'ಮೂತ್ರ ವಿಸರ್ಜಿಸಲೂ ಬಿಡಲಿಲ್ಲ..'.: ಸದನದಲ್ಲಿ ಶೆಟ್ಟರ್, ಹೊರಟ್ಟಿ ಬಿಚ್ಚಿಟ್ಟ 'ನೀತಿ ಸಂಹಿತೆ'ಯ ಕತೆ ಇದು

Update: 2020-03-10 18:31 GMT
File Photo

ಬೆಂಗಳೂರು, ಮಾ.10: ಚುನಾವಣೆಗಳ ಸಂದರ್ಭದಲ್ಲಿ ಜನಪ್ರತಿನಿಧಿಗಳು ನೀತಿ ಸಂಹಿತೆಯಿಂದ ಅನುಭವಿಸುವ ಹಲವಾರು ಸಂಕಷ್ಟಗಳಿಂದು ಪರಿಷತ್ತಿನಲ್ಲಿ ಪ್ರತಿಧ್ವನಿಸಿದ್ದು, ಸ್ವಾರಸ್ಯಕರ ಚರ್ಚೆಗೆ ದಾರಿ ಮಾಡಿಕೊಟ್ಟಿತು.

ಮಂಗಳವಾರ ಪರಿಷತ್ತಿನಲ್ಲಿ ಭಾರತ ಸಂವಿಧಾನ ಕುರಿತು ಮಾತನಾಡುತ್ತಿದ್ದ ವೇಳೆ ಸಚಿವ ಜೆ.ಸಿ.ಮಾಧುಸ್ವಾಮಿ ಮೊದಲಿಗೆ ನೀತಿ ಸಂಹಿತೆ ಹೆಸರಿನಲ್ಲಿ ಚುನಾಯಿತ ಪ್ರತಿನಿಧಿಗಳು ಅನುಭವಿಸುವ ಕಿರಿಕಿರಿಯನ್ನು ವಿವರಿಸಿದರು. ಈ ವೇಳೆ ಚುನಾವಣೆಗಳು ನೋವಿನ ಸಂಗತಿಯಾಗುತ್ತಿದ್ದು, ಚುನಾವಣೆಗಳು ನಮ್ಮನ್ನು ವಿಲನ್‌ಗಳ ರೀತಿಯಲ್ಲಿ ಕಾಣುತ್ತವೆ ಎಂದು ಹೇಳಿದರು.

ಆಗ ಮಧ್ಯಪ್ರವೇಶಿಸಿದ ಸಚಿವ ಜಗದೀಶ್ ಶೆಟ್ಟರ್, ನಾನು ಈ ಹಿಂದೆ ಸಿಎಂ ಆಗಿದ್ದ ಸಂದರ್ಭದಲ್ಲಿ ಬಾದಾಮಿಯಲ್ಲಿ ಬಹಿರಂಗ ಸಭೆಗೆ ಹಾಜರಾಗಿದ್ದೆ. ಅಲ್ಲಿ ಸಭೆ ಮುಗಿಯುವ ವೇಳೆಗೆ ತಡವಾಗಿತ್ತು. ನನಗೆ ಮೂತ್ರ ವಿಸರ್ಜನೆ ಮಾಡಲು ಹೋಗಬೇಕಿತ್ತಾದರೂ, ಚುನಾವಣಾ ಸಿಬ್ಬಂದಿ, ಅಲ್ಲಿ ಪಕ್ಕದಲ್ಲಿಯೇ ಇದ್ದ ಸರಕಾರಿ ಶಾಲೆಗೆ ಹೋಗಲು ಬಿಡಲಿಲ್ಲ ಎಂದು ಹೇಳಿದರು.

ಅನಂತರ ನಮ್ಮ ಪರಿಚಯಸ್ಥರ ಮನೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿತ್ತು ಎಂದು ಅನುಭವ ಹಂಚಿಕೊಂಡರು. ಈ ವೇಳೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಒಂದು ಬಾರಿ ಅವರು ದೇವಸ್ಥಾನಕ್ಕೆ ಹೋಗಿದ್ದ ಘಟನೆಯನ್ನು ನೆನಪಿಸಿಕೊಂಡರು.

