ಪುರುಷ- ಮಹಿಳೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ಸಚಿವೆ ಶಶಿಕಲಾ ಜೊಲ್ಲೆ

Update: 2020-03-08 15:24 GMT

ಬೆಂಗಳೂರು, ಮಾ.8: ಗಂಡು ಮತ್ತು ಹೆಣ್ಣು ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಇಬ್ಬರಲ್ಲಿ ಯಾರು ಕೀಳಲ್ಲ ಮತ್ತು ಮೇಲೂ ಅಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ರವಿವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಕಿತ್ತೂರು ರಾಣಿ ಪ್ರಶಸ್ತಿ’ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪುರುಷ ಪ್ರಧಾನವಾದ ಸಮಾಜದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನ ಅವಕಾಶಗಳಿರಲಿಲ್ಲ. ಈ ಕಾರಣದಿಂದ ನಡೆದ ಬಹುದೊಡ್ಡ ಚಳವಳಿಯ ಕಾರಣದಿಂದ ಇಂದು ಎಲ್ಲವೂ ಸಿಗುವಂತಾಗಿದೆ. ಅಲ್ಲದೆ, ಮಹಿಳೆಯರು ಹಾಗೂ ಪುರುಷರು ಪರಸ್ಪರ ಅಗತ್ಯವಿದೆ ಎಂದು ತಿಳಿಸಿದರು.

ದೇಶದಲ್ಲಿ ಮಹಿಳೆಯರಿಗೆ ಅತ್ಯುನ್ನತ ಸ್ಥಾನ ನೀಡಲಾಗಿದ್ದು, ಅವರು ಎಲ್ಲ ಕೀಳರಿಮೆ ಬಿಟ್ಟು ಎಲ್ಲ ಕ್ಷೇತ್ರದಲ್ಲಿಯೂ ಮುಂದೆ ಬರಬೇಕು. ಮಹಿಳೆಯರಿಗೆ ಹೆಚ್ಚು ಅವಕಾಶಗಳು ನೀಡಿದಷ್ಟು ದೇಶ ಮತ್ತಷ್ಟು ಅಭಿವೃದ್ಧಿಯ ಕಡೆಗೆ ಸಾಗಲು ಸಾಧ್ಯವಾಗುತ್ತದೆ ಎಂದ ಅವರು, ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲರು. ಇದನ್ನು ಈಗಾಗಲೇ ಹಲವರು ನಿರೂಪಿಸಿದ್ದಾರೆ ಎಂದರು.

ರಾಜ್ಯ ಸರಕಾರ ಮಹಿಳೆಯರ ಪರವಾಗಿದ್ದು, ಈ ವರ್ಷದಲ್ಲಿ ಪ್ರತ್ಯೇಕವಾಗಿ ಮಕ್ಕಳ ಬಜೆಟ್ ಮಂಡಿಸಲಾಗಿದೆ. ಅಲ್ಲದೆ, ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಸೇರಿ ಹಲವು ಯೋಜನೆಗಳನ್ನು ಮುಂದುವರಿಸಲಾಗಿದೆ. ಜನರು ಅವುಗಳನ್ನು ಬಳಸಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಗ್ರಾಮೀಣ ಮತ್ತು ನಗರ ಭಾಗದಲ್ಲಿ ತಾಯಿಗೆ ಹೆಣ್ಣು ಮಗು ಹುಟ್ಟಿದರೆ, ಪೋಷಕರಿಗೆ ಭಾರ ಎಂಬಂತೆ ಭಾವಿಸುತ್ತಾರೆ. ಈ ನಿಲುವು ಬದಲಾಗಬೇಕು. ಪ್ರಸಕ್ತ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆಗೈಯುತ್ತಿದ್ದಾರೆ. ಸಮಾಜ ಪರಿವರ್ತನೆಯಾಗುತ್ತಿದೆ. ಪೋಷಣ್ ಅಭಿಯಾನದಲ್ಲಿ ಒಳ್ಳೆಯ ಆಹಾರ ಸೇವಿಸಿದರೆ ಪೌಷ್ಟಿಕವಾಗಿ ಮಕ್ಕಳು ಬೆಳೆಯುತ್ತಾರೆ ಎಂದು ಮಾಹಿತಿ ನೀಡಿದರು.

ಶಾಸಕ ಉದಯ್ ಬಿ.ಗರುಡಾಚಾರ್ ಮಾತನಾಡಿ, ಹೆಣ್ಣು ಮಕ್ಕಳಿಗೆ ಕಡಿಮೆ ಆದ್ಯತೆ ನೀಡಿಲ್ಲ. ಹೆಣ್ಣು ಮಕ್ಕಳ ಆರ್ಶಿವಾದ ಮತ್ತು ಸಹಕಾರ ಇದ್ದರೆ ಪುರುಷರು ಉತ್ತಮ ಸಾಧನೆ ಮಾಡಲು ಸಾಧ್ಯ. ಇಂದಿರಾ ಗಾಂಧಿಯಂತೆ ಮುಂದಿನ ದಿನ ಮಹಿಳೆಯೊಬ್ಬರು ಪ್ರಧಾನ ಮಂತ್ರಿಯಾಗಬೇಕು ಎಂದು ತಿಳಿಸಿದರು.

ಇದೇ ವೇಳೆ ಮಹಿಳಾ ಮತ್ತು ಮ್ಕಕಳ ಮತ್ತು ಮ್ಕಕಳ ಸಚಿವೆ ಶಶಿಕಲಾ ಜೊಲ್ಲೆ ‘ಸ್ತ್ರೀಶಕ್ತಿ ಗುಂಪುಗಳ ಯಶಸ್ವಿ ಕಥೆಗಳ ಅಂತರಾಳ - 15 ಸಂಚಿಕೆ ಹಾಗೂ ಮಕ್ಕಳ ಕಲ್ಯಾಣ ಯೋಜನೆಗಳ ಎಸ್‌ಒಪಿ ಬಿಡುಗಡೆ ಮಾಡಿದರು.

ಮಕ್ಕಳ ಕಲ್ಯಾಣ, ಮಹಿಳೆಯರ ಅಭಿವೃದ್ಧಿ, ಶಿಕ್ಷಣ, ಕ್ರೀಡಾ, ಸಾಹಿತ್ಯ, ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ, ಸಂಸ್ಥೆಗಳನ್ನು ಗುರುತಿಸಿ ಎಲ್ಲರಿಗೂ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಅಲ್ಲದೆ, ರಾಜ್ಯಮಟ್ಟದ ಸ್ತ್ರೀ ಶಕ್ತಿ ಗುಂಪುಗಳಿಗೆ ರಾಜ್ಯಮಟ್ಟದ ಪ್ರಶಸ್ತಿ, ಯಶೋಧರಮ್ಮ ದಾಸಪ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ, ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ನಿರ್ದೇಶಕ ಕೆ.ಎ.ದಯಾನಂದ ಸೇರಿ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News