ಕ್ರೌರ್ಯದ ರೋಗಕ್ಕೆ ಸಾಮುದಾಯಿಕ ಚಿಕಿತ್ಸೆ

Update: 2020-03-08 06:12 GMT

ಹಿಂಸೆ ಎಂಬುವ ರೋಗಲಕ್ಷಣವನ್ನು ಸಮಾಜದಲ್ಲಿ ಕಾಣುತ್ತಿದ್ದಂತೆ ಅದನ್ನು ಗುಣಪಡಿಸಬೇಕೆಂದರೆ ಮಕ್ಕಳ ಪೋಷಣೆಯ ಕಡೆಗೆ ಗಮನ ಕೊಡಬೇಕು.

ಬಾಲ್ಯದ ಅನುಭವಗಳು ಮತ್ತು ಪ್ರಭಾವಗಳ ಆಧಾರದಲ್ಲಿ ವಯಸ್ಕನೊಬ್ಬನ ಸಾಮಾಜಿಕ ಮತ್ತು ಭಾವನಾತ್ಮಕ ನಡವಳಿಕೆಗಳ ಆರೋಗ್ಯವನ್ನು ನಿರ್ಧರಿಸಬಹುದು. ಅಪರಾಧ ಚಟುವಟಿಕೆಗಳನ್ನು ಯಾರೂ ವೃತ್ತಿಯನ್ನಾಗಿ ಆಯ್ದುಕೊಳ್ಳದಿದ್ದರೂ ಅಪರಾಧಗಳಲ್ಲಿ ವೃತ್ತಿಪರರಾಗುವರು. ಅದು ಯಾವುದೋ ಒಂದು ಸಂದರ್ಭದಲ್ಲಿ ದೊಡ್ಡ ನೆಗೆತವಾಗಿ ವಯಸ್ಕನ ಜೀವನದಲ್ಲಿ ಪರಿಣಮಿಸುತ್ತದೆ. ಮಗುವು ಹುಟ್ಟಿದಾಗಿನಿಂದ ಬೆಳೆಯುವಲ್ಲಿ ಅದು ಅನುಭವಿಸುವ ಕಹಿ ಅನುಭವಗಳ ಮೊತ್ತ ಅವನನ್ನು ಅಪರಾಧಿಯನ್ನಾಗಿ ರೂಪಿಸುತ್ತದೆ. ಯಾವ ಮಗುವಿಗೆ ಸಾಮಾಜಿಕ ಮತ್ತು ಭಾವನಾತ್ಮಕವಾದಂತಹ ಅನುಭವಗಳು ನಕಾರಾತ್ಮಕವಾಗಿರುತ್ತದೆಯೋ ಅಂತಹ ಮಕ್ಕಳು ಒಂದೋ ಖಿನ್ನತೆಯೇ ಮೊದಲಾದ ನಿಷ್ಕೃಷ್ಟ ಭಾವದಲ್ಲಿ ಕೀಳರಿಮೆಯ ವ್ಯಕ್ತಿತ್ವವುಳ್ಳವರಾಗುತ್ತಾರೆ ಅಥವಾ ಖತರ್ನಾಕ್ ರೌಡಿ, ಅಪರಾಧಿ ಚಟುವಟಿಕೆಗಳಲ್ಲಿ ನುರಿತರಾಗುತ್ತಾರೆ.

