×
Ad

ಉತ್ತರ ಕರ್ನಾಟಕ ಭವನ ನಿರ್ಮಾಣ ಕುರಿತು ಸಿಎಂ ಜತೆ ಚರ್ಚೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

Update: 2020-03-08 20:48 IST

ಬೆಂಗಳೂರು, ಮಾ.8: ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಬರುವ ಜನರಿಗಾಗಿ ಮೂಲಭೂತ ಸೌಲಭ್ಯಗಳನ್ನೊಳಗೊಂಡ ಉತ್ತರ ಕರ್ನಾಟಕ ಭವನ ನಿರ್ಮಾಣಕ್ಕಾಗಿ ಸೂಕ್ತ ಜಾಗ ಮತ್ತು ಅನುದಾನವನ್ನು ಕಲ್ಪಿಸುವ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ರವಿವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ಉದ್ಘಾಟಿಸಿ ಮಾತನಾಡಿದ ಅವರು, ಉ.ಕ. ಭಾಗದ ಜನರು ಪರಿಶ್ರಮ, ಪ್ರಾಮಾಣಿಕತೆ ಮೈಗೂಡಿಸಿಕೊಂಡಿದ್ದು, ಬೆಂಗಳೂರನ್ನು ಕಟ್ಟಿ ಬೆಳೆಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಆ ಭಾಗದಿಂದ ಬೆಂಗಳೂರಿಗೆ ಬರುವ ಜನರಿಗೆ ವಸತಿ, ಊಟ ಇನ್ನಿತರ ಸೌಲಭ್ಯಗಳನ್ನೊಳಗೊಂಡ ಭವನ ನಿರ್ಮಾಣದ ಬಗ್ಗೆ ಸಿಎಂ ಗಮನಕ್ಕೆ ತರುತ್ತೇನೆ ಎಂದರು.

ಭವನ ನಿರ್ಮಾಣದ ಜೊತೆಗೆ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಸಂಸ್ಥೆಯೊಂದನ್ನು ತೆರೆಯುವ ಚಿಂತನೆಯನ್ನೂ ಉತ್ತರ ಕರ್ನಾಟಕ ಸಂಘ-ಸಂಸ್ಥೆಗಳ ಮಹಾ ಸಂಸ್ಥೆ ಮಾಡಬೇಕಾಗಿದೆ. ಇದರಿಂದ, ಆ ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣ ಲಭಿಸಿ ಉನ್ನತ ಹುದ್ದೆಗಳಿಗೆ ಹೋಗಲು ಸಾಧ್ಯ. ನಮ್ಮ ಸರಕಾರ ಕೃಷ್ಣಾ ನದಿಯ ನೀರನ್ನು ರೈತರ ಜಮೀನುಗಳಿಗೆ ಸರಾಗವಾಗಿ ಹರಿಸಲು ಕಾಲುವೆ ನಿರ್ಮಾಣಕ್ಕಾಗಿ 10 ಸಾವಿರ ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದರು.

ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಉತ್ತರ ಕರ್ನಾಟಕದ ಜನರು ಬೆಂಗಳೂರು ಸೇರಿದಂತೆ ಇನ್ನಿತರ ನಗರಗಳನ್ನು ಕಟ್ಟಿ ಬೆಳೆಸಿದ್ದು, ಅವರಿಗಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಕೃಷ್ಣಾ, ಮಹದಾಯಿ ಸೇರಿ ಉ-ಕ ಭಾಗದ ಎಲ್ಲ ನದಿಗಳ ಅಭಿವೃದ್ಧಿ ಕೇಂದ್ರ ಸರಕಾರ ರಾಷ್ಟ್ರೀಯ ಯೋಜನೆ ಅಡಿಯಲ್ಲಿ 1 ಲಕ್ಷ ಕೋಟಿ ರೂ.ಮೀಸಲಿಡಬೇಕೆಂದು ತಿಳಿಸಿದರು.

ಉತ್ತರ ಕರ್ನಾಟಕದ ಶಾಸಕರಿಗೆ ಇಚ್ಛಾಶಕ್ತಿಯ ಕೊರತೆಯಿದ್ದು, ಮುಂದಿನ ದಿನಗಳಲ್ಲಿ ಉ.ಕ.ಭಾಗದ ಜನರಿಗೆ ಎಲ್ಲ ರೀತಿಯ ಅನುಕೂಲಗಳನ್ನು ಮಾಡಿಕೊಡುತ್ತಾರೆ ಎಂದು ನಂಬಿದ್ದೇವೆ ಎಂದು ಹೇಳಿದರು. ಉ-ಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ಗೌರವಾಧ್ಯಕ್ಷ ಶಂಕರ್ ಬಿದರಿ, ಕೃಷ್ಣಭಾಗ್ಯ ಜಲನಿಗಮದ ಚಂದ್ರಶೇಖರ್ ಬೂದಿಹಾಳಮಠ, ಜಲನಿಗಮದ ಬಿ.ಎನ್.ಬಿರಾದಾರ್ ಉಪಸ್ಥಿತರಿದ್ದರು.

ಬಿಎಸ್‌ವೈಗೆ ವಿಶ್ರಾಂತಿ ಇಲ್ಲ

ಮುಖ್ಯಮಂತ್ರಿ ಯಡಿಯೂರಪ್ಪ ಉ.ಕ. ಸಂಘ-ಸಂಸ್ಥೆಗಳ ಮಹಾ ಸಂಸ್ಥೆ ಉದ್ಘಾಟನಾ ಕಾರ್ಯಕ್ರಮಕ್ಕೆ ಬರಬೇಕಾಗಿತ್ತು. ಆದರೆ, ದಿಲ್ಲಿಯಿಂದ ಮಧ್ಯರಾತ್ರಿ ಬೆಂಗಳೂರಿಗೆ ಬಂದಿದ್ದರಿಂದ ಅವರಿಗೆ ವಿಶ್ರಾಂತಿ ಇಲ್ಲದಂತಾಗಿದೆ. ಬೆಳಗ್ಗೆ ಆರೆಸ್ಸೆಸ್ಸ್ ಮುಖ್ಯಸ್ಥ ಮೋಹನ್ ಭಾಗವತ್, ಬಿಎಸ್‌ವೈ ಅವರಿಗೆ ಕಾರ್ಯಕ್ರಮವೊಂದಕ್ಕೆ ಆಹ್ವಾನ ನೀಡಿದ್ದರಿಂದ ಅಲ್ಲಿಗೆ ಹೋಗಿದ್ದಾರೆ. ಹೀಗಾಗಿ, ಅವರ ಬದಲು ನಿಮ್ಮಲ್ಲಿ ನಾನು ಕ್ಷಮೆಯಾಚಿಸುತ್ತೇನೆ

-ಬಸವರಾಜ ಬೊಮ್ಮಾಯಿ, ಗೃಹ ಸಚಿವ

ಬಿಎಸ್‌ವೈ ವಿರುದ್ಧ ಆಕ್ರೋಶ

ಉ-ಕ ಸಂಘ-ಸಂಸ್ಥೆಗಳ ಮಹಾ ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಬಿಎಸ್‌ವೈ ಆಗಮಿಸದ ಹಿನ್ನೆಲೆಯಲ್ಲಿ ಆ ಭಾಗದ ಮುಖಂಡರು, ಕಾರ್ಯಕರ್ತರು ಬಹಿರಂಗವಾಗಿ ಬಿಎಸ್‌ವೈ, ಉ-ಕ ಭಾಗದ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News