ಹುಟ್ಟಿನಿಂದ ವೃದ್ಧಾಪ್ಯದವರೆಗೂ ಮಹಿಳೆಯೇ ಪೋಷಕಿ: ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ

Update: 2020-03-09 17:45 GMT

ಬೆಂಗಳೂರು, ಮಾ.9: ಹೆಣ್ಣು ಸಹನೆ, ತಾಳ್ಮೆ ಹಾಗೂ ತ್ಯಾಗಮೂರ್ತಿಯಾಗಿದ್ದು, ಹುಟ್ಟಿನಿಂದ ವೃದ್ಧಾಪ್ಯದವರೆಗೂ ಮಹಿಳೆಯೇ ಪೋಷಕಿಯಾಗಿರುತ್ತಾಳೆ ಎಂದು ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಹೇಳಿದ್ದಾರೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಬಿಡಬ್ಲೂಎಸ್‌ಎಸ್‌ಬಿ ನೌಕರರ ಸಂಘ ಸಹಯೋಗದೊಂದಿಗೆ ಇಲ್ಲಿನ ಜಲಮಂಡಳಿ ಸುವರ್ಣ ಭವನದಲ್ಲಿ ಆಯೋಜಿಸಿದ್ದ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹೆಣ್ಣಿಲ್ಲದೆ ಜಗವಿಲ್ಲ ಎಂದ ಅವರು, ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ತಮ್ಮ ಧೈರ್ಯ, ಛಲ, ಕಿಚ್ಚು, ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿಯಿಂದ ಮೇಲುಗೈ ಸಾಧಿಸುತ್ತಿದ್ದಾರೆ. ಸಮಾಜ ಹಾಗೂ ಕುಟುಂಬದ ಆಧಾರಸ್ತಂಭ ಹೆಣ್ಣು, ಮಹಿಳೆಯರ ಸ್ವಾಸ್ಥವೇ ಸಮಾಜದ ಸ್ವಾಸ್ಥ ಎಂದು ತಿಳಿಸಿದರು.

ವಿಶ್ವಸಂಸ್ಥೆಯ ಯೂತ್ ಕರೇಜ್ ಪ್ರಶಸ್ತಿ ವಿಜೇತೆ ಅಶ್ವಿನಿ ಅಂಗಡಿ ಮಾತನಾಡಿ, ಶಕ್ತಿಯೇ ಮಹಿಳೆಯ ಗುಣ, ಪ್ರಶಸ್ತಿ ಗಳಿಕೆಯೇ ಸಾಧನೆಯಲ್ಲ. ಸಮಾಜಕ್ಕೆ ನಾವು ನೀಡುವ ಕೊಡುಗೆಯೇ ನಿಜವಾದ ಸಾಧನೆಯಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಕಡೆಗೆ ದುಡಿಯುವುದನ್ನು ಕಲಿಯಬೇಕಿದೆ ಎಂದು ತಿಳಿಸಿದರು.

ಸಂಧ್ಯಾ ಶೆಣೈ ಮಾತನಾಡಿ, ಇನ್ನೊಬ್ಬರ ಒಳ್ಳೆಯ ಗುಣವನ್ನು ಅಳವಡಿಸಿಕೊಳ್ಳಲು ಪ್ರಯತ್ನ ಮಾಡಬೇಕು. ನಾವು ಮಾಡುವ ಸಮಾಜ ಸೇವೆಗೆ ಹಣದ ಅವಶ್ಯಕತೆ ಇಲ್ಲ, ಮನೋಭಾವ ಬೇಕು. ಅಂತಹ ಮನೋಭಾವವನ್ನು ನಾವು ಬೆಳೆಸಿಕೊಂಡು, ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಮಂಡಳಿಯ ಮಹಿಳಾ ನೌಕರರಿಗೆ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಮಂಡಳಿಯ ಪಶ್ಚಿಮ ಭಾಗದ ಮಹಿಳಾ ಸಿಬ್ಬಂದಿಯವರಿಂದ ಪ್ರಸ್ತುತ ಸಮಾಜದಲ್ಲಿ ಮಳೆಯ ಮೇಲೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ಹೋರಾಡಬೇಕೆನ್ನುವ ಅರಿವು ಮೂಡಿಸುವ ಕಿರು ನಾಟಕವನ್ನು ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಚಲನಚಿತ್ರ ನಟಿ ಚೈತ್ರ ರಾವ್, ಜಲಮಂಡಳಿ ಆಡಳಿತಾಧಿಕಾರಿ ವಿದ್ಯಾಶ್ರೀ ಚಂದರಗಿ, ಹಿರಿಯ ಅಧಿಕಾರಿ ಕೆಂಪರಾಮಯ್ಯ, ಪ್ರಧಾನ ಅಭಿಯಂತರ ಕೃಷ್ಟಗೌಡ ತಾಯಣ್ಣವರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News