ಮಕ್ಕಳಿಗೆ ಮಾನಸಿಕ ಒತ್ತಡಗಳು

ವಿದ್ಯಾವಂತ ಕುಟುಂಬದ ಮನೆಯಲ್ಲಿ ಎಲ್ಲಾ ಸೌಕರ್ಯಗಳಿದ್ದರೂ ಕೂಡಾ ಮಕ್ಕಳಿಗೆ ಒಂದಲ್ಲ ಒಂದು ಒತ್ತಡಗಳಿರುತ್ತವೆ. ಶಾಲೆ, ಕರಾಟೆ ಕ್ಲಾಸ್, ಆ, ಈ ತರಗತಿಗಳು, ಪ್ರಾಜೆಕ್ಟ್‌ಗಳು, ಹೋಂವರ್ಕ್‌ಗಳು, ಒಡಹುಟ್ಟುಗಳೊಡನೆ, ಸಹಪಾಠಿಗಳೊಡನೆ ಸಂಘರ್ಷಗಳು. ಅನೇಕ ಕಾರಣಗಳಿಗೆ ಶಾಲೆಯ ಅಥವಾ ಮನೆಯ ಹಿರಿಯರೊಡನೆ ಮನಸ್ತಾಪ. ಈಡೇರದ ಆಸೆಗಳು, ಸಣ್ಣಪುಟ್ಟ ತಗಾದೆಗಳು; ಹೀಗೇ ಒಂದಲ್ಲಾ ಒಂದು ನವಿರಾದದ್ದೋ, ಗಾಢವಾದದ್ದೋ ಒಟ್ಟಾರೆ ಒಂದಷ್ಟು ಮಾನಸಿಕವಾಗಿ ಪ್ಯಾಕ್ಡ್ ಚಟುವಟಿಕೆಗಳಿರುತ್ತವೆ. ಅದನ್ನೇ ಒತ್ತಡ ಎನ್ನುವುದು.

ಇನ್ನು ವಿದ್ಯಾವಂತರಲ್ಲದ ಕುಟುಂಬದ ಸದಸ್ಯರು, ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿಲ್ಲದ ಮತ್ತು ಸಾಮಾಜಿಕವಾಗಿ ಒಳ್ಳೆಯ ಪರಿಸ್ಥಿತಿಯಿರದಂತಹ, ಯಾವುದ್ಯಾವುದೋ ಸೌಕರ್ಯ ಮತ್ತು ಸೌಲಭ್ಯಗಳಿಲ್ಲದೆ ಪರದಾಡುವ, ಒಳ್ಳೆಯ ಬಟ್ಟೆಗಳಿಲ್ಲದ, ಸರಿಯಾದ ಆಹಾರ ಮತ್ತು ಶರೀರ ಪೋಷಣೆಗೆ ಅವಕಾಶವಿರದ, ಅಚ್ಚುಕಟ್ಟಾದ ಶಾಲೆಗೆ ಹೋಗಲಾಗದ, ಬಯಸಿದ್ದನ್ನು ಪಡೆಯಲಾರದ, ಚಾಕಲೆಟ್, ಐಸ್‌ಕ್ರೀಂ ಬೇಕೆಂದಾಗ ಸಿಗದ ಮಕ್ಕಳಿಗೆ ಇನ್ನೆಷ್ಟು ಮಾನಸಿಕ ಒತ್ತಡಗಳಿರುತ್ತವೆ ಎಂಬುದನ್ನು ಆಲೋಚಿಸಬೇಕು. ಇಂತಹ ಮಕ್ಕಳಿಗೆ ಅವರ ತಂದೆ ತಾಯಿಗಳು ಯಶಸ್ವೀ ಪೋಷಕರಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಲು ಆಗದು. ಆರ್ಥಿಕ ಮತ್ತು ಸಾಮಾಜಿಕ ಒತ್ತಡಗಳ ಜೊತೆಗೆ ಭಾವನಾತ್ಮಕವಾಗಿಯೂ ಅವರು ಮಗು ಮತ್ತು ಕುಟುಂಬವು ಒತ್ತಡದಲ್ಲಿರುವುದು. ಇಂತಹ ಮಕ್ಕಳಿಗೆ ಬರಿಯ ಪೌಷ್ಟಿಕಾಂಶಗಳದ್ದು ಕೊರತೆ ಮಾತ್ರವೇ ಅಲ್ಲ, ಸಾಮಾಜಿಕವಾಗಿ ಸಂವೇದನೆ ಮತ್ತು ಭಾವನಾತ್ಮಕ ಪೋಷಣೆಯ ಕೊರತೆಯೂ ಕೂಡಾ ಉಂಟಾಗುವುದು.

