ಶಿಕ್ಷಣ ಕ್ಷೇತ್ರದ ಉದ್ಯಮಿಗಳಿಂದಾಗಿ ಇಂಗ್ಲಿಷ್ ಶಾಲೆಯ ಮೇಲೆ ವ್ಯಾಮೋಹ: ಪುರುಷೋತ್ತಮ ಬಿಳಿಮಲೆ

Update: 2020-03-07 18:02 GMT

ಬೆಂಗಳೂರು, ಮಾ.7: ಶಿಕ್ಷಣ ಕ್ಷೇತ್ರದ ಉದ್ಯಮಿಗಳಿಂದಾಗಿ ಜನತೆ ಇಂಗ್ಲಿಷ್ ಶಾಲೆಯ ವ್ಯಾಮೋಹಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದ ಹೊರಬರುವ ನಿಟ್ಟಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿಯೇ ಕಲಿಯುವ ನಿಟ್ಟಿನಲ್ಲಿ ಕಾನೂನು ಜಾರಿಗೆ ಬರಬೇಕಾಗಿದೆ ಎಂದು ಜೆಎನ್‌ಯು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಿಸಿದ್ದಾರೆ. 

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟವು ಶಿಕ್ಷಣ ಮತ್ತು ಉದ್ಯೋಗ ಕುರಿತ ರಾಷ್ಟ್ರೀಯ ನೀತಿಗಾಗಿ ನವದೆಹಲಿಯ ಕರ್ನಾಟಕ ಭವನದಲ್ಲಿ ಆಯೋಜಿಸಿದ್ದ ಅಖಿಲ ಭಾರತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶಿಯ ಭಾಷೆಯಲ್ಲಿ ಶಿಕ್ಷಣ ಪಡೆದ ಮಗು ಮಾತ್ರ ಸರ್ವತೋಮುಖವಾಗಿ ತನ್ನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬಹುದೆಂದು ವಿಶ್ವದ ಶಿಕ್ಷಣ ತಜ್ಞರ ಸರ್ವಾಭಿಪ್ರಾಯವಾಗಿದೆ. ಮಗುವಿನ ಸ್ಪಷ್ಟ ಆಲೋಚನೆ ಹಾಗೂ ಗೊಂದಲ ರಹಿತ ಅಭಿವ್ಯಕ್ತಿ ಮಾತೃ ಭಾಷೆಯ ಕಲಿಕೆಯಿಂದ ಮಾತ್ರ ಸಾಧ್ಯವೆಂಬುದು ನಮ್ಮೆಲ್ಲರ ಅನುಭವವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಮಾತೃಭಾಷಾ ಪರವಾದ ನೀತಿ ಜಾರಿ ಮಾಡಲು ಒತ್ತಡ ಹಾಕಬೇಕಿದೆ ಎಂದು ಅವರು ಹೇಳಿದರು.

ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, ಕರ್ನಾಟಕದಲ್ಲಿ ಬ್ಯಾಂಕ್, ಅಂಚೆ ಕಚೇರಿ ಇತ್ಯಾದಿ ಇಲಾಖೆಗಳಲ್ಲಿ ಅನ್ಯರಾಜ್ಯದ ಉದ್ಯೋಗಿಗಳು ತುಂಬಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಜನತೆಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸರಕಾರಗಳು ಗಮನಕೊಟ್ಟು, ಸ್ಥಳೀಯರನ್ನೇ ನೇಮಕವಾಗುವಂತಹ ಕಾನೂನು ಜಾರಿ ಮಾಡಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ನಾ.ಶ್ರೀಧರ ಸೇರಿದಂತೆ 140ಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News