ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಬಹಿಷ್ಕಾರಕ್ಕೆ ಸಿಪಿಐ ನಿರ್ಣಯ

Update: 2020-03-08 14:49 GMT

ಬೆಂಗಳೂರು, ಮಾ. 8: ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಅಮಾನುಷ ಫ್ಯಾಸಿಸ್ಟ್ ಕಾನೂನುಗಳಿಗೆ ನಾಗರಿಕ ಸಮಾಜದಲ್ಲಿ ಜಾಗವಿಲ್ಲ. ಹೀಗಾಗಿ ಮೂರು ಕಾನೂನುಗಳ ಬಹಿಷ್ಕಾರಕ್ಕೆ ಸಿಪಿಐ ನಿರ್ಣಯ ಕೈಗೊಂಡಿದೆ.

ರವಿವಾರ ಇಲ್ಲಿನ ಮಲ್ಲೇಶ್ವರಂನ ಸಿಪಿಐ ಕೇಂದ್ರ ಕಚೇರಿ ಘಾಟೆ ಭವನದಲ್ಲಿ ಏರ್ಪಡಿಸಿದ್ದ ಸಿಪಿಐ ಬೆಂಗಳೂರು ಜಿಲ್ಲಾ ಮಂಡಳಿ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ. ಸಿಎಎ ಧರ್ಮನಿರಪೇಕ್ಷತೆ ಮತ್ತು ನ್ಯಾಯದ ಸಮಾನತೆಯ ತತ್ವಗಳ ವಿರುದ್ಧವಿದೆ. ದೇಶದ ನಾಗರಿಕರನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಬಿಜೆಪಿ, ಸಿಎಎಯನ್ನು ದೋಷಪೂರಿತವಾಗಿ ಬಳಸಿಕೊಳ್ಳುತ್ತಿದೆ. ಸಮಾಜದ ಧರ್ಮನಿರಪೇಕ್ಷ ಮೌಲ್ಯಗಳ ಮೇಲೆ ದಾಳಿ ಮಾಡುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗಮನಹರಿಸಲು ವಿಳಂಬ ಮಾಡುತ್ತಿರುವುದು ಸಲ್ಲ ಎಂದು ಪಕ್ಷ ಆಕ್ಷೇಪಿಸಿದೆ.

ಎನ್‌ಪಿಆರ್, ಎನ್‌ಆರ್‌ಸಿಗೆ ಒಂದೇ ಬಾರಿಗೆ ಮಾಹಿತಿ ಸಂಗ್ರಹಿಸುವ ಮೂಲಕ ಈ ಪ್ರಕ್ರಿಯೆ ಮರೆಮಾಚಿ ನಡೆಸುವ ಕೇಂದ್ರ ಸರಕಾರದ ಉದ್ದೇಶ ಪೂರ್ವಕ ವಂಚಕ ಕುತಂತ್ರವನ್ನು ಸಿಪಿಐ ಖಂಡಿಸಿದೆ. ದೇಶದ ನಾಗರಿಕರನ್ನು ಗೊಂದಲಕ್ಕೆ ಒಳಪಡಿಸಿ ಶಾಸನಬದ್ಧ ಜನಗಣತಿ ಕಾರ್ಯವನ್ನು ಕೇಂದ್ರ ಬಹಿರಂಗವಾಗಿಯೇ ಬುಡಮೇಲು ಮಾಡುತ್ತಿದೆ ಎಂದು ಟೀಕಿಸಿದೆ.

ಈ ಕಾನೂನಿಗೆ ರೂಪಿಸಲಾಗಿರುವ ನಿಯಮಾವಳಿಗಳಿಗೆ ನಾಗರಿಕ ಸಮಾಜದಲ್ಲಿ ಸ್ಥಾನವಿಲ್ಲ. ಇವು ನಾಝಿ ಆಳ್ವಿಕೆಯ ಅಮಾನವೀಯ ಫ್ಯಾಸಿಸ್ಟ್ ಶಾಸನಗಳಾಗಿವೆ. ಅವು ಬಡವರ ವಿರೋಧಿ. ಅಲ್ಲದೆ, ಭ್ರಷ್ಟಾಚಾರಕ್ಕೆ ಉತ್ತೇಜನ ನೀಡುವುದಿಲ್ಲದೆ, ಬಡ ಜನರ ಶೋಷಣೆಗೆ ದಾರಿ ಮಾಡಿಕೊಡಲಿವೆ ಎಂದು ದೂರಲಾಗಿದೆ.

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧ ಉದ್ದೇಶ ಪೂರ್ವಕವಾಗಿ ಮತ್ತು ಕೀಳು ಅಭಿರುಚಿಯಲ್ಲಿ ದಾಳಿ ಮಾಡಿದ ಬಿಜೆಪಿ ನಾಯಕರ ವರ್ತನೆಯನ್ನು ಪಕ್ಷ ಖಂಡಿಸಿದೆ. ಅಲ್ಲದೆ, ಸಿಎಎ ವಿರುದ್ಧ ಜನಜಾಗೃತಿ ಆಂದೋಲನ ರೂಪಿಸಲು ಪಕ್ಷ ತೀರ್ಮಾನಿಸಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News