×
Ad

ತಕ್ಷಣ ಎಫ್‌ಐಆರ್ ದಾಖಲಿಸಲು ಸುತ್ತೋಲೆ ಹೊರಡಿಸಿ: ಡಿಜಿಗೆ ಹೈಕೋರ್ಟ್ ಆದೇಶ

Update: 2020-03-10 23:01 IST

ಬೆಂಗಳೂರು, ಫೆ.10: ರಾಜ್ಯದಾದ್ಯಂತ ಒಟ್ಟು 113 ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಂಜ್ಞೆಯ ಅಪರಾಧ ಕೃತ್ಯ ಸಂಬಂಧ ದೂರು ಬಂದರೆ ತಕ್ಷಣ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಪೊಲೀಸರಿಗೆ ನಿರ್ದೇಶಿಸಿ ಸುತ್ತೋಲೆ ಹೊರಡಿಸುವಂತೆ ಹೈಕೋರ್ಟ್ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದೆ.

ರಾಜ್ಯದಲ್ಲಿ ಬಾಲ ನ್ಯಾಯ(ಮಕ್ಕಳ ಕಾಳಜಿ ಹಾಗೂ ಸುರಕ್ಷತೆ) ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಸ್ವಯಂ ಪ್ರೇರಿತ ಹಾಗೂ ಬಚಪನ್ ಬಚಾವೊ ಸ್ವಯಂ ಸೇವಾ ಸಂಸ್ಥೆ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.     

ಸರಕಾರದ ಪರ ವಾದಿಸಿದ ವಕೀಲರು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸಂಜ್ಞೆಯ ಅಪರಾಧ ಕೃತ್ಯ ಸಂಬಂಧ ದೂರು ಬಂದರೆ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ ಎಂಬ ಪ್ರಮಾಣ ಪತ್ರವನ್ನು ಪೀಠಕ್ಕೆ ಸಲ್ಲಿಸಿದರು. ಪ್ರಮಾಣ ಪತ್ರವನ್ನು ಮಾನ್ಯ ಮಾಡಿದ ನ್ಯಾಯಪೀಠವು, ತಕ್ಷಣ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಹೊಸದೊಂದು ಸುತ್ತೋಲೆ ಹೊರಡಿಸಲು ನಿರ್ದೇಶಿಸಿ, ವಿಚಾರಣೆಯನ್ನು ಮುಂದೂಡಿತು.

ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಕೆ ಮಾಡಿಕೊಂಡಿರುವ ಕುರಿತ ತನಿಖಾ ವರದಿಯನ್ನು ಸಿಐಡಿ ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಿ, ತನಿಖೆ ಮುಂದುವರೆದಿದೆ ಎಂದು ತಿಳಿಸಿದರು. ನ್ಯಾಯಪೀಠವು ಮುಂದಿನ ವಿಚಾರಣೆ ವೇಳೆ ಜೆಜೆ ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿತು.

ಮಕ್ಕಳು ಮತ್ತು ಕಲ್ಯಾಣ ಸಚಿವಾಲಯ 2018ರಲ್ಲಿ ಬಿಡುಗಡೆ ಮಾಡಿರುವ ವರದಿಯಲ್ಲಿ ಕರ್ನಾಟಕದಲ್ಲಿನ 113 ಮಕ್ಕಳು ಲೈಂಗಿಕ ದುರ್ಬಳಕೆಗೆ ಒಳಗಾಗಿದ್ದಾರೆ ಎಂದು ತಿಳಿಸಲಾಗಿತ್ತು. ಅಲ್ಲದೆ, ಈ ಸಂಬಂಧ ಪೊಲೀಸರು ಈತನಕ ಎಫ್‌ಐಆರ್ ದಾಖಲಿಸಿಲ್ಲ ಮತ್ತು ಯಾವುದೇ ತನಿಖೆ ನಡೆಸಿಲ್ಲ ಎಂದು ಆಕ್ಷೇಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News