ಅತ್ತ ಮಗುವಿನ ಕಣ್ಣೀರು ತುಂಬಿದ ಮುಗ್ಧ ನಗೆಯಂತಹ ಹಾಯ್ಕುಗಳು

Update: 2020-03-08 07:30 GMT

ನಾನು ಈ ನೆಲದ ಮೊಗ್ಗು

ನನ್ನ ಬೇರು ನೆಲದಾಳದಲ್ಲಿ

ನಿಮ್ಮ ಕಡು ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ

ಪ್ರಸ್ತುತ ಸನ್ನಿವೇಶದ ಎಲ್ಲ ಪ್ರಶ್ನೆಗಳಿಗೆ ಸಮರ್ಪಕ ಉತ್ತರವಾಗಿ ಈ ಮೇಲಿನ ಹಾಯ್ಕು ಕಾಣಿಸುತ್ತದೆ. ಶಿಗ್ಗಾಂವಿಯ ಪ.ಪೂ. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ ಹೆಬಸೂರು ರಂಜಾನ್ ಅವರ ‘ಮಂಜಿನೊಳಗಣ ಕೆಂಡ’ ಹಾಯ್ಕುಗಳ ಸಂಕಲನದಿಂದ ಹೆಕ್ಕಿದ ಅಣಿಮುತ್ತಿದು. ಈಗಾಗಲೇ ಎರಡು ಕವನ ಸಂಕಲನ ಪ್ರಕಟಿಸಿರುವ ರಂಜಾನ್ ಸ್ಮಾಲ್ ಈಸ್ ಬ್ಯೂಟಿಫುಲ್ ಎನ್ನುವ ತತ್ವವನ್ನು ತನ್ನ ಅಂತಸತ್ವವಾಗಿಸಿಕೊಂಡ ಜಪಾನಿ ಕಾವ್ಯವೆಂದು ಹೆಸರಾಗಿರುವ ಹಾಯ್ಕುಗಳ ಸಂಕಲನ ಪ್ರಕಟನೆಗೆ ತೆಗೆದುಕೊಂಡ ತಯಾರಿ ಮೂರು ವರ್ಷ. ಮೂರು ಸಾಲಿನಲ್ಲಿ ಮಿಂಚಿನಂತೆ ಬೆಳಗಿ ವಿಶಿಷ್ಟ ಅರ್ಥ ಹೊಮ್ಮಿಸುವ ಸಾಲುಗಳು ಓದುಗರನ್ನು ಸಶಕ್ತವಾಗಿ ಹಿಡಿದಿಡುತ್ತವೆ. ಅರ್ಪಣೆಯನ್ನೇ ಅಪರೂಪವಾಗಿ ಕಟ್ಟಿಕೊಟ್ಟಿರುವ ರಂಜಾನ್, ಶರೀಫನಿಗೆ/ಕನಕನಿಗೆ/ಎದೆ ತೆರೆದ ಕವಿಗಳಿಗೆ/ಕನ್ನಡಿಗೆ/ಕತ್ತಲಿಗೆ/ಎದೆ ಗೀರಿದ ಬೆಳಕಿಗೆ... ಎನ್ನುವ ಮೂಲಕ ಆಸಕ್ತಿ ಕೆರಳಿಸುತ್ತಾರೆ. ಪಿಸುನುಡಿಯ ಕಾವ್ಯ ಮೇಲು ನೋಟಕ್ಕೆ ಸುಲಭ ಎನಿಸಿದರೂ ಸರಳವಲ್ಲ; ಆದರಿಲ್ಲಿ ಕವಿಯ ಧ್ಯಾನಸ್ಥ ಸ್ಥಿತಿ, ಎಲ್ಲ ಸಂಗತಿಗಳನ್ನು ಸೂಕ್ಷ್ಮವಾಗಿ ದಿಟ್ಟಿಸುವ ದೃಷ್ಟಿಕೋನ, ತನ್ನೊಳಗೆ ಆವಾಹಿಸಿ ಅನುಭವಕ್ಕೆ ದಕ್ಕಿಸಿಕೊಂಡು ಬರೆವ ಪ್ರಬುದ್ಧತೆ ಅದನ್ನು ಸಾಧ್ಯವಾಗಿಸಿದೆ. ಮರದೊಳಗಡಗಿದ ಮಂದಾಗ್ನಿಯಂತೆಯೇ ಮಂಜಿನೊಳಗಣ ಕೆಂಡದಂತೆ ಹಾಯ್ಕುಗಳು ಕಂಡು ಬರುತ್ತವೆ.

