×
Ad

ಸುಳ್ಳು ಹೇಳುವುದಕ್ಕೆ ನೊಬೆಲ್ ಸಿಗುತ್ತಿದ್ದರೆ, ಬಿಜೆಪಿ ಸರಕಾರಕ್ಕೆ ಸಿಗಲಿದೆ: ಪರಿಷತ್‌ ವಿಪಕ್ಷ ನಾಯಕ ಪಾಟೀಲ್

Update: 2020-03-09 18:03 IST

ಬೆಂಗಳೂರು, ಮಾ.9: ರಾಜ್ಯಪಾಲರ ಭಾಷಣ ಸುಳ್ಳಿನ ಕಂತೆಗಳ ಸರಮಾಲೆಗಳಿಂದ ಕೂಡಿದ್ದು, ಇದರಲ್ಲಿ ಯಾವುದೇ ಸತ್ವವಿಲ್ಲದಾಗಿದೆ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ಅವರು ಟೀಕಿಸಿದ್ದಾರೆ.

ಸೋಮವಾರ ವಿಧಾನ ಪರಿಷತ್‌ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಮುಂದುವರಿದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸುಳ್ಳು ಹೇಳುವುದಕ್ಕೆ ನೊಬೆಲ್ ಪ್ರಶಸ್ತಿ ಇದ್ದರೆ, ಈ ಸರಕಾರಕ್ಕೆ ತಾನಾಗಿಯೇ ಸಿಗಲಿದೆ ಎಂದು ಅವರು ಕುಟುಕಿದರು.

ನೆರೆ ಸಂದರ್ಭದಲ್ಲಿ ನಿರಾಶ್ರಿತ ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿಕೊಳ್ಳಲು 5 ಲಕ್ಷ ರೂ.ಗಳು ನೀಡಿದ್ದೇವೆ ಎಂದು ಹೇಳಿಸಿದ್ದಾರೆ. ಆದರೆ ಒಂದು ಲಕ್ಷ ರೂ. ಮಾತ್ರ ನೀಡಿ ಕೈತೊಳೆದುಕೊಂಡಿದೆ. ಈ ಪರಿಹಾರದ ಹಣವನ್ನು ಅತಿಹೆಚ್ಚು ಎಂದು ಬಿಂಬಿಸುವ ಪ್ರಯತ್ನವನ್ನು ನಡೆಸಿದೆ. ಅಲ್ಲದೆ, ಈ ಕಾಮಗಾರಿಗಳಲ್ಲಿ ಕಳಪೆ ಕಾಮಗಾರಿಗಳು ನಡೆದಿವೆ. ಅದರ ಬಗ್ಗೆ ಯಾವುದೇ ನಿಗಾ ವಹಿಸಲಿಲ್ಲ. ಅತಿವೃಷ್ಟಿ, ಅನಾವೃಷ್ಟಿ ಬಂದರೆ ಕೆಲವರಿಗೆ ಸುಗ್ಗಿಯೋ ಸುಗ್ಗಿ ಎಂದು ಅವರು ಆಪಾದಿಸಿದರು.

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಾಗೂ ಅನಂತರದ ಮೈತ್ರಿ ಸರಕಾರದಲ್ಲಾದ ಯೋಜನೆಗಳನ್ನು ರಾಜ್ಯಪಾಲರ ಭಾಷಣದಲ್ಲಿ ಸೇರಿಸಿದ್ದಾರೆ ಎಂದ ಅವರು, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಯಾವುದೇ ಯೋಜನೆಗಳನ್ನು ರೂಪಿಸಲು ಸಾಧ್ಯವಾಗಲಿಲ್ಲ ಎಂದು ದೂರಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರಕಾರ ರಚಿಸಿದರೂ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಬಹಳಷ್ಟು ದಿನಗಳು ಬೇಕಾದವು. ಹಾಗಾಗಿ ಇವರಿಗೆ ರಾಜ್ಯಪಾಲರಿಂದ ಯಾವುದೇ ಹೊಸ ವಿಷಯಗಳನ್ನು ಹೇಳಿಸಲು ಸಾಧ್ಯವಾಗಲಿಲ್ಲ ಎಂದು ಟೀಕಿಸಿದರು.

