ಸದನದಲ್ಲಿ ಅವಾಚ್ಯ ಶಬ್ದ ಬಳಸಿ ನಿಂದಿಸಿದ ಸುಧಾಕರ್ ವಿರುದ್ಧ ಹಕ್ಕುಚ್ಯುತಿ ನೋಟಿಸ್: ಸಿದ್ದರಾಮಯ್ಯ
ಬೆಂಗಳೂರು, ಮಾ.10: ಕಾಂಗ್ರೆಸ್ ಹಿರಿಯ ಸದಸ್ಯ ಕೆ.ಆರ್.ರಮೇಶ್ ಕುಮಾರ್ ವಿರುದ್ಧ ಸದನದಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ವಿರುದ್ಧ ನಿಯಮ 191ರಡಿಯಲ್ಲಿ ಹಕ್ಕುಚ್ಯುತಿ ನೋಟಿಸ್ ನೀಡಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದ ಮೇಲೆ ನಡೆಯುತ್ತಿದ್ದ ಚರ್ಚೆ ವೇಳೆ ಅನಗತ್ಯವಾಗಿ 17 ಮಂದಿ ಶಾಸಕರನ್ನು ಅನರ್ಹಗೊಳಿಸಿ ರಮೇಶ್ ಕುಮಾರ್ ಸ್ಪೀಕರ್ ಆಗಿದ್ದ ವೇಳೆ ನೀಡಿದ್ದ ಆದೇಶ ಹಾಗೂ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿ ಸುಧಾಕರ್ ಗೊಂದಲ ಉಂಟಾಗುವಂತೆ ಮಾಡಿದರು ಎಂದರು.
ರಮೇಶ್ ಕುಮಾರ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಆದರೆ, ಇವತ್ತು ಸದನದಲ್ಲಿ 'ಸಭಾಧ್ಯಕ್ಷರ ಪೀಠದಿಂದ ನಮಗೆ ಅನ್ಯಾಯವಾಯಿತು. ನಮ್ಮ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡಿದರು' ಎಂದು ಸುಧಾಕರ್ ಆರೋಪ ಮಾಡಿದ್ದರು. ಇದು ಕೇವಲ ರಮೇಶ್ ಕುಮಾರ್‌ಗಷ್ಟೇ ಅಲ್ಲ, ಸ್ಪೀಕರ್ ಪೀಠಕ್ಕೆ, ಸದನಕ್ಕೆ ಮಾಡಿದ ಅಗೌರವವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಸುಧಾಕರ್ ಸದನದಲ್ಲಿ ಉದ್ಧಟತನದಿಂದ ಮಾತನಾಡಿದ್ದಾರೆ. ಅವರ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಲು ನೋಟಿಸ್ ಕೊಟ್ಟಿದ್ದೆ. ಆದರೆ, ಅದನ್ನು ಪ್ರಸ್ತಾಪ ಮಾಡಲು ಸರಕಾರ ಹಾಗೂ ಆಡಳಿತ ಪಕ್ಷ ಅವಕಾಶವೆ ಕೊಟ್ಟಿಲ್ಲ. ಇದು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಅವರು ಕಿಡಿಗಾರಿದರು.
ಸದನ ಸುಗಮವಾಗಿ ನಡೆಯದಂತಹ ವಾತಾವರಣವನ್ನು ಆಡಳಿತ ಪಕ್ಷದವರೆ ನಿರ್ಮಿಸಿದ್ದು ದುಂಡಾವರ್ತನೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ರಮೇಶ್ ಕುಮಾರ್ ಅವರು ಸುಧಾಕರ್ ವಿರುದ್ಧ ಯಾವುದೇ ರೀತಿಯ ಅವಾಚ್ಯ ಶಬ್ಧಗಳನ್ನು ಬಳಕೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.