'ನಿನ್ನಂತ ನಾಟಕಕಾರರನ್ನು ನೋಡಿದ್ದೇನೆ': ಸಚಿವ ಸುಧಾಕರ್-ರಮೇಶ್ ಕುಮಾರ್ ನಡುವೆ ವಾಗ್ವಾದ

Update: 2020-03-10 16:27 GMT

ಬೆಂಗಳೂರು, ಮಾ.10: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ ಕುಮಾರ್ ನಡುವೆ ಮಂಗಳವಾರ ವಿಧಾನಸಭೆಯಲ್ಲಿ ವಾಗ್ವಾದ ನಡೆಯಿತು.

ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಡಾ.ಕೆ.ಸುಧಾಕರ್, 'ಸಭಾಧ್ಯಕ್ಷರ ಪೀಠದಿಂದ ನಮಗೆ ಅನ್ಯಾಯವಾಯಿತು. 17 ಜನ ಶಾಸಕರ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿತ್ತು' ಎಂದು ಆರೋಪಿಸಿದರು.

ಈ ವೇಳೆ ಸದನದ ಒಳಗೆ ಬಂದ ರಮೇಶ್ ಕುಮಾರ್, ಶಾಸಕರ ಅನರ್ಹತೆ ಕುರಿತು ಸ್ಪೀಕರ್ ನೀಡಿದ್ದ ತೀರ್ಪಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಬಗ್ಗೆ ಸದನದಲ್ಲಿ ಚರ್ಚೆಗೆ ಸರಕಾರ ಅವಕಾಶ ಕಲ್ಪಿಸಿಕೊಟ್ಟಿದೆಯೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿಗೆ ಪ್ರಶ್ನಿಸಿದರು.

ಈ ವೇಳೆ 'ನಿನ್ನಂತ ನಾಟಕಕಾರರನ್ನು ನೋಡಿದ್ದೇನೆ' ಎಂದು ರಮೇಶ್‌ ಕುಮಾರ್‌ರನ್ನು ಉದ್ದೇಶಿಸಿ ಏಕವಚನದಲ್ಲಿ ಸುಧಾಕರ್ ನಿಂದಿಸಿದರು. ಸದನದಲ್ಲಿ ರಮೇಶ್ ಕುಮಾರ್ ಹಾಗೂ ಸುಧಾಕರ್ ನಡುವೆ ಮಾತಿನ ಚಕಮಕಿ ನಡೆಯಿತು. ಅಲ್ಲದೆ, ರಮೇಶ್ ಕುಮಾರ್ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಸುಧಾಕರ್ ವಿರುದ್ಧ ರಮೇಶ ಕುಮಾರ್ ಅವಾಚ್ಯ ಶಬ್ದ ಬಳಸಿದ್ದಾರೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು. ಇದರಿಂದಾಗಿ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿ ಸದಸ್ಯರು ‘ನಹೀ ಚಲೆಗಾ, ನಹೀ ಚಲೆಗಾ ದಾದಾಗಿರಿ ನಹೀ ಚಲೆಗಾ’ ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ಆಗ ಸಭಾಧ್ಯಕ್ಷರ ಪೀಠದಲ್ಲಿ ಆಸೀನರಾಗಿದ್ದ ಶಿವಾನಂದ ಪಾಟೀಲ್, ಸದನವನ್ನು ಐದು ನಿಮಿಷಗಳ ಕಾಲ ಮುಂದೂಡಿದರು.

ಸದನ ಪುನಃ ಸಮಾವೇಶಗೊಳ್ಳುತ್ತಿದ್ದಂತೆ ಗದ್ದಲ ಎಬ್ಬಿಸಿದ ಬಿಜೆಪಿ ಸದಸ್ಯರು, ಸಚಿವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ರಮೇಶ್ ಕುಮಾರ್ ಅವರನ್ನು ಸದನದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸುಧಾಕರ್ ವಿರುದ್ಧ ನಿಯಮ 191ರಡಿಯಲ್ಲಿ ಹಕ್ಕುಚ್ಯುತಿ ಮಂಡನೆಗೆ ಅವಕಾಶ ಕೊಡುವಂತೆ ಸ್ಪೀಕರ್‌ಗೆ ಮನವಿ ಮಾಡಿದರು. ಅಲ್ಲದೇ, ಆಡಳಿತ ಪಕ್ಷದ ಸದಸ್ಯರು ಸದನ ನಡೆಯದಂತೆ ಗದ್ದಲ ಮಾಡುತ್ತಿರುವುದು ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನಡೆ. ಸರಕಾರ ಈ ರೀತಿ ನಡೆದುಕೊಳ್ಳುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದನದಲ್ಲಿ ಗದ್ದಲದ ವಾತಾವರಣ ಮುಂದುವರೆದಿದ್ದರಿಂದ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ಬುಧವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.

ರಾಜೀನಾಮೆಗೆ ಮುಂದಾಗಿದ್ದ ರಮೇಶ್ ಕುಮಾರ್
ಸದನದಲ್ಲಿ ಸುಧಾಕರ್ ಜೊತೆ ನಡೆದ ವಾಗ್ವಾದದ ಬಳಿಕ ರಮೇಶ್‌ ಕುಮಾರ್, ನೇರವಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಈ ವಿಷಯ ತಿಳಿದು ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಸೇರಿದಂತೆ ಇನ್ನಿತರರು ರಮೇಶ್ ಕುಮಾರ್ ಮನವೊಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News