ಗೆದ್ದವರಿಗೆ ಹುರುಪಿಲ್ಲ: ಮೈತ್ರಿ ಸರಕಾರದ ಸಂದರ್ಭದಲ್ಲಿ ರಾಜೀನಾಮೆ ನೀಡಿ, ಅನಂತರ ಉಪಚುನಾವಣೆಯಲ್ಲಿ ಗೆದ್ದು ಬಂದು ಮಂತ್ರಿಯಾಗಿರುವವರಿಗೆ ಹುರುಪು ಇದ್ದಂತಿಲ್ಲ. ಮುಖದಲ್ಲಿ ತೇಜಸ್ಸು ಕಾಣುತ್ತಿಲ್ಲ. ಅವರ ಕನಸುಗಳು ನನಸಾಗಿಲ್ಲ ಎಂದು ಅನಿಸುತ್ತದೆ ಎಂದರು.

ಒಂದು ಹಂತದಲ್ಲಿ ಕಾಂಗ್ರೆಸ್‌ನ ಶಾಸಕರನ್ನು ನೀವು ಓಡಿಸಿಕೊಂಡು ಹೋದವರು ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ನಾರಾಯಣಸ್ವಾಮಿ, ನೀವೇ ಕಳುಹಿಸಿಕೊಟ್ಟದ್ದು. ನಾವು ಓಡಿಸಿಕೊಂಡು ಬರಲಿಲ್ಲ ಎಂದು ತಿರುಗೇಟು ನೀಡಿದರು. ಇದಕ್ಕೆ ಪ್ರತಿಯಾಗಿ, ಒಂದು ರೀತಿ ಕಳ್ಳರ ಕೈಗೆ ಕೀಲಿ ಕೊಟ್ಟಂತೆ ಆಗಿದೆ ಎಂಬ ಎಸ್.ಆರ್. ಪಾಟೀಲ್ ಹೇಳಿಕೆಗೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕರ ಮಾತಿಗೆ ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ಸದಸ್ಯರಾದ ನಾರಾಯಣಸ್ವಾಮಿ, ತೇಜಸ್ವಿನಿ, ಮತ್ತಿತರ ಸದಸ್ಯರು ಇದು ಅಸಂವಿಧಾನಿಕ ಪದ ಎಂದು ಹೇಳಿದರು. ಅಲ್ಲದೆ, ಅದನ್ನು ಕಡತದಿಂದ ತೆಗೆಯುವಂತೆ ಆಗ್ರಹಿಸಿದರು. ಅದಕ್ಕೆ ಪಾಟೀಲ್ ಅವರು, ಕುಂಬಳಕಾಯಿ ಕಳ್ಳ ಎಂದರೆ, ಹೆಗಲು ಏಕೆ ಮುಟ್ಟಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಜೆಡಿಎಸ್‌ನ ಶ್ರೀಕಂಠೇಗೌಡ, ಬೋಜೇಗೌಡ ಬೆಂಬಲಕ್ಕೆ ನಿಂತರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸರಕಾರದ ಮನೆ ನಿರ್ಮಿಸಿಕೊಳ್ಳಲು ಅನುದಾನ ನೀಡುವ ವೇಳೆ ನಮ್ಮ ಪಕ್ಷದವರ ಮನೆ ಸಂಪೂರ್ಣ ಹಾಳಾಗಿದ್ದರೂ ಕೆಟಗರಿ ಸಿ ಗೆ ಸೇರಿಸಲಾಗಿದೆ. ಅಲ್ಲದೆ, ಕೆಟಗರಿ ಸಿ ಯಲ್ಲಿ ಇರಬೇಕಾದವರು ಎ ಗೆ ಬಂದಿದ್ದಾರೆ ಎಂದು ಪರಿಷತ್ತಿನ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News