ಕವಿ ರಂಜಾನ್ ಕಾವ್ಯವನ್ನು ಧ್ಯಾನಿಸಿಲ್ಲ; ಬದಲಿಗೆ ಧ್ಯಾನವನ್ನು ಧ್ಯಾನಿಸಿ ಬರೆದ ಹಾಯ್ಕುಗಳು ಇಲ್ಲಿವೆ. ಅಮ್ಮನ ಕಿರುಬೆರಳ ಹಿಡಿದು ಸಾಗುವ ಕಿರುಗೂಸಿನಂತಹ ಹಾಯ್ಕುಗಳನ್ನು ನೀಡಿರುವ ಪ್ರೀತಿಯ ಕವಿ ರಂಜಾನ್ ರಚಿಸಿದ ಹಾಯ್ಕುಗಳ ಹಿಂದೆ ಅಪಾರವಾದ ಮೌನವಿದೆ. ಇಂತಹ ಸಾಲುಗಳು ಮೂಡಿ ಬರಲು ಅಪಾರವಾದ ಕರುಣಾ ಮೈತ್ರಿಗಳು ದುಡಿದಿರಬೇಕು. ನಿಸರ್ಗದಲ್ಲಿ ಹಾಸು ಹೊಕ್ಕಾಗಿರುವ ಕರುಣಾ ಮೈತ್ರಿಯೇ ಈ ಹಾಯ್ಕುಗಳ ಜೀವದ್ರವ್ಯ. ಕನ್ನಡದ ಶ್ರಾವಕ ಪ್ರತಿಭೆ ನಿಮ್ಮನ್ನು ನಿಶ್ಚಯವಾಗಿ ಪೊರೆಯುತ್ತದೆ ಎಂದಿದ್ದಾರೆ ಸಂಕಲನಕ್ಕೆ ಮೊದಲ ಮಾತುಗಳನಾಡಿರುವ ಎಸ್. ನಟರಾಜ್ ಬೂದಾಳು ಅವರು. ನಿತ್ಯ ನಾವು ಕಂಡೂ ಕಾಣದ ಸತ್ಯಗಳೇ ಹಾಯ್ಕುಗಳಾಗಿ ಅರಳಿ ನಿಂತಿವೆ. 330 ಹಾಯ್ಕುಗಳಿರುವ ಈ ಸಂಕಲನ ಬದುಕಿನ ಎಲ್ಲ ಮಗ್ಗಲುಗಳನ್ನು ದರ್ಶಿಸುತ್ತದೆ. ಜಾತಿ, ಮತ, ಧರ್ಮ, ದೇವರುಗಳೆಲ್ಲ ಮನುಷ್ಯರನ್ನು ಒಡೆದು ಹೋಳಾಗಿಸಿ ಕಂದರ ನಿರ್ಮಾಣ ಮಾಡಿರುವಂತ ಸಂಧಿಗ್ಧತೆಯಲ್ಲಿ ಕವಿ ಚಪ್ಪಲಿಯ ಹೊಲಿಗೆಗಳ ಮೂಲಕ ಒಗ್ಗಟ್ಟಿನ ಮಂತ್ರವನ್ನು ಹೇಳಿಸುತ್ತಾರೆ ನೋಡಿ, ಇದು ಅತಿ ಸೂಕ್ಷ್ಮತೆಯ ದಿಟ್ಟಿಸುವಿಕೆಯಿಂದ ಹುಟ್ಟಿದ ರೂಪಕದ ಬೆರಗು. ಮಾನವೀಯತೆಯ ತೋಳು ತಬ್ಬುವ ಸೊಬಗು.

