ಭೂಮಿಯ ಗುರುತ್ವಾಕರ್ಷಣೆ ದ್ವಿಗುಣವಾದರೆ ಏನಾಗುತ್ತಿತ್ತು!

Update: 2020-03-08 07:24 GMT

ಭೂಮಿ ಸೂರ್ಯನ ಸುತ್ತ ಸುತ್ತುವ ಒಂದು ಆಕಾಶ ಕಾಯ. ಇದರ ಚಲನೆಯ ನಿಯಂತ್ರಕ ಸೂರ್ಯ. ಸೂರ್ಯನಿಗಿರುವಂತೆ ಭೂಮಿಗೂ ಸಹ ತನ್ನದೇ ಆದ ಗುರುತ್ವಾಕರ್ಷಣೆ ಇದೆ. ಮರದ ಕೆಳಗೆ ಮಲಗಿದ ನ್ಯೂಟನ್ ತನ್ನ ತಲೆ ಮೇಲೆ ಸೇಬು ಬಿದ್ದಾಗ, ಇದು ಗುರುತ್ವಾಕರ್ಷಣೆಯ ಪರಿಣಾಮ ಎಂದು ಜಗಕ್ಕೆ ಸಾರಿದ. ಇದರಿಂದ ಭೂಮಿಗೂ ಗುರುತ್ವ ಇದೆ ಎಂಬುದು ಸಾಬೀತಾಯಿತು. ಆದರೆ ಸೂರ್ಯನ ಗುರುತ್ವಾಕರ್ಷಣ ಶಕ್ತಿಗೆ ಹೋಲಿಸಿದರೆ ಭೂಮಿಯ ಗುರುತ್ವಾಕರ್ಷಣ ಶಕ್ತಿ ಕಡಿಮೆ.

ಗುರುತ್ವ ಎಂದರೆ

 ಗುರುತ್ವ ಎಂಬುದು ನಿಗೂಢ ಶಕ್ತಿಯಾಗಿದ್ದು, ಇತರ ವಸ್ತುಗಳನ್ನು ತನ್ನೆಡೆಗೆ ಆಕರ್ಷಿಸುತ್ತದೆ. ಅದು ಪ್ರತಿಯೊಂದು ವಸ್ತುವಿನಲ್ಲೂ ಇರುತ್ತದೆ. ಒಂದು ವಸ್ತು/ಕಾಯ ಎಷ್ಟು ದೊಡ್ಡದಿದೆ ಮತ್ತು ಅದು ಎಷ್ಟು ಸಮೀಪದಲ್ಲಿದೆ ಎಂಬುದರ ಆಧಾರದ ಮೇಲೆ ಗುರುತ್ವ ನಿರ್ಧರಿತವಾಗುತ್ತದೆ.

 ಗುರುತ್ವ ಏಕೆ ಮುಖ್ಯ?

ಗುರುತ್ವಾಕರ್ಷಣೆ ಬಹಳ ಮುಖ್ಯ. ಅದು ಇಲ್ಲದೇ ಹೋದರೆ ನಾವು ಬದುಕಲು ಅಸಾಧ್ಯ. ಸೂರ್ಯನ ಗುರುತ್ವಾಕರ್ಷಣೆಯಿಂದ ಭೂಮಿ ತನ್ನ ಕಕ್ಷೆಯಲ್ಲಿಯೇ ಸುತ್ತುತ್ತದೆ. ಇದರಿಂದ ನಮ್ಮ ಭೂಮಿ ಸೂರ್ಯನಿಂದ ದೂರವೂ ಅಲ್ಲದ, ಸಮೀಪವೂ ಅಲ್ಲದ ಸ್ಥಾನದಲ್ಲಿದೆ. ಬಿಸಿಲು ಮತ್ತು ತಂಪು, ಬೆಳಕು ಮತ್ತು ಕತ್ತಲು ಎಲ್ಲವೂ ಸಮಸ್ಥಿತಿಯಲ್ಲಿವೆ. ಹಾಗಾಗಿ ಜೀವಿಗಳಿಗೆ ಅನುಕೂಲಕರವಾದ ವಾತಾವರಣ ಇದೆ.