ಒಡಕು ಕುಟುಂಬಗಳ ಪ್ರಭಾವಗಳು

ಇನ್ನು ಉಳ್ಳವರಾದರೂ, ಬಡವರಾದರೂ ಒಡಕು ಕುಟುಂಬಗಳು, ಸದಾ ಜಗಳ, ಕದನ, ನಿಂದನೆ, ವ್ಯಾಜ್ಯಗಳಿರುವಂತಹ ಕುಟುಂಬಗಳಾದರೆ ಇನ್ನೂ ಅತಿ ಹೆಚ್ಚಿನ ಒತ್ತಡಗಳಿಗೆ ಮಕ್ಕಳು ಸಿಕ್ಕುವುದಲ್ಲದೇ ಅವರ ಭಾವನೆಗಳಿಗೆ ಅಥವಾ ಮನಸ್ಸಿನ ಭಾವನಾತ್ಮಕ ಸ್ತರಗಳಿಗೆ ತೀರಾ ಘಾಸಿಯಾಗುತ್ತದೆ. ಘಾಸಿಯಾಗಿರುವ ಮನಸ್ಸು ಸಂತೋಷ ನೀಡುವಂತಹ ಕೆಲಸಗಳನ್ನು ಮಾಡಲು ಪ್ರೇರೇಪಣೆಗಳು ಎಲ್ಲಿಂದ ಪಡೆಯಬೇಕು? ಮನೆಗಳಲ್ಲಿ ತೊಂದರೆ ಅಥವಾ ಒತ್ತಡ ಅನುಭವಿಸುವ ಅವರಿಗೆ ಶಾಲೆಗಳಲ್ಲೋ, ಇನ್ನಿತರ ಸಾಮಾಜಿಕ ಪರಿಸರದಲ್ಲೋ ಸಾಂತ್ವನ ಸಿಗಬೇಕು. ಚೇತೋಹಾರಿ ವಾತಾವರಣ ಸೃಷ್ಟಿಯಾಗಬೇಕು. ಸಹವಾಸಗಳು ಸಾತ್ವಿಕವಾಗಿದ್ದು ಅಥವಾ ಭಿನ್ನ ನೆಲೆಗಟ್ಟಿನ ಮತ್ತು ಭಿನ್ನ ಸಂಸ್ಕಾರದ ಕುಟುಂಬಗಳ ಹಿನ್ನೆಲೆಯದಾಗಿದ್ದರೆ ಒಂದಿಷ್ಟು ಬೇರೆಯ ರೀತಿಯ ಜೀವನ ಶೈಲಿಯ ಉದಾಹರಣೆಗಳು ಸಿಗುತ್ತವೆ ಹಾಗೂ ಉತ್ತಮತೆಗೆ ಒಂದಿಷ್ಟು ಮಾದರಿಗಳು, ಹಿತದ ಅನುಭವಗಳು ಆಗಬಹುದು. ಆದರೆ, ಅದೇ ಬಗೆಯ ಜನರು, ಅದೇ ಬಗೆಯ ಪರಿಸರದವರ ಮತ್ತು ಹಿನ್ನೆಲೆಯವರ ಒಡನಾಟಗಳು ಮಕ್ಕಳ ಮನಸ್ಸಿನ ಒತ್ತಡವನ್ನು ಮತ್ತಷ್ಟು ಗಾಢಗೊಳಿಸುತ್ತದೆ. ಫಲವಾಗಿ ನಕಾರಾತ್ಮಕ ಧೋರಣೆ ಮತ್ತು ಚಟುವಟಿಕೆಗಳಿಗೆ ಪ್ರೇರಣೆಯಾಗುತ್ತದೆ.

