ಎಲ್ಲ ಧರ್ಮಗಳನ್ನು ಗೌರವಿಸಬೇಕಾದ ಅಗತ್ಯವಿದೆ: ಐವನ್ ಡಿಸೋಜ

Update: 2020-03-10 17:19 GMT

ಬೆಂಗಳೂರು, ಮಾ.10: ಭಾರತದ ಸಂವಿಧಾನ ಸಾರ್ವಭೌಮತೆಯನ್ನು ಪ್ರತಿಪಾದಿಸಲಿದ್ದು, ದೇಶದ ಎಲ್ಲ ಧರ್ಮಗಳನ್ನು ಗೌರವಿಸಬೇಕಾದ ಅಗತ್ಯವಿದೆ ಎಂದು ಕಾಂಗ್ರೆಸ್ ಸದಸ್ಯ ಐವನ್ ಡಿಸೋಜ ಅಭಿಪ್ರಾಯಪಟ್ಟರು.

ಮಂಗಳವಾರ ವಿಧಾನಪರಿಷತ್‌ನಲ್ಲಿ ಭಾರತದ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ನನ್ನ ಧರ್ಮ ಅಷ್ಟೇ ಶ್ರೇಷ್ಠ, ಬೇರೆ ಧರ್ಮಗಳು ಕನಿಷ್ಟ ಎಂಬ ಮನೋಭಾವವನ್ನು ಬಿಡಬೇಕು. ನಮ್ಮ ಸಂವಿಧಾನದ ಅಡಿಯಲ್ಲಿಯೇ ಬಹುತ್ವವನ್ನು ಪ್ರತಿಪಾದಿಸಿದ್ದು, ಅದರಂತೆ ನಡೆದುಕೊಳ್ಳಬೇಕಿದೆ ಎಂದರು.

ಧರ್ಮದ ಆಧಾರದಲ್ಲಿ ದೇಶವನ್ನು ನೋಡುವುದು ಸರಿಯಲ್ಲ. ಜಾತ್ಯತೀತ, ಬಹುತ್ವದ ನೆಲೆಗಟ್ಟಿರುವ ಭಾರತವನ್ನು ವಿಶ್ವದ ಅನೇಕ ದೇಶಗಳು ಗಮನಿಸುತ್ತಿದೆ. ಭಾರತದ ಬಗ್ಗೆ ಅಪಾರವಾದ ಗೌರವವಿದೆ ಹೊರ ದೇಶಗಳಲ್ಲಿ ಎಂದು ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಸಿ.ಟಿ.ರವಿ, ಮೋದಿ ಪ್ರಧಾನಿಯಾದ ಮೇಲೆ ವಿಶ್ವದಾದ್ಯಂತ ಭಾರತ ಉಜ್ವಲಿಸುತ್ತಿದೆ ಎಂದು ಕೆಣಕಿದರು.

ಮೋದಿ ಪ್ರಧಾನಿಯಾದ ನಂತರ ಅಮೆರಿಕಾ, ಇಸ್ರೇಲ್ ಸೇರಿದಂತೆ ಅನೇಕ ರಾಷ್ಟ್ರಗಳ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದು ವಿಶೇಷವಾಗಿದೆ. ಅಲ್ಲದೆ, ಮೋದಿ ವಿದೇಶಗಳಿಗೆ ಹೋದಾಗಲೂ ವಿಶೇಷವಾದ ಪ್ರೋತ್ಸಾಹ, ಬೆಂಬಲ ಸಿಗುತ್ತಿದೆ. ಆದರೆ, ನಮ್ಮಲ್ಲಿರುವ ಕೆಲವರು ಪಾಕಿಸ್ತಾನದವರು ಯೋಚನೆ ಮಾಡಿದಂತೆ ಯೋಚಿಸುತ್ತಾರೆ. ಅವರಿಗೆ ಮೋದಿಯನ್ನು ಟೀಕಿಸುವುದೇ ಕೆಲಸವಾಗಿದೆ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‌ನ ಶ್ರೀಕಂಠೇಗೌಡ, ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದವರು ಯಾರು ಎಂದು ಟೀಕಿಸಿದರು. ಇದೇ ವೇಳೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ, ಟ್ರಂಪ್ ಭಾರತದ ಗುಜರಾತ್ ರಾಜ್ಯಕ್ಕೆ ಬಂದಾಗ ಸ್ಲಂಗೆ ಯಾಕೆ ಗೋಡೆಯನ್ನು ಕಟ್ಟಿಸಬೇಕಿತ್ತು ಎಂದು ಹೇಳಿದರು.

ಮಾತು ಮುಂದುವರಿಸಿದ ಐವನ್ ಡಿಸೋಜ, 2014 ರ ಬಳಿಕ ದೇಶದಲ್ಲಿ ಸಂವಿಧಾನದ ಮೇಲೆ ಸವಾರಿ ನಡೆಯುತ್ತಿದೆ. ಗರಿಷ್ಠ ಮಟ್ಟದಲ್ಲಿದ್ದ ರಾಜಕೀಯ ಪಾಲ್ಗೊಳ್ಳುವಿಕೆ, ನಾಗರಿಕ ಸ್ವಾತಂತ್ರ 2014ರ ನಂತರ ಇಳಿಮುಖವಾಗಿದೆ. ಸಂವಿಧಾನ ಬದಲಾವಣೆ ಮಾಡಲು ಬಂದಿದ್ದೇವೆ, ನಾವು ಒಂದು ಸಮುದಾಯದ ಕೆಲಸ ಮಾಡಲು ಇದ್ದೇವೆ ಎಂಬ ಮಾತುಗಳಿಂದ ಪ್ರಜಾಪ್ರಭುತ್ವದ ಗೌರವ ಕಡಿಮೆಯಾಗಿದೆ ಎಂದು ಪ್ರತಿಪಾದಿಸಿದರು.

ಕೇಂದ್ರ ಸರಕಾರ ಒಂದೇ ದೇಶ, ಒಂದೇ ಭಾಷೆ, ಒಂದೇ ಧರ್ಮ ಎನ್ನುವುದು ಸರಿಯಾದ ಕ್ರಮವಲ್ಲ. ದೇಶದ ಆಂಧ್ರಪ್ರದೇಶ, ತೆಲಂಗಾಣ ಸೇರಿ ಹಲವು ಕಡೆ ಪ್ರತ್ಯೇಕ ದೇಶದ ಕೂಗು ಕೇಳಿಬರುತ್ತಿದೆ ಎನ್ನುತ್ತಿದ್ದಂತೆಯೇ ಆಕ್ಷೇಪ ವ್ಯಕ್ತಪಡಿಸಿದ ಪರಿಷತ್‌ನ ಸಭಾ ನಾಯಕ, ಡಿಸೋಜ ಮಾತನ್ನು ಖಂಡಿಸಿದರು. ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸಿದ್ದೀವಿ, ಇನ್ನು ದೇಶದ ಐಕ್ಯತೆ ಕಾಪಾಡಲ್ಲವಾ ಎಂದು ಹೇಳಿದರು. ಅಲ್ಲದೆ, ಐವನ್ ಡಿಸೋಜಾ ಮಾತು ಹಿಂಪಡೆಯುವಂತೆ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News