5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧ್ಯವೇ?: ಕೇಂದ್ರ ಸರಕಾರಕ್ಕೆ ಡಾ.ಜಿ.ಪರಮೇಶ್ವರ್ ಪ್ರಶ್ನೆ

Update: 2020-03-09 18:01 GMT

ಬೆಂಗಳೂರು, ಮಾ.9: ಪ್ರಧಾನಿ ನರೇಂದ್ರ ಮೋದಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸು ಕಾಣುತ್ತಿದ್ದಾರೆ. ಆದರೆ, ನಮ್ಮ ದೇಶದ ಜಿಡಿಪಿ ಶೇ.4.5ಕ್ಕೆ ಕುಸಿದಿದೆ. ಕೃಷಿ, ಕೈಗಾರಿಕೆಗಳು ಇಳಿಮುಖವಾಗಿವೆ ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಡಾ.ಜಿ.ಪರಮೇಶ್ವರ್ ಆತಂಕ ವ್ಯಕ್ತಪಡಿಸಿದರು.

ಸೋಮವಾರ ವಿಧಾನಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ಲಕ್ಷಾಂತರ ಜನರು ನಿರುದ್ಯೋಗಿಗಳಾಗಿದ್ದಾರೆ. ಬ್ಯಾಂಕುಗಳು ಮುಚ್ಚುತ್ತಿವೆ, ವಿಲೀನವಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧ್ಯವಾಗುತ್ತದೆಯೇ ಎಂದು ಪ್ರಶ್ನಿಸಿದರು.

ನಮ್ಮ ದೇಶದಲ್ಲಿ 1951ರಲ್ಲಿ 36 ಕೋಟಿ ಜನಸಂಖ್ಯೆಯಿತ್ತು. ಶಿಕ್ಷಣದ ಪ್ರಮಾಣ ಶೇ.17ರಷ್ಟಿತ್ತು. 2011ರ ವೇಳೆಗೆ ಜನಸಂಖ್ಯೆ 121 ಕೋಟಿಯಾಗಿದ್ದು, ಶಿಕ್ಷಣದ ಪ್ರಮಾಣ ಶೇ.74ರಷ್ಟಿದೆ. ಏಕಾಏಕಿ ಒಂದೇ ದಿನದಲ್ಲಿ ಈ ಬದಲಾವಣೆಯಾಗಿಲ್ಲ. ಸಾಕಷ್ಟು ಪರಿಶ್ರಮದಿಂದ ಇವತ್ತು ಭಾರತವು ಈ ಮಟ್ಟಕ್ಕೆ ಬೆಳೆದಿದೆ ಎಂದು ಅವರು ಹೇಳಿದರು.

ಚೀನಾದಲ್ಲಿ ಶಿಕ್ಷಣದ ಪ್ರಮಾಣ ಶೇ.96.4, ಶ್ರೀಲಂಕಾ ಶೇ.92.6ರಷ್ಟಿದೆ. ಫ್ರಾನ್ಸ್‌ನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೆ ಪೋಷಕರಿಗೆ ಶಿಕ್ಷೆ ನೀಡಲಾಗುತ್ತೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ನಮ್ಮ ದೇಶದಲ್ಲಿ ಜನಸಾಮಾನ್ಯರು ಸ್ವಯಂಪ್ರೇರಿತವಾಗಿ ಸರಕಾರದ ಆಶಯದ ಅನುಗುಣವಾಗಿ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಬೇಕಿದೆ ಎಂದು ಅವರು ತಿಳಿಸಿದರು.

ದೇಶದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುವಂತಹ 36 ಕೈಗಾರಿಕೋದ್ಯಮಿಗಳು ದೇಶವನ್ನು ತೊರೆದು ಹೋಗಿದ್ದಾರೆ. ಅವರು ಹೂಡುತ್ತಿರುವ ಬಂಡವಾಳ ವಾಪಸ್ ಬರದೇ ಇರುವಂತಹ ಪರಿಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News