ಕ್ರಿಮಿನಲ್ ಪ್ರಕರಣ ವಾಪಸ್: ರಾಜ್ಯ ಸರಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ

Update: 2020-03-10 17:21 GMT

ಬೆಂಗಳೂರು, ಮಾ.10: ರಾಜ್ಯ ಸರಕಾರ ವಿವಿಧ ಹಿನ್ನೆಲೆಯುಳ್ಳ 46 ಜನರ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿರುವ ಕ್ರಮ ಅಪರಾಧಿ ಕೃತ್ಯಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಆರೋಪಿಸಿದೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಡಿಪಿಐ ಅಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ಸರಕಾರ ಹಿಂಪಡೆದ ಪ್ರಕರಣಗಳ ಹಿನ್ನೆಲೆಯುಳ್ಳವರಲ್ಲಿ ಬಹುತೇಕರು ಕೊಲೆ ಯತ್ನ, ಮಾರಣಾಂತಿಕ ಹಲ್ಲೆ, ದೊಂಬಿ, ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದಂತಹ ಹಾಗೂ ವಾಹನಗಳನ್ನು ಸುಟ್ಟ ಮತ್ತು ಇತರ ಗಂಭೀರ ಕ್ರಿಮಿನಲ್ ಅಪರಾದ ಹಿನ್ನೆಲೆಯಿದೆ. ಇಂತಹ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಸರಕಾರ ನ್ಯಾಯ ವ್ಯವಸ್ಥೆಯನ್ನೇ ಅಪಹಾಸ್ಯ ಮಾಡಿದೆ ಎಂದು ಆಪಾದಿಸಿದರು.

ಈ ಹಿಂದೆಯೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸರಕಾರ ಕೇಸುಗಳನ್ನು ಹಿಂಪಡೆದಿತ್ತು. ಕ್ರಿಮಿನಲ್ ಕೃತ್ಯಗಳನ್ನು ಎಸಗುವವರಿಗೆ ಬಿಜೆಪಿ ಸರಕಾರ ರಕ್ಷಣೆಯನ್ನು ಒದಗಿಸುತ್ತದೆ ಎಂದಾದರೆ ನ್ಯಾಯಕ್ಕಾಗಿ ಏನು ಮಾಡಬೇಕು ಎಂಬ ಪ್ರಶ್ನೆಯೂ ಏಳುವಂತಾಗಿದೆ ಎಂದರು.

ಇಂತಹ ಬೆಳವಣಿಗೆಗೆಳು ಸಮಾಜದಲ್ಲಿ ಶಾಂತಿ ಸೌಹಾರ್ಧತೆಗೆ ಭಾರೀ ಅಪಾಯವುಂಟು ಮಾಡುತ್ತದೆ. ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗುವವರಿಗೆ ಭಯ ಇಲ್ಲದಂತಾಗುತ್ತದೆ. ಸರಕಾರಗಳು ಪ್ರಕರಣಗಳನ್ನು ಹಿಂಪಡೆಯುತ್ತವೆ ಎಂಬ ಕಾರಣಕ್ಕೆ ಸಮಾಜ ಘಾತುಕ ಕೃತ್ಯಗಳು ಎಗ್ಗಿಲ್ಲದೇ ನಡೆಯುತ್ತವೆ. ದಾಳಿ, ಹಲ್ಲೆ, ಅವಮಾನ, ಸಾವು-ನೋವುಗಳು ಹೆಚ್ಚಾಗುತ್ತವೆ. ಸರಕಾರದ ಈ ನಡೆಯನ್ನು ಎಸ್‌ಡಿಪಿಐ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News