ಸಾಮಾಜಿಕ ಸಂಸ್ಥೆಗಳ ಪಾತ್ರ

ಸಾಮಾಜಿಕ ಸಂಸ್ಥೆಗಳು ಮತ್ತು ಸರಕಾರದ ಅಂಗಸಂಸ್ಥೆಗಳು ಇಂತಹ ವಿಷಯಗಳಿಗೆ ಗಮನ ನೀಡಬೇಕು ಮತ್ತು ಅವರಿಗೆ ಕ್ರಿಯಾಶೀಲವಾದ, ಶೈಕ್ಷಣಿಕವಾದ, ಸೃಜನಾತ್ಮಕವಾದ ಹಾಗೂ ಅವರ ಪ್ರತಿಭೆಗಳಿಗೆ ಅವಕಾಶ ನೀಡುವಂತಹ ಪರಿಸರವನ್ನು ಒದಗಿಸುವಂತಹ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ತಮ್ಮ ಕುಟುಂಬ ಮತ್ತು ತಾವು ಬೆಳೆಯುತ್ತಿರುವಂತಹ ಪರಿಸರದ ಗಾಯಗಳಿಗೆ ಸಾಂತ್ವನ ನೀಡುವಂತಹ ಸಮಾಜೋಭಾವುಕ ಚಟುವಟಿಕೆಗಳಲ್ಲಿ ಅವರು ತೊಡಗಬೇಕು. ಅನೇಕ ಸ್ವಯಂಸೇವಕ ಸಂಘಗಳು ಇಂತಹ ಮಕ್ಕಳಿಗೆ ಸಾತ್ವಿಕ ಪರಿಸರವನ್ನು ಒದಗಿಸುವಂತಹ ಚಟುವಟಿಕೆಗಳನ್ನು ನೀಡುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿವೆ. ಆದರೆ ಇರುವ ಬಹುದೊಡ್ಡ ಗಾತ್ರದ ಮಕ್ಕಳಿಗೆ ಈ ಚಟುವಟಿಕೆಗಳು ಸಾಕಾಗುತ್ತಿಲ್ಲ. ಎಲ್ಲರನ್ನೂ ಒಳಗೊಳ್ಳುವಂತಹ ಕೆಲಸ ಪ್ರಾಯೋಗಿಕವಾಗಿ ಸಾಧ್ಯವಾಗುತ್ತಿಲ್ಲ. ಈ ವಿಷಯದಲ್ಲಿ ಸಮಾಜದಲ್ಲಿರುವ ಪ್ರತಿಯೊಂದು ಸಂಸ್ಥೆಗೂ, ವ್ಯವಸ್ಥೆಗೂ ಹಾಗೂ ವ್ಯಕ್ತಿಗೂ ಅವರವರದೇ ಆದಂತಹ ಪಾತ್ರವಿದೆ. ಸಮುದಾಯದ ನಾಯಕರು ಮತ್ತು ಸರಕಾರದಲ್ಲಿ ನೀತಿಗಳನ್ನು ರೂಪಿಸುವವರು ಇಂತಹ ಮಕ್ಕಳಿಗೆ ಬೆಂಬಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲೇ ಬೇಕು. ಏಕೆಂದರೆ ಮಗುವು ಮಗುವಾಗಿಯೇ ಬಹಳ ಕಾಲ ಉಳಿದಿರುವುದಿಲ್ಲ. ಸೌಕರ್ಯಹೀನ ಮಕ್ಕಳಿಗೆ ಸೌಜನ್ಯದ ನೆಲೆಗಳು ಒದಗಿ ಅವರಿಗೆ ಸಮಾಜೋಭಾಂದವ್ಯದ ಅನುಭವವಾಗದಿದ್ದರೆ ಸಮಾಜವು ಹಿಂಸೆ, ಕ್ರೌರ್ಯಗಳು ತುಂಬಿರುವಂತಹ ಅಪರಾಧಿಗಳನ್ನು ಗುಂಪುಗುಂಪಾಗಿ ನೋಡುತ್ತದೆ.