ಭೂಮಿಗೂ ಗುರುತ್ವಾಕರ್ಷಣೆ ಇದೆ. ಅದು ಇರುವುದರಿಂದ ಭೂಮಿಯ ಮೇಲಿನ ಸಾಗರಗಳ ನೀರು ಅಂತರಿಕ್ಷದಲ್ಲಿ ಚೆಲ್ಲದಂತೆ ಹಾಗೆಯೇ ನಿಂತಿದೆ. ನಾವು ನಡೆದಾಡಲು, ಅಣೆಕಟ್ಟು, ಮನೆ, ಬಂಗಲೆ, ಸೇತುವೆ ಮುಂತಾದ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವಾಗಿದೆ. ಆದಾಗ್ಯೂ ಭೂಮಿಯ ಗುರುತ್ವ ಎಲ್ಲೆಡೆ ಒಂದೇ ರೀತಿಯಿಲ್ಲ. ಕಡಿಮೆ ದ್ರವ್ಯರಾಶಿ ಸ್ಥಳಗಳಿಗಿಂತ ಹೆಚ್ಚು ಭೂಗರ್ಭವಿರುವ ಸ್ಥಳಗಳಲ್ಲಿ ಗುರುತ್ವ ಹೆಚ್ಚು ಇದೆ. ಭೂಮಿಯ ಗುರುತ್ವದಲ್ಲಿನ ವ್ಯತ್ಯಾಸ ಅಳೆಯಲು ನಾಸಾವು ಗ್ರಾವಿಟಿ ರಿಕವರಿ ಮತ್ತು ಗ್ರೇಸ್ ಎಂಬ ಎರಡು ಬಾಹ್ಯಾಕಾಶ ನೌಕೆಗಳನ್ನು ಬಳಸುತ್ತದೆ. ಇಂತಹ ಅತೀ ಮಹತ್ವವುಳ್ಳ ಭೂಮಿಯ ಮೇಲಿನ ಗುರುತ್ವವು ದ್ವಿಗುಣವಾದರೆ ಏನಾಗುತ್ತಿತ್ತು. ಪ್ರಕೃತಿ, ಮೂಲಭೂತ ಸೌಲಭ್ಯಗಳು, ಹೀಗೆಯೇ ಇರುತ್ತವೆಯೇ?.

ಸೂರ್ಯನು ಭೂಮಿಗಿಂತ 3,30,000 ಪಟ್ಟು ಹೆಚ್ಚು ಭಾರವಾಗಿದ್ದಾನೆ. ಹಾಗಾಗಿ ಸೂರ್ಯನ ಗುರುತ್ವವು ಸಹಜವಾಗಿ ಭೂಮಿಯನ್ನು ತನ್ನೆಡೆ ಎಳೆಯುತ್ತದೆ. ಅದೇ ವೇಳೆ ಭೂಮಿಗೂ ಸಹ ಗುರುತ್ವ ಇದ್ದು, ತನ್ನ ಅಕ್ಷೆಯಲ್ಲಿ ತಾನು ಸುತ್ತುತ್ತಾ ಅಂಡಾಕಾರದ ಪಥದಲ್ಲಿ ಸೂರ್ಯನನ್ನು ಸುತ್ತುತ್ತದೆ. ಭೂಮಿಯು ತನ್ನ ಕಕ್ಷೆಯಲ್ಲಿ ವೇಗವಾಗಿ ಚಲಿಸುತ್ತಿರುವುದರಿಂದ ಸೂರ್ಯನ ಬೃಹತ್ ಪ್ಲಾಸ್ಮಾದೊಳಗೆ ಸಿಲುಕಿಕೊಳ್ಳುವುದಿಲ್ಲ. ಒಂದು ವೇಳೆ ಭೂಮಿಯ ಗುರುತ್ವವು ಕೇವಲ ಶೇ.5 ರಷ್ಟು ಹೆಚ್ಚಾದರೆ ಸಾಕು, ಭೂಮಿಯ ಅಂಡಾಕಾರದ ಕಕ್ಷಾ ಪಥವೇ ಬದಲಾಗುತ್ತದೆ. ಆಗ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ವ್ಯತ್ಯಾಸವಾಗುತ್ತದೆ. ಬೇಸಿಗೆಯ ಪ್ರಮಾಣ ಹೆಚ್ಚಾಗುತ್ತದೆ ಮತ್ತು ವ್ಯಾಪಕವಾದ ಕ್ಷಾಮ ಉಂಟಾಗುತ್ತದೆ. ಇದರಿಂದ ವಿಶ್ವದ ಆರ್ಥಿಕ ಸ್ಥಿತಿ ಕುಸಿಯುತ್ತದೆ. ಕ್ಷಾಮದ ಪರಿಣಾಮದಿಂದ ಜೀವಿಗಳ ಉಳಿವು ಕಷ್ಟಸಾಧ್ಯವಾಗುತ್ತದೆ. ಇದು ಕೇವಲ ಶೇ.5ರಷ್ಟು ಗುರುತ್ವ ಹೆಚ್ಚಾದುದರ ಪರಿಣಾಮ. ಒಂದು ವೇಳೆ ಭೂಮಿಯ ಗುರುತ್ವವು ಡಬಲ್ ಆದರೆ ಏನಾಗುತ್ತೆ? ನೋಡೋಣ. ಸದ್ಯಕ್ಕೆ ಹವಾಮಾನ ಕಾಳಜಿಯನ್ನು ಪಕ್ಕಕ್ಕೆ ಇಡೋಣ. ವಾಸ್ತವತೆ ಬಗ್ಗೆ ಯೋಚಿಸೋಣ. ಇಂತಹ ತೀವ್ರವಾದ ಬದಲಾವಣೆಗಳು ಸಂಭವಿಸಿದಾಗ ಮೊದಲು ನಾವು ಭೂಮಿ ಮೇಲೆ ಜೀವಂತವಾಗಿ ಬದುಕಲು ಸಾಧ್ಯವಿಲ್ಲ. ಏಕೆಂದರೆ ಭೂಮಿಯ ಗುರುತ್ವ ದ್ವಿಗುಣವಾದರೆ ತಿರುಳು ತನ್ನಷ್ಟಕ್ಕೆ ತಾನೇ ಕುಸಿಯುತ್ತದೆ. ಅದರ ಕಂದಕದಲ್ಲಿ ನಾವೆಲ್ಲರೂ ಮಣ್ಣುಪಾಲಾಗುತ್ತೇವೆ ಅಥವಾ ಭೂಗರ್ಭದ ಶಾಖಕ್ಕೆ ಸುಟ್ಟು ಕರಕಲಾಗುತ್ತೇವೆ. ಭೂಮಿಯ ಈಗಿನ ತೂಕ ಅಂದಾಜು 61,024 ಕಿ.ಗ್ರಾಂ.ಗಳು. ಅಂದರೆ 6 ರ ಮುಂದೆ 24 ಸೊನ್ನೆಗಳನ್ನು ಬರೆದರೆ ಎಷ್ಟಾಗುತ್ತದೆಯೋ ಅಷ್ಟು ಕಿ.ಗ್ರಾಂ.ಗಳು. ಭೂಮಿಯ ಗುರುತ್ವ ಹೆಚ್ಚಾದರೆ ಭೂಮಿಯೊಳಗಿನ ಶಿಲಾ ಭಾರ ಹೆಚ್ಚಾಗಿ ಒಳಭಾಗದಲ್ಲಿ ಕುಸಿಯುತ್ತದೆ. ಇದರಿಂದ ಗ್ರಹದ ಮೇಲಿನ ಎಲ್ಲವೂ ಭೂಗಭರ್ ಸೇರುತ್ತವೆ.

