ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಕ್ರಮ ಕೈಗೊಳ್ಳಿ: ಸಂಸದ ಬಚ್ಚೇಗೌಡ

Update: 2020-03-08 17:07 GMT

ಬೆಂಗಳೂರು, ಮಾ.8: ಬೇಸಿಗೆ ದಿನಗಳಲ್ಲಿ ಸಾಮಾನ್ಯವಾಗಿ ತಲೆದೋರುವ ಕುಡಿಯುವ ನೀರಿನ ಅಭಾವವನ್ನು ಸಮರ್ಪಕವಾಗಿ ನಿಭಾಯಿಸಲು ಕಾರ್ಯಯೋಜನೆ ರೂಪಿಸಿಕೊಳ್ಳುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸದಂತೆ ಕ್ರಮಕೈಗೊಳ್ಳಬೇಕೆಂದು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು. 

ರವಿವಾರ ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂ.ಗ್ರಾ. ಜಿಲ್ಲಾಡಳಿತ ಭವನದಲ್ಲಿರುವ ಜಿ.ಪಂ.ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣಾ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 97.94 ಕಿ.ಮೀ ರಸ್ತೆ ನಿರ್ಮಾಣಕ್ಕೆಂದು ಕೇಂದ್ರದಿಂದ ಅನುಮೋದನೆಗೊಂಡಿರುವ 54 ಕೋಟಿ ರೂ. ಅನುದಾನವನ್ನು ಸರಿಯಾಗಿ ಸದ್ಬಳಕೆ ಮಾಡಿ ರಸ್ತೆ ನಿರ್ಮಾಣವನ್ನು ಶೀಘ್ರವಾಗಿ ಆರಂಭಿಸುವಂತೆ ಬಚ್ಚೇಗೌಡ ಸೂಚಿಸಿದರು.

ಹೊಸಕೋಟೆ ತಾಲೂಕಿನಲ್ಲಿ ಹೆಚ್ಚು ವಲಸೆ ಬಂದಿರುವ ಜನರೆ ಇರುವ ಕಾರಣ ನಿವೇಶನ ರಹಿತ, ವಸತಿ ರಹಿತರೆ ಹೆಚ್ಚಾಗುತ್ತಾರೆ ಹಾಗಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಜಿಲ್ಲೆಯ ಅರ್ಹ ಫಲಾನುಭವಿಗಳನ್ನು ಗುರುತಿಸಿ. ಗ್ರಾಮ, ತಾಲೂಕು ಪಂಚಾಯತ್ ಅಧ್ಯಕ್ಷರು ಅರ್ಹರಿಗೆ ಯೋಜನೆಯ ಸೌಲಭ್ಯ ದೊರೆತಿದೆಯೆ ಎಂದು ಖಾತರಿಪಡಿಸಿಕೊಳ್ಳುವಂತೆ ಅವರು ಸೂಚಿಸಿದರು.

ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಶಾಲೆ, ಗ್ರಾಮ ಪಂಚಾಯತ್, ದೇವಸ್ಥಾನ ಸೇರಿದಂತೆ ಅಗತ್ಯವಿರುವಲ್ಲಿ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಫಸಲ್ ಬಿಮಾ ಯೋಜನೆಯಡಿ ವಿಮಾ ಕಂಪೆನಿಗಳ ಭಾಗವಹಿಸುವಿಕೆ ಹೆಚ್ಚಿಸುವ ಮೂಲಕ ರೈತರಿಗೆ ಯೋಜನೆಯ ಸೌಲಭ್ಯದ ಕುರಿತು ಅರಿವು ಮತ್ತು ಪ್ರಚಾರ ಕೈಗೊಳ್ಳಲು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಬಚ್ಚೇಗೌಡ ತಿಳಿಸಿದರು.

ನರೇಗಾ ಯೋಜನೆಯಡಿ ಜಿಲ್ಲೆಯಲ್ಲಾಗಿರುವ ಪ್ರಗತಿ ಕುರಿತು ಕೇಳಿದಾಗ ಸಂಬಂಧಿಸಿದ ಜಿ.ಪಂ.ಉಪ ಕಾರ್ಯದರ್ಶಿ ಕರಿಯಪ್ಪ ಮಾತನಾಡಿ, ಜಿಲ್ಲೆಯಲ್ಲಿ 82 ಸಾವಿರ ಉದ್ಯೋಗ ಕಾರ್ಡ್‌ಗಳನ್ನು ವಿತರಿಸಿದ್ದು, 46 ಸಾವಿರ ಜನರು ನರೇಗಾದಡಿ ಕೆಲಸ ನಿರ್ವಹಿಸಿದ್ದಾರೆ ಎಂದರು.

ನರೇಗಾ ಯೋಜನೆಯಡಿ ತೋಟಗಾರಿಕೆ, ಕೃಷಿ, ಸಾಮಾಜಿಕ ಅರಣ್ಯ ಇಲಾಖೆಯವರ ಸಹಯೋಗದೊಂದಿಗೆ ಮಾವು, ಬೇವು, ಸೀಬೆ ಸೇರಿದಂತೆ ವಿವಿಧ ಸಸಿಗಳನ್ನು ನೆಡಲಾಗಿದೆ. ಕೊಟ್ಟಿಗೆ, ಚರಂಡಿ, ಕೃಷಿ ಹೊಂಡ ನಿರ್ಮಾಣ, ಕಾಂಕ್ರೀಟ್ ರಸ್ತೆ ನಿರ್ಮಾಣದಂತಹ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಜಿ.ಪಂ.ಸಿಇಓ ಎನ್.ಎಂ.ನಾಗರಾಜ ಮಾತನಾಡಿ, ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕೆಂದಿದ್ದೇವೆ ಎಂದು ತಿಳಿಸಿದಾಗ, ಬಚ್ಚೇಗೌಡರು ಶಾಲೆಗಳಲ್ಲಿ ಸಸಿ ಬೆಳೆಸುವುದು, ಕಿಚನ್ ಗಾರ್ಡನ್ ನಿರ್ಮಾಣದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಮನವೊಲಿಸಿ ಎಂದು ತಿಳಿಸಿದರು.

ಸಭೆಯಲ್ಲಿ ಬೆಂ.ಗ್ರಾಮಾಂತರ ಜಿ.ಪಂ.ಅಧ್ಯಕ್ಷೆ ಜಯಮ್ಮ, ಉಪಾಧ್ಯಕ್ಷೆ ಕನ್ಯಾಕುಮಾರಿ, ಹೊಸಕೋಟೆ ಶಾಸಕ ಶರತ್ ಕುಮಾರ್ ಬಚ್ಚೇಗೌಡ, ಅಪರ ಜಿಲ್ಲಾಧಿಕಾರಿ ಜಗದೀಶ್.ಕೆ.ನಾಯ್ಕ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News