ಸಂವಿಧಾನ ರಕ್ಷಣೆಗಾಗಿ ಸಿಎಎ ವಿರೋಧಿ ಹೋರಾಟ: ಡಾ.ಮುಹಮ್ಮದ್ ನಜೀಬ್ ಖಾಸ್ಮಿ

Update: 2020-03-08 14:55 GMT

ಬೆಂಗಳೂರು, ಮಾ.8: ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿರುವುದರಿಂದ, ಮುಸ್ಲಿಮರು, ದಲಿತರು ಸೇರಿದಂತೆ ಇನ್ನಿತರ ವರ್ಗದ ಜನರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ ಎಂದು ಧಾರ್ಮಿಕ ಚಿಂತಕ ಡಾ.ಮುಹಮ್ಮದ್ ನಜೀಬ್ ಖಾಸ್ಮಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ರಿಚ್ಮಂಡ್ ಟೌನ್‌ನಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಕರ್ನಾಟಕದ ವತಿಯಿಂದ ಆಯೋಜಿಸಲಾಗಿದ್ದ ಚಿಂತನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೇಂದ್ರ ಸರಕಾರ ಯಾರಿಗೆ ಬೇಕಾದರು ದೇಶದ ಪೌರತ್ವ ಕೊಡಲಿ, ಅದಕ್ಕೆ ಯಾರ ಅಭ್ಯಂತರವು ಇಲ್ಲ. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಈಗ ಯಾವ ಸ್ವರೂಪದಲ್ಲಿ ತರಲಾಗಿದೆಯೋ, ಅದಕ್ಕೆ ನಮ್ಮ ಆಕ್ಷೇಪಣೆಯಿದೆ. ಏಕೆಂದರೆ, ಇದು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.

ನಮ್ಮ ನೆರೆಯ ರಾಷ್ಟ್ರಗಳಲ್ಲಿ ಪೀಡಿತರಾಗಿರುವವರಿಗೆ ನಮ್ಮ ದೇಶದಲ್ಲಿ ಪೌರತ್ವ ನೀಡುವುದಾದರೆ ಕೊಡಿ. ಆದರೆ, ಕೆಲವು ಧರ್ಮಗಳಿಗೆ ಸೇರಿದವರಿಗೆ ಮಾತ್ರ ಸೀಮಿತಗೊಳಿಸಿ, ಪೌರತ್ವ ನೀಡಲು ಮುಂದಾಗಿರುವುದು ಎಷ್ಟರಮಟ್ಟಿಗೆ ಸರಿ ಎಂದು ಮುಹಮ್ಮದ್ ನಜೀಬ್ ಖಾಸ್ಮಿ ಪ್ರಶ್ನಿಸಿದರು.

ಎನ್‌ಪಿಆರ್ ಅನ್ನು ಈ ಹಿಂದೆಯೂ ದೇಶದಲ್ಲಿ ನಡೆಸಲಾಗಿದೆ. ಆದರೆ, ಈ ಸರಕಾರ ಎನ್‌ಪಿಆರ್ ಅಡಿಯಲ್ಲಿ ಸಂಗ್ರಹಿಸುವ ಮಾಹಿತಿಗೆ ಹೆಚ್ಚುವರಿಯಾಗಿ ಸೇರಿಸಿರುವ ಎರಡು ಕಾಲಂಗಳು ಆತಂಕಕಾರಿಯಾಗಿವೆ. ಸಮೀಕ್ಷೆ ನಡೆಸುವ ಅಧಿಕಾರಿ ಯಾರನ್ನಾದರೂ ‘ಡೌಟ್‌ಫುಲ್’ ಎಂದು ನಮೂದಿಸಿದರೆ, ಆತ ತನ್ನ ಇಡೀ ಜೀವಮಾನವನ್ನು ಸರಕಾರಿ ಕಚೇರಿಗಳು ಹಾಗೂ ನ್ಯಾಯಾಲಯಗಳ ಮೆಟ್ಟಿಲು ಹತ್ತಲು ಕಳೆಯಬೇಕಾಗುತ್ತದೆ ಎಂದು ಅವರು ಹೇಳಿದರು.

ಅಸ್ಸಾಂನಲ್ಲಿ ನಡೆದ ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ಸುಮಾರು 19 ಲಕ್ಷ ಅಂತಿಮ ಪಟ್ಟಿಯಿಂದ ಹೊರಗೆ ಉಳಿದರು. ಅಲ್ಲಿನ ಘಟನೆಗಳು ಪ್ರತಿಯೊಬ್ಬರಲ್ಲೂ ಎನ್‌ಆರ್‌ಸಿ ಬಗ್ಗೆ ಆತಂಕ ಪಡುವಂತೆ ಮಾಡಿದೆ. ದೊಡ್ಡ ದೊಡ್ಡ ಹುದ್ದೆಯಲ್ಲಿದ್ದು ದೇಶದ ಸೇವೆ ಮಾಡಿದಂತಹವರನ್ನೆ ಇವತ್ತು ಎನ್‌ಆರ್‌ಸಿ ಪಟ್ಟಿಯಿಂದ ಹೊರಗೆ ಇಡಲಾಗಿದೆ ಎಂದು ಮುಹಮ್ಮದ್ ನಜೀಬ್ ಖಾಸ್ಮಿ ತಿಳಿಸಿದರು.

ಬಿಜೆಪಿ ಪಕ್ಷವು ಹಿಂದೂಗಳನ್ನು ಮುಸ್ಲಿಮರಿಂದ ದೂರ ಮಾಡುವ ಮೂಲಕ, ಮುಸ್ಲಿಮ್ ವಿರೋಧಿ ರಾಜಕಾರಣವನ್ನು ಆರಂಭದಿಂದಲೂ ಮಾಡಿಕೊಂಡಿದೆ. ಬಿಜೆಪಿಯನ್ನು ಸೋಲಿಸಲು ಹಿಂದೂ ಸಹೋದರರ ಜೊತೆ ನಮ್ಮ ಸಂಬಂಧವನ್ನು ಸುಧಾರಿಸಿಕೊಳ್ಳಬೇಕು. ನಮ್ಮ ನಡುವೆ ದ್ವೇಷದ ಗೋಡೆಯನ್ನು ನಿರ್ಮಿಸಲು ನಡೆಯುತ್ತಿರುವ ಷಡ್ಯಂತ್ರವನ್ನು ವಿಫಲಗೊಳಿಸಬೇಕಿದೆ ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ರಾಜ್ಯ ಉಪಾಧ್ಯಕ್ಷ ಸುಲೇಮಾನ್ ಖಾನ್, ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಶಾಹೀದ್ ಅಹ್ಮದ್, ಕಾರ್ಯದರ್ಶಿ ಶಫೀವುಲ್ಲಾ, ಮುಖಂಡ ಫೈಯಾಝ್ ಶರೀಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News