ಸೌಜನ್ಯ ಮತ್ತು ಸಾಂತ್ವನದ ಈ ಶಿಬಿರಗಳು, ಕಾರ್ಯಕ್ರಮಗಳು ಅಥವಾ ನೆಲೆಗಳು ತಾಂತ್ರಿಕವಾಗಿ ಸಹಜವಾಗಿರಬೇಕು. ಆದರ್ಶಗಳನ್ನು ಬೋಧನೆ ಮಾಡುವಂತಹ, ಮೌಲ್ಯ ಉದಾತ್ತತೆ ಇತ್ಯಾದಿಗಳ ಭಾಷಣಗಳು ಮತ್ತು ಪ್ರವಚನಗಳನ್ನು ಒಳಗೊಂಡಿರಬಾರದು. ಭಜನೆ, ಧ್ಯಾನ, ಇನ್ನೆಂತದ್ದೋ ಧಾರ್ಮಿಕತೆಗಳ ಆಚರಣೆಗಳಾವುವೂ ಇರಕೂಡದು. ಕುಶಿಕುಶಿಯಾಗಿ, ಒಳ್ಳೊಳ್ಳೆಯ ಮಾತುಗಳಿಂದ, ಹಾಸ್ಯ ಚಟಾಕಿಗಳನ್ನು ಹಾರಿಸಿಕೊಂಡು ಒಟ್ಟೊಟ್ಟಿಗೆ ಆಡುವ, ಹಾಡುವ, ಕುಣಿಯುವ ಅಥವಾ ಒಳ್ಳೊಳ್ಳೆಯ ಸಿನೆಮಾಗಳನ್ನು ನೋಡುವಂತಹ ಕಾರ್ಯಕ್ರಮಗಳಾಗಿರಬೇಕು. ಸಂತೋಷ ಕೊಡುವ ಆಟಗಳು, ನಕ್ಕು ನಲಿಸುವ ನೋಟಗಳು ಪ್ರಧಾನವಾಗಿರಬೇಕು. ಒಟ್ಟೊಟ್ಟಿಗೆ ಊಟ ಮಾಡುವ, ಪುಸ್ತಕಗಳನ್ನು ಓದುವ, ಓದಿದ್ದನ್ನು ಹೇಳಿ ವಿಷಯಗಳನ್ನು ಹಂಚಿಕೊಳ್ಳುವ ಅನುಭವಗಳು ಅಲ್ಲಿರಬೇಕು. ಚಿತ್ರ ಬಿಡಿಸುವುದು, ಕರಕುಶಲ ವಸ್ತುಗಳನ್ನು ಮಾಡುವುದು ಇತ್ಯಾದಿಗಳು ಮಕ್ಕಳ ಮನಸ್ಸನ್ನು ಮತ್ತಷ್ಟು ಸ್ವಾಸ್ಥಗೊಳಿಸುತ್ತವೆ. ಅವರಿಗೆ ರಂಗಭೂಮಿಯ ಚಟುವಟಿಕೆಗಳು, ಕುಂಬಾರಿಕೆ, ಮರಗೆಲಸ, ಕಂಪ್ಯೂಟರ್‌ನಲ್ಲಿ ಸೃಜನಶೀಲವಾಗಿ ಏನಾದರೂ ಮಾಡುವುದೂ ಕೂಡಾ ಒಳ್ಳೆಯದೇ. ಆರ್ಥಿಕವಾಗಿ ಮತ್ತು ಸಂಬಂಧಗಳ ವಿಷಯದಲ್ಲಿ ಮುರುಕು ಮತ್ತು ಒಡಕು ಕಂಡಿರುವ ಕುಟುಂಬಗಳ ಮಕ್ಕಳನ್ನು ಅವರ ಮಾನಸಿಕ ಒತ್ತಡದಿಂದ ಮುಕ್ತಗೊಳಿಸುವ ಕೆಲಸವನ್ನು ತುರ್ತಾಗಿ ಮಾಡುವುದರಿಂದ ಮುಂದಿನ ಗುಂಪು ಘರ್ಷಣೆಗಳಲ್ಲಿ ತೊಡಗುವ ಅಪರಾಧಿಗಳ ಸಂಖ್ಯೆಯನ್ನು ಗಮನೀಯವಾಗಿ ಕಡಿಮೆ ಮಾಡಬಹುದು ಅಥವಾ ಇಲ್ಲವಾಗಿಸಬಹುದು. ಆ ಮಕ್ಕಳ ಕುಟುಂಬಗಳನ್ನೂ ಕೂಡಾ ಒಳಗೊಳ್ಳುವ ಕಾರ್ಯಕ್ರಮಗಳೂ ಕೂಡ ಒಳಿತೇ. ಅವರ ಮಕ್ಕಳ ದೆಸೆಯಿಂದ ಅವರ ಕುಟುಂಬಗಳಿಗೂ ಸಾಂತ್ವನ ಮತ್ತು ಸೌಜನ್ಯದ ಅನುಭವಗಳು ಸಿಗುವಂತಹ ಶಿಬಿರಗಳು ಮತ್ತು ಕಾರ್ಯಕ್ರಮಗಳು ಆಗುತ್ತಿರಬೇಕು. ಈ ಮಕ್ಕಳು ಅಪರಾಧಿಗಳಾಗುವ ಸಾಧ್ಯತೆಗಳನ್ನು ತಪ್ಪಿಸುವುದೇ ಮುಂದಿನ ಗುಂಪುಘರ್ಷಣೆಗಳನ್ನು ಕಡಿಮೆ ಮಾಡಲು ಅಥವಾ ಇಲ್ಲವಾಗಿಸಲು ಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News