 ಚಪ್ಪಲಿಯ ಹೊಲಿಗೆಗಳು

 ಮಾತನಾಡಿಕೊಳ್ಳುತ್ತಿವೆ

 ಸದಾ ಹೀಗೆ ಕೂಡಿಸುತ್ತಿರೋಣ

ಹಸಿವು ಎಲ್ಲ ನಾಚಿಕೆ, ಸಂಕೋಚಗಳನ್ನು ದೂರವಿರಿಸುತ್ತದೆ. ಈ ದೇಶದಲ್ಲಿ ಹಸಿದವನೊಬ್ಬ ಕದ್ದರೆ ಏನಾಗಬಹುದು ಎಂಬುದು ಗೊತ್ತಿರುವ ಸಂಗತಿ. ಅದನ್ನೇ ಇಲ್ಲಿ ಅಭಿವ್ಯಕ್ತಿಸುತ್ತಾರೆ ಕವಿ. ವಿಡಂಬನೆ, ವ್ಯಂಗ್ಯ ಈ ಹಾಯ್ಕುವಿನಲ್ಲಿ ಕಂಡು ಬರುತ್ತದೆ. ಹಸಿದೆ/ಕಸಿದೆ/ಈಗ ರಿಮ್ಯಾಂಡ್ ಹೋಮ್‌ನ ಅತಿಥಿ/ ಮರೆತರಷ್ಟೇ ನೆನಪಿನ ಹಂಗು. ಸದಾ ಅವಳ ನೆನಪಿನಲ್ಲಿಯೇ ದಿನಗಳೆವವನಿಗೆ ಕಾಲದ ಹಂಗಿಲ್ಲ. ಹಾಗೆಂದೇ ಆತ ಬಂದು ಹೋಗುವ ಋತುಮಾನಗಳನ್ನು ಲೆಕ್ಕವಿಟ್ಟಿಲ್ಲ. ನಿನ್ನ ನೆನಪಿನೊಂದಿಗೆ/ಕಾಲ ಕಳೆಯುವವನಿಗೆ/ವಸಂತ ಬಂದರೆಷ್ಟು? ಹೋದರೆಷ್ಟು?/ ಇಂದಿನ ವೈದ್ಯರ ಮತ್ತು ಆಸ್ಪತ್ರೆಗಳ ಸ್ಥಿತಿಯನ್ನು ಕಟ್ಟಿಕೊಡುವ ಹಾಯ್ಕಿನ ಸಾಲುಗಳನ್ನು ಗಮನಿಸಿ. ಅಸ್ವಸ್ಥ ಆರೋಗ್ಯ ಸ್ಥಿತಿಯನ್ನು, ರೋಗಿಷ್ಟ ವ್ಯವಸ್ಥೆಯನ್ನು ಸುಧಾರಿಸುವುದು ಎಲ್ಲಿಂದ ಎಂಬುದು ಅರ್ಥವಾಗುತ್ತದೆ.

       ಎಲ್ಲ ರೋಗಗಳು

       ಅಡರಿಕೊಂಡಿವೆ

       ಆಸ್ಪತ್ರೆಗೂ ಮತ್ತು ವೈದ್ಯರಿಗೂ

ಎಲ್ಲ ಧರ್ಮಗಳ ಮುಖ್ಯಸ್ಥರು ದೇವರನ್ನು ಗುತ್ತಿಗೆ ತೆಗೆದುಕೊಂಡವರಂತೆ ವರ್ತಿಸುವುದು ಈ ಕ್ಷಣದ ಪ್ರಕ್ಷುಬ್ಧತೆಗೆ ಮೂಲ ಕಾರಣ. ಸಂಧಾನವೋ, ಒಪ್ಪಂದವೋ ಯಾವುದಕ್ಕಾದರೂ ಗುತ್ತಿಗೆ ತೆಗೆದುಕೊಂಡವರನ್ನೇ ಮಾತನಾಡಿಸಬೇಕಿದೆ. ಜನಸಾಮಾನ್ಯರ ಮನಸಿನಲ್ಲೇನಿದೆ ಎಂಬುದು ಯಾರಿಗೆ ಬೇಕಿದೆ? ಅಥವಾ ದೇವರ ಒಳಮನಸು ಏನು ಹೇಳುತ್ತಿರಬಹುದು? ಕೇಳಲು ಬಿಟ್ಟರೆ ತಾನೆ...ಹಾಗೆಂದೇ ಕವಿ ಇಲ್ಲಿ ಅಂಗಲಾಚುತ್ತಾನೆ... ತನ್ನ ಮತ್ತು ದೇವರ ಮಧ್ಯೆ ಅನುಸಂಧಾನಕ್ಕೆ ಅಡ್ಡಿಯಾಗುತ್ತಿರುವವರ ಬಳಿ ಬೇಡಿಕೊಳ್ಳುತ್ತಾನೆ.

