ನೆರೆ ಪರಿಹಾರಕ್ಕೆ ಹೆಚ್ಚುವರಿ 5,400 ಕೋಟಿ ರೂ: ನಿರ್ಮಲಾಗೆ ಸಚಿವ ಡಿ.ವಿ.ಸದಾನಂದಗೌಡ ಮನವಿ

Update: 2020-03-09 16:51 GMT

ಬೆಂಗಳೂರು, ಮಾ.9: ಕೇಂದ್ರ ಹಣಕಾಸು ಆಯೋಗವು ಉತ್ತರ ಕರ್ನಾಟಕದ ನೆರೆ ಪರಿಹಾರಕ್ಕೆ ಹೆಚ್ಚುವರಿ 5,400 ಕೋಟಿ ರೂ. ನೀಡಬಹುದು ಎಂದು ಅಭಿಪ್ರಾಯಪಟ್ಟಿದೆ. ಈ ಅಂಶವನ್ನು ಸಿಎಂ ನನ್ನ ಗಮನಕ್ಕೆ ತಂದಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜತೆ ಚರ್ಚಿಸಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ತಿಳಿಸಿದರು. 

ಸೋಮವಾರ ವಿವಿ ಟವರ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾ.15ರಂದು ನಂದಿನಿ ಲೇಔಟ್‌ನ ಎಸ್.ಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ಉದ್ಯೋಗ ಮೇಳ ನಡೆಯಲಿದೆ. ಸುಮಾರು 7 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಅಂದು ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಕೆ. ಗೋಪಾಲಯ್ಯ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ವಿವಿಧ ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದು, ಸರಕಾರ ಮತ್ತು ಕೈಗಾರಿಕಾ ಸಂಸ್ಥೆಗಳು ಮೇಳಗಳ ಮೂಲಕ ಉದ್ಯೋಗ ಒದಗಿಸಲು ಪ್ರಯತ್ನಿಸುತ್ತಿವೆ. ಈ ನಿಟ್ಟಿನಲ್ಲಿ ಉದ್ಯೋಗ ಮತ್ತು ಕೌಶಲ್ಯ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಎಸೆಸೆಲ್ಸಿಯಿಂದ ಸ್ನಾತಕೋತ್ತರ ಪದವಿ ಹಾಗೂ ವೃತ್ತಿ ಕೋರ್ಸ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಮೇಳದಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ ಇದೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ 9513440261 ಅನ್ನು ಸಂಪರ್ಕಿಸಿ ಎಂದು ತಿಳಿಸಿದರು.

ಮಾಧ್ಯಮಗಳನ್ನು ದೂರ ಇಡುವುದು ಸರಿಯಲ್ಲ: ವಿಧಾನಸಭೆಯಲ್ಲಿ ಮಾಧ್ಯಮಗಳ ಮೇಲಿನ ನಿಬರ್ಂಧ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನಸಭೆಯ ತೀರ್ಮಾನಗಳು ಸ್ಪೀಕರ್‌ಗೆ ಬಿಟ್ಟಿದ್ದು. ಆದರೆ, ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳನ್ನು ದೂರ ಇಡುವುದು ಸರಿಯಲ್ಲ. ಕೆಲ ಮಾಧ್ಯಮಗಳು ಎಲ್ಲೆ ಮೀರಿವೆ. ಹಾಗೆಂದು ಎಲ್ಲ ಮಾಧ್ಯಮ ಸರಿಯಿಲ್ಲ ಎಂದು ತೀರ್ಮಾನಿಸಬಾರದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News