ಐಪಿಎಲ್ ನೆಟ್‌ಪ್ರಾಕ್ಟೀಸ್‌ನಲ್ಲಿ ಸಿಕ್ಸರ್ ಸುರಿಮಳೆಗರೆದ ಧೋನಿ

Update: 2020-03-06 18:45 GMT

ಚೆನ್ನೈ, ಮಾ.6: ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ(ಐಪಿಎಲ್)ಕೇವಲ ಮೂರು ವಾರಗಳು ಬಾಕಿ ಇದೆ. ಚೆನ್ನೈಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿಯ ಮರಳಿಕೆಯನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕಳೆದ ವರ್ಷ ಭಾರತ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಸೋತು ನಿರ್ಗಮಿಸಿದ ಬಳಿಕ ಧೋನಿ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರು. ಐಪಿಎಲ್‌ನಲ್ಲಿ ಚೆನ್ನೈ ಪರ ಆಡುವುದರೊಂದಿಗೆ ಧೋನಿ ಕ್ರಿಕೆಟ್‌ಗೆವಾಪಸಾಗಲು ಸಜ್ಜಾಗುತ್ತಿದ್ದಾರೆ. ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿರುವ ನೆಟ್‌ ನಲ್ಲಿ ಅಭ್ಯಾಸ ಮಾಡುವ ಮೂಲಕ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ತಮಿಳು ಅಪ್‌ಲೋಡ್ ಮಾಡಿರುವ ವೀಡಿಯೊವೊಂದರಲ್ಲಿ 38ರ ಹರೆಯದ ಧೋನಿ ತನ್ನ ಬ್ಯಾಟಿಂಗ್ ತಾಕತ್ತು ತೋರಿಸಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ಧೋನಿ ನೆಟ್‌ಪ್ರಾಕ್ಟೀಸ್‌ನ ವೇಳೆ ಸತತ ಐದು ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ವೀಡಿಯೊದಲ್ಲಿ ಧೋನಿ ಅವರು ಬೌಲರ್ ಅಥವಾ ಬಾಲ್ ಮಿಶನ್ ವಿರುದ್ಧ ಸಿಕ್ಸರ್ ಸಿಡಿಸಿದ್ದಾರೋ ಎಂದು ಸ್ಪಷ್ಟವಾಗಿಲ್ಲ. ಸತತ ಐದು ಸಿಕ್ಸರ್‌ಗಳು ಧೋನಿ ಇನ್ನೂ ದೊಡ್ಡ ಹೊಡೆತ ಬಾರಿಸಲು ಶಕ್ತರಿದ್ದಾರೆ ಎನ್ನುವುದನ್ನು ಬೆಟ್ಟು ಮಾಡುತ್ತಿದೆ. ಧೋನಿ ಮಾ.2ರಿಂದ ಚೆನ್ನೈನಲ್ಲಿ ಇತರ ಆಟಗಾರರೊಂದಿಗೆ ಅಭ್ಯಾಸ ಆರಂಭಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಧೋನಿ ಅವರ ವೃತ್ತಿಭವಿಷ್ಯದ ಬಗ್ಗೆ ನಾನಾ ವದಂತಿಗಳು ಹಬ್ಬುತ್ತಿವೆ. ಜನವರಿಯಲ್ಲಿ ಬಿಸಿಸಿಐನ ಆಟಗಾರರ ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಧೋನಿಯನ್ನು ಕೈಬಿಡಲಾಗಿತ್ತು. ಧೋನಿ ಒಟ್ಟು 190 ಐಪಿಎಲ್ ಪಂದ್ಯಗಳಲ್ಲಿ(ರೈಸಿಂಗ್ ಪುಣೆ ಪರ ಎರಡು ಆವೃತ್ತಿಯ ಐಪಿಎಲ್ ಸಹಿತ)ಆಡಿದ್ದು, 23 ಅರ್ಧಶತಕಗಳ ಸಹಿತ 4,432 ರನ್ ಗಳಿಸಿದ್ದರು. ಮಾ.29ರಿಂದ ಮುಂಬೈನ ವಾಂಖೆಡೆ ಸೇಡಿಯಂನಲ್ಲಿ ಈ ವರ್ಷದ ಐಪಿಎಲ್ ಆರಂಭವಾಗಲಿದೆ.ಚೆನ್ನೈ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ದ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News