×
Ad

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಕೊರೋನ: ಪಕ್ಷಭೇದ ಮರೆತು ಸರಕಾರವನ್ನು ತರಾಟೆಗೆ ತೆಗೆದ ಸದಸ್ಯರು

Update: 2020-03-09 20:23 IST

ಬೆಂಗಳೂರು, ಮಾ. 9: ‘ಕೊರೋನ ವೈರಸ್’ ಸೋಂಕು ತಡೆಗೆ ಸರಕಾರ ಏನು ಕ್ರಮ ಕೈಗೊಂಡಿದೆ. ಅಲ್ಲದೆ, ಜನರು ಸೇರಿ ಸದನದ ಸದಸ್ಯರಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವ ಸಂಬಂಧ ಈವರೆಗೂ ಏಕೆ ಮಾಹಿತಿ ನೀಡಿಲ್ಲ ಎಂದು ಪಕ್ಷಭೇದ ಮರೆತು ಎಲ್ಲ ಸದಸ್ಯರು ಸರಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಸೋಮವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಆಡಳಿತ ಪಕ್ಷದ ಸದಸ್ಯ ಡಾ.ಭರತ್ ಶೆಟ್ಟಿ, ಕಾಂಗ್ರೆಸ್‌ನ ಡಾ.ಯತೀಂದ್ರ, ಡಾ.ರಂಗನಾಥ್, ಎನ್.ಎ.ಹಾರೀಸ್, ಮಾಜಿ ಸಚಿವರಾದ ಯು.ಟಿ. ಖಾದರ್, ಎಚ್.ಕೆ.ಪಾಟೀಲ್ ಸೇರಿ ಇನ್ನಿತರರು ಕೊರೋನ ವೈರಸ್ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದರು.

‘ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರುಗಳಿಂದ ಪ್ರತಿನಿತ್ಯ ಎಷ್ಟು ಜನ ಆಗಮಿಸುತ್ತಾರೆ? ಆ ಪೈಕಿ ಎಷ್ಟು ಮಂದಿ ತಪಾಸಣೆ ನಡೆಸಲಾಗುತ್ತಿದೆ. ಅದಕ್ಕೆ ಎಷ್ಟು ವೈದ್ಯರಿದ್ದಾರೆ, ಎಷ್ಟು ಆಸ್ಪತ್ರೆಗಳಲ್ಲಿ ಕೊರೋನ ವೈರಸ್ ತಪಾಸಣೆ ಮತ್ತು ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ ಸ್ಥಾಪಿಸಲಾಗಿದೆ. ಪರೀಕ್ಷೆ ಮತ್ತು ಮುನ್ನೆಚ್ಚರಿಕೆ ಕೈಗೊಳ್ಳುವ ಬಗ್ಗೆ ಉತ್ತರ ನೀಡುವುದು ಬೇಡವೇ? ಎಂದು ಸದಸ್ಯರು ಪ್ರಶ್ನೆಗಳ ಸುರಿಮಳೆಗೈದರು.

ಕೊರೋನ ಪತ್ತೆಯಾಗಿಲ್ಲ: ರಾಜ್ಯದಲ್ಲಿ ಈವರೆಗೆ ಕೊರೋನ ಸೋಂಕು ಯಾರಲ್ಲಿಯೂ ಪತ್ತೆಯಾಗಿಲ್ಲ. ಈ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ. ಸರಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಸೋಂಕು ಪೀಡಿತ ರಾಷ್ಟ್ರಗಳಿಂದ ಆಗಮಿಸುವವರು ಸೇರಿದಂತೆ ವಿಮಾನ ನಿಲ್ದಾಣ ಮತ್ತು ಬಂದರು ಪ್ರದೇಶಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದರು.

ಪ್ರತ್ಯೇಕವಾಗಿರಲು ಸೂಚನೆ: ವಿಮಾನ ನಿಲ್ದಾಣ ಹಾಗೂ ಬಂದರಿನ ಮೂಲಕ ಹೊರ ದೇಶಗಳಿಂದ ಆಗಮಿಸಿದ 73,811 ಮಂದಿ ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದೆ. ಆ ಪೈಕಿ ಸೋಂಕು ಪೀಡಿತ 11 ದೇಶಗಳಿಗೆ ಪ್ರವಾಸ ಕೈಗೊಂಡಿರುವ 468 ಪ್ರಯಾಣಿಕರನ್ನು ಗುರುತಿಸಿ, ಅವರ ತಪಾಸಣೆ ನಡೆಸಿ ಮನೆಗಳಲ್ಲಿ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ ಎಂದು ವಿವರ ನೀಡಿದರು.

