ಬೆಂಗಳೂರಿಗೆ ಪ್ರತಿ ದಿನಕ್ಕೆ 50 ದಶಲಕ್ಷ ಲೀ. ನೀರು ಪೂರೈಕೆಗೆ ಚಿಂತನೆ: ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್
ಬೆಂಗಳೂರು, ಮಾ.7: ಮುಂಬರುವ ಬೇಸಿಗೆ ಅವಧಿಯಲ್ಲಿ ನಗರಕ್ಕೆ ಹೆಚ್ಚುವರಿಯಾಗಿ ಪ್ರತಿ ದಿನಕ್ಕೆ 50 ದಶಲಕ್ಷ ಲೀಟರ್ (ಎಂಎಲ್‌ಡಿ) ನೀರನ್ನು ಪೂರೈಕೆಗೆ ಚಿಂತನೆ ನಡೆಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಹೇಳಿದರು.
ಶನಿವಾರ ಬಿಬಿಎಂಪಿ ಕೇಂದ್ರ ಕಚೇರಿಯ ಕೆಂಪೇಗೌಡ ಪೌರಸಭಾಂಗಣದಲ್ಲಿ ಬಿಬಿಎಂಪಿ ಮೇಯರ್ ಅಧ್ಯಕ್ಷತೆಯಲ್ಲಿ ಬೇಸಿಗೆ ಅವಧಿಯಲ್ಲಿ ನಗರಕ್ಕೆ ಕುಡಿಯುವ ನೀರಿನ ಪೂರೈಕೆ ಕುರಿತು ನಡೆದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರು ನಗರದ ನೀರಿನ ಸಮಸ್ಯೆ, ಒಳಚರಂಡಿ ಅವ್ಯವಸ್ಥೆ ಹಾಗೂ ಜಲಮಂಡಳಿಯ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಜತೆಗೆ ಮುಂಬರುವ ಬೇಸಿಗೆ ಅವಧಿಯಲ್ಲಿ ನಗರದ ಜನತೆ ಎದುರಿಸಬಹುದಾದ ನೀರಿನ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಲಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್ ಅವರಿಗೆ ಪ್ರಶ್ನಿಸಿದರು.
ಬಳಿಕ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ತುಷಾರ್ ಗಿರಿನಾಥ್, ಪ್ರಸ್ತುತವಾಗಿ ನಗರಕ್ಕೆ 1,450 ಎಂಎಲ್‌ಡಿ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಆದರೆ, 110 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇರುವುದರಿಂದ ನೀರು ಪೂರೈಕೆ ಪ್ರಮಾಣವನ್ನು ಬೇಸಿಗೆ ಅವಧಿಗೆ 1,500 ಎಂಎಲ್‌ಡಿಗೆ ಏರಿಕೆ ಮಾಡಿ ಸಮಸ್ಯೆ ಇರುವ ಪ್ರದೇಶಗಳಿಗೆ ಸರಬರಾಜು ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. 110 ಹಳ್ಳಿಯ ಭಾಗದಲ್ಲಿ ವಾರಕ್ಕೆ ಎರಡು ಬಾರಿ ಕಾವೇರಿ ನೀರಿನ ಪೂರೈಕೆ ಮಾಡಬೇಕೆಂಬ ಬೇಡಿಕೆ ಇದೆ. ಆದರೆ, ಒಂದು ಬಾರಿ ಪೂರೈಸಲಾಗುತ್ತಿದ್ದು, ಸಾಧ್ಯವಾದಷ್ಟು ನೀರಿನ ಪೂರೈಕೆ ಪ್ರಮಾಣ ಹೆಚ್ಚಿಸಲಾಗುವುದು ಎಂದು ವಿವರಿಸಿದರು.
ಈಗಾಗಲೇ ನಗರಕ್ಕೆ 1450 ಎಂಎಲ್‌ಡಿ ನೀರು ಪೂರೈಕೆ ಮಾಡಲಾಗುತ್ತಿದ್ದು, 2021ರ ಸೆಪ್ಟಂಬರ್ ವೇಳೆಗೆ 110 ರಿಂದ 120 ಎಂಎಲ್‌ಡಿ ನೀರು ಎತ್ತಿನಹೊಳೆ ಯೋಜನೆ ಮೂಲಕ ನಗರಕ್ಕೆ ಸರಬರಾಜು ಆಗಲಿದ್ದು, ಕಾವೇರಿ ಐದನೇ ಹಂತದ ಯೋಜನೆಯಿಂದ 775 ಎಂಎಲ್‌ಡಿ ಸೇರ್ಪಡೆಯಾಗಿದ್ದು, 2023ರ ಡಿಸೆಂಬರ್ ವೇಳೆಗೆ ನಗರಕ್ಕೆ ಬರೋಬ್ಬರಿ 2,300 ಎಂಎಲ್‌ಡಿ ನೀರು ಲಭ್ಯವಾಗಲಿದೆ. ಈ ನೀರನ್ನು 2035ರ ವರೆಗೆ ಬಳಕೆ ಮಾಡಿಕೊಳ್ಳಬೇಕಾಗಲಿದೆ ಎಂದು ವಿವರಿಸಿದರು.