ಒಂದು ವೇಳೆ ಇಂತಹ ಘೋರ ಸನ್ನಿವೇಶದಿಂದಲೂ ಪಾರಾದೆವು ಎಂದುಕೊಳ್ಳೋಣ. ಆಗ ಗುರುತ್ವದ ಪ್ರಭಾವದಿಂದ ನಿಮ್ಮ ಆಕಾರವೇ ಬದಲಾಗಿರುತ್ತದೆ. ಅದು ನೀವೇ ಎಂದು ಯಾರೂ ನಿಮ್ಮನ್ನು ಗುರುತಿಸಲಾರರು. ಗುರುತ್ವ ಹೆಚ್ಚಳದಿಂದ ವಾತಾವರಣದಲ್ಲಿ ಒತ್ತಡ ಹೆಚ್ಚುತ್ತದೆ. ಹೆಚ್ಚಿದ ಒತ್ತಡದಲ್ಲಿ ಹೃದಯ ಮತ್ತು ಶ್ವಾಸಕೋಶಗಳು ಹದಗೆಡುತ್ತವೆ. ಹಾಸಿಗೆ ನೋವನ್ನು ತರುತ್ತದೆ. ಮೆಟ್ಟಲುಗಳನ್ನು ಕಂಡು ಯ ಉಂಟಾಗುತ್ತದೆ. ಪ್ರಯಾಣ ಪ್ರಯಾಸವಾಗುತ್ತದೆ. ಏಕೆಂದರೆ ಚಲನೆ ನಿಧಾನವಾಗುತ್ತದೆ. ಮೂಲಭೂತ ಸೌಕರ್ಯಗಳಾದ ಗಾಳಿ, ನೀರು, ನೆಲ ಇವುಗಳ ಲಭ್ಯತೆಯಲ್ಲಿ ಏರುಪೇರುಗಳಾಗುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನದಿಂದಲೂ ಕೂಡಾ ಪ್ರಕೃತಿಯನ್ನು ರಕ್ಷಿಸಿಕೊಳ್ಳಲಾಗುವುದಿಲ್ಲ. ಎಲ್ಲಾ ರೀತಿಯಾದ ಮಾನವ ನಿರ್ಮಿತ ಕಟ್ಟಡಗಳು ಮತ್ತು ಶಕ್ತಿಗಳು ನಾಶ ಹೊಂದುತ್ತವೆ. ವಿಮಾನಗಳು ಹಾರಾಟದ ಶಕ್ತಿ ಕಳೆದುಕೊಂಡರೆ, ಕೃತಕ ಉಪಗ್ರಹಗಳು ಭೂಮಿಗೆ ವಾಪಾಸಾಗುತ್ತವೆ. ಏಕೆಂದರೆ ಭೂ ಕಕ್ಷೆ ಬದಲಾಗಿರುತ್ತದೆ.