       ರಾಮ-ಅಲ್ಲಾನ ಜೊತೆ

       ಒಂದಿಷ್ಟು ಮಾತನಾಡಬೇಕಿದೆ

       ಧರ್ಮ ಭೀರುಗಳೇ ಅವಕಾಶ ಕೊಡಿ

ಹಾಗೆಯೇ ಇಂದು ಅಮೃತವಾಹಿನಿಯೊಂದು ಹರಿಯಬೇಕಿದೆ ಪ್ರತಿ ಧರ್ಮದ ಎದೆಯಿಂದಲೆದೆಗೆ ಸತತ. ಪ್ರೀತಿಯೊಂದೇ ಎಲ್ಲ ಧರ್ಮಗಳ ತಿರುಳಾಗಬೇಕಿದೆ. ಹಾಗಾದಾಗಲೇ ಮನುಕುಲಕ್ಕೆ ಉಳಿಗಾಲವಿದೆ. ಅಂತಹ ಒಲವನ್ನು ಎದೆಗಿಳಿಸಿಕೊಂಡರೆ ಆಗಬಹುದಾದ ಪರಿಣಾಮದ ಕುರಿತು ಕವಿ ಹೀಗೆ ಬಣ್ಣಿಸುತ್ತಾನೆ. ಪ್ರೀತಿ ಎದೆಗಿಳಿಯಿತು/ಎಲ್ಲ ಧರ್ಮಗಳ/ಪುಟಗಳು ಖಾಲಿಯಾದವು/ ಮುಂದುವರಿದು ಕವಿ ದೇವರಿಗೆ ಬೇಡಿಕೊಳ್ಳುವ ಪರಿ ಗಮನಿಸಿ. ದೇವರೇ/ನೀನು ಕಲ್ಲಾಗೇ ಇರು/ನಮ್ಮ ಮನಸು ಮಧುರವಾಗಿರಿಸು/ ಇಂದಿನ ಕೃಷಿ, ರೈತನ ದಾರುಣ ಪರಿಸ್ಥಿತಿ, ಮಳೆಯ ಕಣ್ಣಾ ಮುಚ್ಚಾಲೆ, ಸರಕಾರದ ಕಠೋರ ನಿಲುವುಗಳು, ಅನ್ನದಾತನ ಆತ್ಮಹತ್ಯೆ ಎಲ್ಲವಕ್ಕೂ ಪ್ರತ್ಯುತ್ತರವಾಗಿ ಎರಡು ಹಾಯ್ಕುಗಳು ಗಮನ ಸೆಳೆಯುತ್ತವೆ.

       ಕರಿ ಹೊಲದ ಬಿರುಕು

       ಬತ್ತಿ ಹೋದ ಎದೆ

       ಬಿಳಿ ಮೋಡಗಳಾಟ

       ನನ್ನಪ್ಪನ ಎದೆಯ ಮೇಲೆ

       ಹಾದು ಹೋದ ಹೆದ್ದಾರಿಯನ್ನು

       ಕ್ಷಮಿಸಿ ಬಿಡು ದೇವರೇ

ಪ್ರತಿ ಹಾಯ್ಕುಗಳೂ ಗಮನ ಸೆಳೆಯುತ್ತವೆ. ಅಂತರಂಗದ ಕಣ್ಣು ತೆರೆಸುತ್ತವೆ. ಆಲೋಚನೆಯನ್ನು ಉದ್ದೀಪನಗೊಳಿಸಿ ವಿಚಾರ ಪ್ರಚೋದಕ ಶಕ್ತಿಗೆ ಹೊಳಪು ನೀಡುತ್ತವೆ. ಬಂಡಾಯ ಕವಿ ಸತೀಶ ಕುಲಕರ್ಣಿ ಅವರು ಹೇಳುವ ಹಾಗೆ ಅತ್ತ ಮಗುವಿನ ಕಣ್ಣೀರು ತುಂಬಿದ ಮುಗ್ಧ ನಗೆಯಂತೆ ಇಲ್ಲಿನ ಹಾಯ್ಕುಗಳು ಮನಗೆಲ್ಲುತ್ತವೆ. ಕವಿಯೇ ಹೇಳಿದ ಹಾಗೆ ತುಟಿಗೆ ಒಂದಿಷ್ಟು/ನಗುವ ಸುರುವಿ/ನೀವು ವಿಷದ ಬಟ್ಟಲಿಟ್ಟರೂ ಕುಡಿಯುತ್ತೇವೆ/ ಇಲ್ಲಿನ ಹಾಯ್ಕುಗಳು ಮೈಮನವ ಮುದಗೊಳಿಸುವ ಔಷಧದಂತೆ ಕೆಲಸ ಮಾಡುವಾಗ ಕುಡಿಯದೆಯೇ ಇರುತ್ತೇವೆಯೇ? ಸಂಕಲನದ ಎಲ್ಲ ಹಾಯ್ಕುಗಳೂ ಮತ್ತೆ ಮತ್ತೆ ಮೆಲುಕು ಹಾಕುವಂತಿವೆ. ಇಂತಹ ಅಪರೂಪದ ಸಂಕಲನ ನೀಡಿದ ಕವಿ ಹೆಬಸೂರು ರಂಜಾನ್ ಅವರಿಗೆ ಶುಭ ಹಾರೈಸುವೆ. ಓದುವ ಖುಷಿ ನಿಮ್ಮದಾಗಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News