ಚುನಾವಣೆ ಎಲ್ಲೋ ನಡೆಯುತ್ತಿದ್ದರೆ, ನಾವು ಭೇಟಿ ನೀಡುವ ಸ್ಥಳವು ಎಲ್ಲಿಯೋ ಇರುತ್ತದೆ. ಆದರೂ, ಚುನಾವಣಾ ಸಿಬ್ಬಂದಿ ನೀತಿ ಸಂಹಿತೆಯ ನೆಪವೊಡ್ಡಿ ತಡೆಯುತ್ತಾರೆ. ನಾವು ಅಭ್ಯರ್ಥಿಗಳಾಗದಿದ್ದರೂ, ಕಾರ್ಯಕ್ರಮಕ್ಕೆ ಖಾಸಗಿ ಕಾರಿನಲ್ಲಿ ಹೋಗಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಇಬ್ರಾಹಿಂ, ಅಧಿಕಾರಿಗಳು ನಾಲ್ಕು ವರ್ಷ, 9 ತಿಂಗಳು ಕಳೆದ ನಂತರ ಚುನಾವಣೆಯಲ್ಲಿ ಸೇಡು ತೀರಿಸಿಕೊಳ್ಳುತ್ತಾರೆ ಎಂದು ಹೇಳಿದರು

ಸಚಿವ ಜಗದೀಶ್‌ ಶೆಟ್ಟರ್ ಮಾತನಾಡಿ, ಚುನಾವಣಾ ನೀತಿ ಸಂಹಿತೆ ಕುರಿತು ಉಭಯ ಸದನಗಳ ಸಭಾಪತಿಗಳು ಒಟ್ಟಿಗೆ ಚುನಾವಣಾ ಆಯುಕ್ತರ ಜತೆಗೆ ಸಭೆ ನಡೆಸಬೇಕು. ಎಲ್ಲ ವಿಪಕ್ಷಗಳನ್ನು ಅದಕ್ಕೆ ಆಹ್ವಾನಿಸಬೇಕು. ಆ ಮೂಲಕ ಈ ಕಿರಿಕಿರಿಗೆ ಅಂತ್ಯವಾಡಬೇಕು. ಯಾವುದಕ್ಕೆ ನೀತಿ ಸಂಹಿತೆಯಿರಬೇಕು, ಇರಬಾರದು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಎದ್ದುನಿಂತ ಜೆಡಿಎಸ್‌ನ ಬಸವರಾಜ ಹೊರಟ್ಟಿ, ನೀತಿ ಸಂಹಿತೆಯಿಂದಾದ ಒಂದು ಅನುಭವವನ್ನು ಮುಂದಿಟ್ಟ ಅವರು, ನಾನು ಕಾರ್ಯಕ್ರಮ ನಿಮಿತ್ತ ಹಾವೇರಿಗೆ ಹೋಗಿದ್ದೆ. ಅಲ್ಲಿ ಮೂತ್ರ ಮಾಡಲು ಪ್ರವಾಸಿ ಮಂದಿರಕ್ಕೆ ತೆರಳಿದರೆ, ಮೂತ್ರ ವಿಸರ್ಜನೆಗೆ ಬಿಡಲು ಆಗಲ್ಲ ಎಂದು ಚುನಾವಣಾ ಸಿಬ್ಬಂದಿ ಹೇಳಿದರು. ನಾನು ಬೀಗ ತೆಗೆಯಿರಿ ಹೋಗಲೇಬೇಕು ಎಂದರೂ, ಅಲ್ಲಿದ್ದ ಪೊಲೀಸ್ ನನ್ನ ಕಡೆ ನೋಡಿ, ಬಿಡಬೇಡಿ ಎಂದು ಹೇಳಿ ಹೋದ. ಅಲ್ಲಿದ್ದವರು ಗೋಡೆ ಪಕ್ಕದಲ್ಲಿ ಮಾಡಿ ಹೋಗಿ ಅಂದರು ಎನ್ನುತ್ತಿದ್ದಂತೆಯೇ, ಸಚಿವ ಮಾಧುಸ್ವಾಮಿ, ಗೋಡೆ ಪಕ್ಕ ಮೂತ್ರ ಮಾಡುವುದು ಅಪರಾಧ ಎಂದು ಹೇಳಿದಾಗ ಸದನ ನಗೆಗಡಲಿನಲ್ಲಿ ಮುಳುಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News