ಮರಗಳ ತೂಕ ಹೆಚ್ಚಾಗಿ ಕುಸಿಯುತ್ತವೆ. ಮರಗಳು ತಮ್ಮ ಬದುಕಿಗೆ ಬೇಕಾದ ನೀರನ್ನು ಪಂಪ್ ಮಾಡುವ ಸಾಮರ್ಥ್ಯ ಕಳೆದುಕೊಳ್ಳುತ್ತವೆ. ಮಾನವನ ಅಂಗರಚನೆಯಲ್ಲಿ ಬದಲಾವಣೆಗಳಾಗುತ್ತವೆ. ಅಳತೆಯಲ್ಲಿ ಎತ್ತರ, ಗಾತ್ರದಲ್ಲಿ ಹೆಚ್ಚಳ, ದಪ್ಪನಾದ ದೇಹ, ಮೂಳೆಗಳ ಸಾಂದ್ರತೆ ಹೆಚ್ಚಳದಿಂದ ತೂಕದಲ್ಲಿ ಹೆಚ್ಚಳವಾಗುತ್ತದೆ. ವಾಯುಮಂಡಲದಲ್ಲಿ ವಿಕಿರಣಶೀಲತೆ ಹೆಚ್ಚಾಗಿ ಜೀವನ ನರಕಸದೃಶವಾಗುತ್ತದೆ. ಭೂಮಿಯ ಗುರುತ್ವ ಹೆಚ್ಚಳವು ಸೂರ್ಯನ ಮೇಲೂ ಪರಿಣಾಮ ಬೀರುತ್ತದೆ. ಆಗ ಸೂರ್ಯನೂ ಸಮತೋಲನ ತಪ್ಪಿ ಎಣ್ಣೆ ಹೊಡೆದಂತೆ ಓಲಾಡುತ್ತದೆ. ಸೂರ್ಯನ ಆಂತರಿಕ ಬಿಸಿಯು ಪ್ಲಾಸ್ಮಾದಿಂದ ಬೇರ್ಪಡಲು ಪ್ರಯತ್ನಿಸುತ್ತದೆ. ಗುರುತ್ವಾಕರ್ಷಣೆಯ ಹಠಾತ್ ಬದಲಾವಣೆಯಿಂದ ಹೈಡ್ರೋಜನ್ ಅನಿಲ ಹೀಲಿಯಂ ಆಗಿ ಪರಿವರ್ತನೆಯಾಗುವ ಕ್ರಿಯೆ ವೇಗವಾಗುತ್ತದೆ ಮತ್ತು ಬೃಹತ್ ಪ್ರಮಾಣದ ಶಕ್ತಿ ಬಿಡುಗಡೆಯಾಗುತ್ತದೆ. ಭೂಮಿಯ ಮೇಲಿನ ಜೀವಿಗಳನ್ನು ಕೊಲ್ಲಲು ಇಷ್ಟು ಶಕ್ತಿ ಸಾಕಲ್ಲವೇ? ಇದು ಹೀಗೆಯೇ ಆಗುತ್ತದೆ ಎಂದು ನಿಖರವಾಗಿ ಹೇಳಲು ಆಗದಿದ್ದರೂ ಹೀಗೆ ಆಗಬಹುದು ಎಂದು ಕೆಲವು ಸಾಧ್ಯತೆಗಳನ್ನು ನಿಮ್ಮ ಮುಂದೆ ಇಡಬಹುದು.

Writer - ಆರ್.ಬಿ. ಗುರುಬಸವರಾಜ

contributor

Editor - ಆರ್.ಬಿ. ಗುರುಬಸವರಾಜ

contributor

Similar News