×
Ad

ಕೊರೋನ, ಕಾಲರಾ ಭೀತಿ: ಬೆಂಗಳೂರಿನಲ್ಲಿ ಬೀದಿಬದಿ ವ್ಯಾಪಾರ ನಡೆಸದಂತೆ ಸಿಎಂ ಸೂಚನೆ

Update: 2020-03-10 22:57 IST

ಬೆಂಗಳೂರು, ಮಾ.10: ರಾಜ್ಯದಲ್ಲಿ ಕೊರೋನ ವೈರಸ್ ಹಾಗೂ ಕಾಲರಾ ಭೀತಿ ಹೆಚ್ಚಾಗಿರುವ ಹಿನ್ನೆಲೆ ಮಾ.10(ಮಂಗಳವಾರ)ರಿಂದ ನಗರದಲ್ಲಿ ಯಾವುದೇ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ನಡೆಸಬಾರದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ.

ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಮಂಜುನಾಥ್ ರಾಜು, ಆಡಳಿತ ಪಕ್ಷದ ನಾಯಕ ಮುನೀಂದ್ರಕುಮಾರ್ ಹಾಗೂ ಆಯುಕ್ತ ಅನಿಲ್ ಕುಮಾರ್ ಅವರಿಗೆ ಸಿಎಂ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಾ.10ರಿಂದ ಎಲ್ಲ 198 ವಾರ್ಡ್‌ಗಳಲ್ಲೂ ಬೀದಿಬದಿಯ ವ್ಯಾಪಾರಗಳು ಸ್ಥಗಿತಗೊಳ್ಳಬೇಕು. ಸರಕಾರ ಮುಂದಿನ ಆದೇಶ ನೀಡುವವರೆಗೂ ಯಾವುದೇ ರಸ್ತೆಯಲ್ಲೂ ಹಣ್ಣು, ತರಕಾರಿಗಳು, ಚಾಟ್ ಸೆಂಟರ್‌ಗಳು ಹಾಗೂ ತಳ್ಳುವ ಗಾಡಿಯಲ್ಲಿ ಮಾರಾಟವಾಗುವ ಆಹಾರ ಪದಾರ್ಥಗಳು ಕಾಣಿಸಬಾರದು. ಪಾಲಿಕೆಯ ವತಿಯಿಂದ ಕೊರೋನ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಜೊತೆಗೆ ಫುಡ್ ಸ್ಟ್ರೀಟ್‌ಗಳ ಮೇಲೂ ಹದ್ದಿನ ಕಣ್ಣಿಡಬೇಕು ಎಂದು ಆದೇಶಿಸಿದ್ದಾರೆ.

ಕೊರೋನ ವೈರಸ್ ಜಾಗೃತಿಗೆ ಪ್ರತಿ ವಾರ್ಡ್‌ನ ಪಾಲಿಕೆ ಸದಸ್ಯರು ಕೈಜೋಡಿಸಬೇಕು. ನಗರದ ಹೊರವಲಯದಲ್ಲಿ ಕೊರೋನ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಕಾಲರಾ ಮಹಾಮಾರಿ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ನಗರದ ವಾಣಿವಿಲಾಸ್, ನಿಮ್ಹಾನ್ಸ್, ರಾಜೀವ್‌ ಗಾಂಧಿ ಆಸ್ಪತ್ರೆ ಸೇರಿದಂತೆ ಪಾಲಿಕೆಗೆ ಸೇರಿರುವ ಆಸ್ಪತ್ರೆಗಳಲ್ಲೂ ಪ್ರಥಮ ಚಿಕಿತ್ಸೆಗೆ ಬೇಕಾಗಿರುವ ಅನುಕೂಲ ಮಾಡಿಕೊಡಬೇಕೆಂದು ಸಿಎಂ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News