ನಗರಕ್ಕೆ ನೀರಿನ ಸಮಸ್ಯೆ ಕಾದಿದೆ: ಕಾವೇರಿ ಐದನೇ ಹಂತ ಸೇರಿದಂತೆ 2023ರ ವೇಳೆಗೆ ನಗರಕ್ಕೆ ಒಟ್ಟು 2,300 ಎಂಎಲ್‌ಡಿ ನೀರು ಲಭ್ಯವಾಗಲಿದೆ. ಈ ನೀರನ್ನು 2035ರ ವರೆಗೆ ಬಳಕೆ ಮಾಡಿಕೊಳ್ಳಬೇಕಿದೆ. ಆದರೆ, ನಗರದ ಬೆಳೆಯುತ್ತಿರುವ ವೇಗ ಹಾಗೂ ಜನಸಂಖ್ಯೆ ಏರಿಕೆ ಪ್ರಮಾಣ ಗಮನಿಸಿದರೆ 2028-29ರ ವೇಳೆಗೆ ನೀರಿನ ಸಮಸ್ಯೆ ಉಂಟಾಗಲಿದೆ. ಹಾಗಾಗಿ, ಶರಾವತಿಯಿಂದ ನಗರಕ್ಕೆ ನೀರು ಪೂರೈಕೆಗೆ ಯಗಚಿ ಜಲಾಶಯ ಹಾಗೂ ವಾಣಿವಿಲಾಸ ಸಾಗರದ ಮೂಲಕ ತರಲು ಎರಡು ಯೋಜನೆ ರೂಪಿಸಲಾಗಿದ್ದು, ಅದರಲ್ಲಿ ವಾಣಿವಿಲಾಸ ಸಾಗರದ ಜಲಾಶಯದ ಮೂಲಕ ತರುವ ಯೋಜನೆ ಸೂಕ್ತವೆಂದು ಪರಿಗಣಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಯೋಜನೆಯ ಸಾಧ್ಯಸಾಧ್ಯತಾ ವರದಿ ಹಾಗೂ ಡಿಪಿಆರ್ ಸಿದ್ದಪಡಿಸಲು ಸರಕಾರ ಒಪ್ಪಿಗೆ ಸೂಚಿಸಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಶರಾವತಿಯಿಂದ 10 ಟಿಎಂಸಿ ನೀರು ತರಲು ಅವಕಾಶ
ಶರಾವತಿಯಿಂದ ಒಟ್ಟು 30 ಟಿಎಂಸಿ ನೀರು ತರುವುದಕ್ಕೆ ಅವಕಾಶವಿದ್ದು, 10 ಟಿಎಂಸಿ ನೀರನ್ನು ಬೆಂಗಳೂರಿಗೆ ಉಳಿದ ಐದು ಟಿಎಂಸಿ ನೀರನ್ನು ಮಾರ್ಗ ಮಧ್ಯದಲ್ಲಿ ಬರುವ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳ ಗ್ರಾಮಗಳಿಗೆ ನೀಡಲಾಗುವುದು. ಎರಡನೇ ಹಂತದಲ್ಲಿ ಇನ್ನು 15 ಟಿಎಂಸಿ ನೀರು ತರವುದಕ್ಕೂ ಅವಕಾಶವಿದೆ ಎಂದು ಅದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈಗಗಲೇ ಯೋಜನೆ ಜಾರಿ ಮಾಡಿದರೆ 2029ರ ವೇಳೆ ಪೂರ್ಣಗೊಳಿಸಬಹುದು ಎಂದು ಮಾಹಿತಿ ನೀಡಿದರು.
ಮಾಸ್ಕ್ ಧರಿಸಿದ ಕಾಂಗ್ರೆಸ್ ಸದಸ್ಯರು
ಕೊರೋನ ಭೀತಿ ಎಲ್ಲೆಡೆ ಹಬ್ಬಿದ್ರೂ ಬಿಬಿಎಂಪಿ ಏನೂ ಕ್ರಮ ಕೈಗೊಂಡಿಲ್ಲ ಎಂದು ಬಿಬಿಎಂಪಿ ಕಾಂಗ್ರೆಸ್ ಸದಸ್ಯರು ಮಾಸ್ಕ್ ಧರಿಸಿ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಒಂದೆಡೆ ಜಲಮಂಡಳಿಗೆ ಸಂಬಂಧಿಸಿದ ವಿಚಾರ ಮಾತನಾಡಿ ಎಂದು ಬಿಜೆಪಿ ಪಾಲಿಕೆ ಸದಸ್ಯರು ಒತ್ತಾಯಿಸಿದರು. ಕಾಂಗ್ರೆಸ್ ಸದಸ್ಯರು ಕೊರೋನ ಬಗ್ಗೆ ಚರ್ಚೆಯಾಗಬೇಕು ಎಂದು ಪಟ್ಟು ಹಿಡಿದರು. ಕೇವಲ ಎರಡು ಸಭೆ ನಡೆಸಿದ್ದು ಬಿಟ್ಟರೆ ನಗರದಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜನರು ಭೀತಿಯಿಂದ ಇದ್ದಾರೆ. ಮಾಸ್ಕ್ ಧರಿಸುವ ಬಗ್ಗೆಯೂ ಸರಿಯಾದ ಅರಿವು ಜನರಿಗಿಲ್ಲ. ಈ ಬಗ್ಗೆ ಆಯುಕ್ತರು ಉತ್ತರಿಸಬೇಕೆಂದು ವಿಪಕ್ಷ ನಾಯಕ ವಾಜಿದ್ ಒತ್ತಾಯಿಸಿದರು.