ಫೆ.20ರಂದು ದುಬೈನಿಂದ ಬಂದು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದ ವ್ಯಕ್ತಿಯಲ್ಲಿ ರೋಗ ಲಕ್ಷಣ ಕಂಡುಬಂದಿತ್ತು. ಆದರೆ, ತೆಲಂಗಾಣಕ್ಕೆ ಹೋದ ಬಳಿಕ ಇದು ಪತ್ತೆಯಾಗಿತ್ತು. ಅವರ ಜೊತೆಗೆ ಸಂಪರ್ಕದಲ್ಲಿದ್ದ ಎಲ್ಲರನ್ನು ತಪಾಸಣೆಗೆ ಒಳಪಡಿಸಲಾಗಿದ್ದು ಯಾರಲ್ಲೂ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ ಎಂದು ಅವರು ತಿಳಿಸಿದರು.

ಕೊರೋನ ವೈರಸ್ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ರಾಜ್ಯ ಸರಕಾರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಬಿಬಿಎಂಪಿ, ನೌಕಾಪಡೆ, ಭೂಸೇನೆ ಹಾಗೂ ವಾಯುಸೇನೆ ಪ್ರತಿನಿಧಿಗಳು, ಸಾರಿಗೆ, ರೈಲ್ವೆ, ವಾರ್ತಾ, ಶಿಕ್ಷಣ, ನಗರಾಭಿವೃದ್ಧಿ, ಮೆಟ್ರೋ, ವಿಮಾನ ನಿಲ್ದಾಣ ಹಾಗೂ ಮಂಗಳೂರು ಬಂದರು ಪ್ರತಿನಿಧಿಗಳ ಸಭೆ ನಡೆಸಲಾಗಿದ್ದು, ಪ್ರತಿನಿತ್ಯದ ಚಟುವಟಿಕೆಗಳಲ್ಲಿ ಸೋಂಕು ಹರಡದಂತೆ ಜಾಗೃತಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮಕ್ಕಳಿಗೆ ರಜೆ: ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣಕ್ಕಾಗಿ ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಮಾತ್ರ ಶಾಲೆಗೆ ರಜೆ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದ ಅವರು, ಜನತೆ ಆತಂಕಗೊಳ್ಳುವ ಅಗತ್ಯವಿಲ್ಲ. ತೀವ್ರ ಸ್ವರೂಪದ, ಕೆಮ್ಮು, ನೆಗಡಿ ಈ ಸೋಂಕಿನ ಲಕ್ಷಣ. ಅಂತಹವರು ಮಾತ್ರ ಮಾಸ್ಕ್ ಧರಿಸಬೇಕು. ಸಾಧ್ಯವಾದಷ್ಟು ಹಸ್ತಲಾಘವ ಮಾಡದೆ ಇರುವುದೇ ಉತ್ತಮ ಎಂದರು.

ಸೋಂಕು ಪತ್ತೆಯಾದವರಿಗೆ ಚಿಕಿತ್ಸೆಗೆ ಈಗಾಗಲೇ ನಿಮ್ಹಾನ್ಸ್, ವಿಕ್ಟೋರಿಯಾ ಮತ್ತು ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆ ಪ್ರತ್ಯೇಕ ವಾರ್ಡ್ ವ್ಯವಸ್ಥೆ, ತರಬೇತಿ ಪಡೆದ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದ ಅವರು, ಹಾಸನ, ಶಿವಮೊಗ್ಗ, ಮೈಸೂರು, ಮಂಗಳೂರು, ಬೆಳಗಾವಿ, ಬಳ್ಳಾರಿ ಸೇರಿದಂತೆ ಮುಂದಿನ ದಿನಗಳಲ್ಲಿ ವಲಯವಾರು ಪರೀಕ್ಷೆಗೆ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು ಎಂದರು.

‘ಕೊರೋನ ವೈರಸ್ ಸೋಂಕು ಜಾಗೃತಿ ಮತ್ತು ಈ ಸಂಬಂಧ ಚಿಕಿತ್ಸೆಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ. ರಾಜ್ಯ ಸರಕಾರ ಆದ್ಯತೆ ಮೇಲೆ ಸೂಕ್ತ ಮುನ್ನೆಚ್ಚರಿಕೆ ಕೈಗೊಂಡಿದ್ದು, ಜಾಗೃತಿ ಮೂಡಿಸಲು ಕಾರ್ಯ ಕೈಗೊಂಡಿದೆ. ಜನತೆ ಆತಂಕಗೊಳ್ಳುವ ಅಗತ್ಯವಿಲ್ಲ’

-ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News