ರಾಜ್ಯದಲ್ಲಿ ಶೀಘ್ರ ಹೊಸ ಮರಳು ನೀತಿ ಜಾರಿ: ಸಚಿವ ಸಿ.ಸಿ.ಪಾಟೀಲ್
ಬೆಂಗಳೂರು, ಮಾ. 7: ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿಗೆ ತರಲು ಕುರಿತು ರೂಪರೇಷೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಶೀಘ್ರದಲ್ಲೆ ಜಾರಿಗೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಭರವಸೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಮೂಡಬಿದ್ರೆ ಕ್ಷೇತ್ರದ ಬಿಜೆಪಿ ಶಾಸಕ ಉಮಾನಾಥ ಎ. ಕೋಟ್ಯಾನ್ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಪ್ರಸ್ತುತ ಹಾಲಿ ಇರುವ ಮರಳು ನೀತಿಯನ್ನು ಸಮರ್ಪಕವಾಗಿ ಜಾರಿಗೆ ತರಲು ಸರಕಾರ ಕ್ರಮ ವಹಿಸಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ನದಿ ಪಾತ್ರಗಳಲ್ಲಿ 237 ಮರಳು ಬ್ಲಾಕ್‌ಗಳನ್ನು ಹರಾಜು ಮಾಡಲಾಗಿದೆ. ಸದರಿ ಬ್ಲಾಕ್‌ಗಳಲ್ಲಿ 16.82 ಲಕ್ಷ ಮೆಟ್ರಿಕ್ ಟನ್, ಸರಕಾರಿ ಕಾಮಗಾರಿಗಳಿಗೆ ನದಿ ಪಾತ್ರಗಳಲ್ಲಿ 18 ಮರಳು ಬ್ಲಾಕ್‌ಗಳನ್ನು ಸರಕಾರಿ ಇಲಾಖೆಗೆ ಮಂಜೂರು ಮಾಡಿದ್ದು, 1.34 ಲಕ್ಷ ಮೆ.ಟನ್ ಮರಳನ್ನು ಕಾಮಗಾರಿಗಳಿಗೆ ಪೂರೈಕೆ ಮಾಡಲಾಗಿದೆ ಎಂದು ವಿವರ ನೀಡಿದ್ದಾರೆ.
ಕರಾವಳಿ ನಿಯಂತ್ರಣ ವಲಯಗಳಲ್ಲಿ 30 ಮರಳು ದಿಬ್ಬಗಳಲ್ಲಿ ಮರಳು ತೆರವುಗೊಳಿಸಲು ಕರ್ನಾಟಕ ಕರಾವಳಿ ವಲಯ ನಿಯಂತ್ರಣ ಪ್ರಾಧಿಕಾರದಿಂದ ಅನುಮತಿ ಪಡೆಯಲಾಗಿರುತ್ತದೆ. ಅದರಂತೆ ಸದರಿ ಮರಳು ದಿಬ್ಬಗಳಿಂದ 7 ಲಕ್ಷ ಮೆ.ಟನ್ ಮರಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಒಟ್ಟು 289 ಎಂ-ಸ್ಯಾಂಡ್ ಘಟಕಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. ಸದರಿ ಘಟಕಗಳಿಂದ 30 ಮಿ.ಮೆ.ಟನ್ ಎಂ-ಸ್ಯಾಂಡ್ ಉತ್ಪಾದಿಸಲಾಗುತ್ತದೆ. ಅಲ್ಲದೆ, 49,123 ಮೆ.ಟನ್ ವಿದೇಶದಿಂದ ಆಮದಾದ ಮರಳನ್ನು ಸಾರ್ವಜನಿಕರ ಕಾಮಗಾರಿಗಳಿಗೆ ಪೂರೈಸಲಾಗುತ್ತದೆ ಎಂದು ಅವರು ಉತ್ತರದಲ್ಲಿ ತಿಳಿಸಿದ್ದಾರೆ.
ಆ್ಯಪ್ ಮೂಲಕ ಮರಳು ಪೂರೈಕೆ
ದಕ್ಷಿಣ ಕನ್ನಡ ಜಿಲ್ಲೆಗೆ ವಾರ್ಷಿಕ 9 ಲಕ್ಷ ಮೆಟ್ರಿಕ್ ಟನ್ ಮರಳಿನ ಬೇಡಿಕೆ ಇದೆ. ತುಂಬೆ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಹೂಲು ತೆರವುಗೊಳಿಸಿರುವುದರಿಂದ ಸಂಗ್ರಹವಾಗಿರುವ ಮರಳನ್ನು ಸಾರ್ವಜನಿಕರಿಗೆ ‘ಸ್ಯಾಂಡ್ ಬಝಾರ್ ಆ್ಯಪ್’ ಮೂಲಕ ಪೂರೈಸಲಾಗುತ್ತಿದೆ. ಸದರಿ ಅಣೆಕಟ್ಟಿನಲ್ಲಿ 85 ಸಾವಿರ ಮೆಟ್ರಿಕ್ ಟನ್ ಮರಳಿದ್ದು, 79 ಸಾವಿರ ಮೆಟ್ರಿಕ್ ಟನ್ ಮರಳನ್ನು ಪೂರೈಕೆ ಮಾಡಲಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ 6ಎಂ-ಸ್ಯಾಂಡ್ ಕ್ರಷರ್ ಘಟಕಗಳಿವೆ. ಜಿಪಿಎಸ್ ಅಳವಡಿಸಿರುವ ವಾಹನಗಳಿಗೆ ಮರಳು ಸಾಗಾಣಿಕೆ ಪರವಾನಿಗೆ ನೀಡಿ, ಮರಳು ವಿವರಿಸಲಾಗುತ್ತಿದೆ ಎಂದು ಕಾಂಗ್ರಸ್ ಸದಸ್ಯ ಯು.ಟಿ.ಖಾದರ್ ಕೇಳಿದ ಪ್ರಶ್ನೆಗೆ ಸಚಿವ ಸಿ.ಸಿ.ಪಾಟೀಲ್ ಲಿಖಿತ ಉತ್ತರ ನೀಡಿದ್ದಾರೆ.