಿಂದುಳಿದ ವರ್ಗಗಳು ಅನಿವಾರ್ಯವಾಗಿ ಮೀಸಲಾತಿ ಎಂಬ ಊರುಗೋಲನ್ನು ನೆಚ್ಚಿಕೊಂಡಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯು ತಾಂಡವವಾಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ಬಹುಸಂಖ್ಯಾತರಾಗಿರುವ ಹಿಂದುಳಿದ ವರ್ಗಗಳಿಗೆ ತಮ್ಮ ಬದುಕನ್ನು ಉತ್ತಮ ಪಡಿಸಿಕೊಳ್ಳುವ ಸಲುವಾಗಿ ಕಿಂಚಿತ್ ಅವಕಾಶವೂ ಇಲ್ಲ ಎಂಬ ಹತಾಶ ಭಾವನೆಯ ಅವರಲ್ಲಿ ಮೂಡಿದ್ದರೆ, ಏನಾಗುತ್ತಿತ್ತು ಎಂಬುದನ್ನು ಊಹಿಸಲು ಸಾಧ್ಯವೇ? ಮೀಸಲಾತಿ ಸೌಲಭ್ಯವು ಅಂತಹ ಹತಾಶೆಗೆ ಆಸ್ಪದ ನೀಡದೆ, ಹಿಂದುಳಿದ ವರ್ಗಗಳಲ್ಲಿ ಒಂದು ಭರವಸೆಯ ಕಿರಣವನ್ನು ಹೊತ್ತಿಸುವುದರ ಮೂಲಕ ದೇಶದ ಐಕ್ಯತೆಯನ್ನು ಖಾತ್ರಿಪಡಿಸಿದೆ ಎಂಬುದನ್ನು ಎಲ್ಲರೂ ಮನಗಾಣಬೇಕಿದೆ.

Writer - ಎಂ. ಗೋಪಿನಾಥ್

contributor

Editor - ಎಂ. ಗೋಪಿನಾಥ್

contributor

Similar News