ಕಾಲರಾ ಪ್ರಕರಣಕ್ಕೂ ಜಲಮಂಡಳಿಗೂ ಸಂಬಂಧವಿಲ್ಲ: ಸ್ಪಷ್ಟನೆ
ಬೆಂಗಳೂರು, ಮಾ.9: ನಗರದಲ್ಲಿ ಉದ್ಬವಿಸುತ್ತಿರುವ ಕಾಲರ ಹಾಗೂ ಜಿ.ಈ. ಪ್ರಕರಣಗಳಿಗೂ, ಜಲಮಂಡಳಿಗೂ ಯಾವುದೇ ಸಂಬಂಧವಿಲ್ಲ ಎಂದು ಬೆಂಗಳೂರು ಜಲಮಂಡಳಿ ಸ್ಪಷ್ಟಪಡಿಸಿದೆ.
ಇತ್ತೀಚಿಗೆ ದಿನಪತ್ರಿಕೆಗಳಲ್ಲಿ ಕಾಲರ ಹಾಗೂ ಜಿ.ಈ. ವರದಿಯಾಗಿದೆ. ಬೆಂಗಳೂರು ಜಲಮಂಡಳಿಯ ಎಲ್ಲ ಮುಖ್ಯ ಅಭಿಯಂತರು, ಅಪರ ಅಭಿಯಂತರು ಸೇರಿ ಸಿಬ್ಬಂದಿಯು ಆಯಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಮಸ್ಯೆಗೆ ತುತ್ತಾಗಿರುವವರನ್ನು ವಿಚಾರಿಸಿದ ವೇಳೆ ಹೊರಗಡೆ ಹೊಟೇಲ್, ಸಮಾರಂಭಗಳಲ್ಲಿ ಆಹಾರ ಮತ್ತು ಪಾನೀಯ ಸೇವಿಸಿರುವುದು ತಿಳಿದುಬಂದಿದೆ.
ಈ ಸಮಸ್ಯೆ ಉದ್ಭವಿಸಿದ ಸ್ಥಳಗಳಲ್ಲಿ ಮಂಡಳಿಯು 29 ಕಡೆಗಳಲ್ಲಿ ನೀರಿನ ಮಾದರಿಯನ್ನು ಸಂಗ್ರಹಿಸಿ ಅದರಲ್ಲಿನ ಕ್ಲೋರಿನ್ ಪ್ರಮಾಣವನ್ನು ಪರಿಶೀಲಿಸಿದಾಗ ಎಲ್ಲ ಕಡೆಗಳಲ್ಲಿಯೂ ಕ್ಲೋರಿನ್ ಅಂಶ ಮಾನದಂಡದ ಪ್ರಕಾರ ನಿಗದಿತ ಪ್ರಮಾಣದಲ್ಲಿರುತ್ತದೆ. ಇದರಿಂದ ಮಂಡಳಿಯಿಂದ ಸರಬರಾಜಾಗುವ ನೀರಿನಿಂದ ಈ ಸಮಸ್ಯೆ ಉದ್ಭವಿಸಿರುವುದಿಲ್ಲವೆಂದು ಕಂಡುಬಂದಿರುತ್ತದೆ.
ಮಂಡಳಿಯು ನೀರು ಸರಬರಾಜು ಮಾಡುವ ಪ್ರದೇಶಗಳಲ್ಲಿ ದಿನವ 80 ರಿಂದ 100 ನೀರಿನ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷಿಸಿ ಫಲಿತಾಂಶದ ವಿವರಗಳನ್ನು ಮಾರನೇ ದಿನ ಮಂಡಳಿಯ ವೆಬ್‌ಸೈಟ್‌ನಲ್ಲಿ ಗ್ರಾಹಕರ ಮಾಹಿತಿಗಾಗಿ ಪ್ರಕಟಿಸಲಾಗುತ್ತಿದೆ. ಕಲುಷಿತ ನೀರು ಸರಬರಾಜಾದಲ್ಲಿ ಇಡೀ ಪ್ರದೇಶದಲ್ಲಿ ಇಂತಹ ಸಮಸ್ಯೆಗಳು ಉದ್ಭವವಾಗುತ್ತದೆ. ಇದು ಅಲ್ಲಲ್ಲಿ ಕಂಡು ಬಂದಿರುವುದರಿಂದ ಕಾವೇರಿ ನೀರು ಸರಬರಾಜುವಿಕೆಯಲ್ಲಿ ಯಾವುದೇ ಲೋಪವಾಗಿಲ್ಲವೆಂದು ಕಂಡುಬಂದಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.