ತಾಂತ್ರಿಕ ದೋಷ ಪರಿಹರಿಸಿ ಶೀಘ್ರ ಪಡಿತರ ಚೀಟಿ ವಿತರಣೆಗೆ ಕ್ರಮ: ಸಚಿವ ಕೆ.ಗೋಪಾಲಯ್ಯ

Update: 2020-03-10 17:41 GMT

ಬೆಂಗಳೂರು, ಮಾ.10: ಪಡಿತರ ಚೀಟಿ ಪಡೆಯಲು ಆಗುತ್ತಿರುವ ತಾಂತ್ರಿಕ ದೋಷ ಪರಿಹರಿಸಲು ತುರ್ತು ಅಧಿಕಾರಿಗಳ ಸಭೆ ನಡೆಸಿ, ಶೀಘ್ರದಲ್ಲಿಯೇ ಪಡಿತರ ಚೀಟಿ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಗೋಪಾಲಯ್ಯ ಭರವಸೆ ನೀಡಿದರು.

ಮಂಗಳವಾರ ವಿಧಾನ ಪರಿಷತ್‌ನಲ್ಲಿ ಮಧ್ಯಾಹ್ನ ಭೋಜನ ನಂತರ ಆರಂಭವಾದ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎಸ್.ರವಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ತಾಂತ್ರಿಕ ದೋಷದಿಂದಾಗಿ ಜನವರಿ ತಿಂಗಳಲ್ಲಿ ಹೊಸ ಪಡಿತರ ಚೀಟಿ ವಿತರಣೆ, ವರ್ಗಾವಣೆ, ವಿಳಾಸ ಬದಲಾವಣೆ, ತಿದ್ದುಪಡಿ, ಹೆಸರು ಸೇರ್ಪಡೆ ಮಾಡಲು ಸಾಧ್ಯವಾಗಿರಲಿಲ್ಲ ಎಂದರು.

ಇದೀಗ ಸರ್ವರ್ ಸಮಸ್ಯೆ ಬಗೆಹರಿಸಲಾಗಿದೆ. ಹೆಚ್ಚುವರಿಯಾಗಿ ಸರ್ವರ್‌ವೊಂದನ್ನು ಅಳವಡಿಸಲಾಗಿದೆ. ಫೆಬ್ರವರಿ ತಿಂಗಳಲ್ಲಿ ಹೊಸಪಡಿತರ ಚೀಟಿ ವಿತರಣೆ ಸೇರಿದಂತೆ ಇತರ ಕಾರ್ಯಗಳು ಸುಸೂತ್ರವಾಗಿ ನಡೆಯಲು ಯಾವುದೇ ಸಮಸ್ಯೆ ಇಲ್ಲ ಎಂದು ಸಚಿವರು ನುಡಿದರು.

ಸಚಿವರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಎಸ್.ರವಿ ಅವರು, ಈವರೆಗೂ ಯಾವುದೇ ಸಮಸ್ಯೆ ಬಗೆಹರಿದಿಲ್ಲ. ಒಂದು ವರ್ಷದ ಹಿಂದೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಪಡಿತರ ಚೀಟಿ ಯಾರಿಗೂ ಬಂದಿಲ್ಲ. ಪಡಿತರ ಆಹಾರ ಧಾನ್ಯ ವಿತರಣೆಯಾಗುತ್ತಿದೆ. ಆದರೆ, ಪಡಿತರ ಕಾರ್ಡುಗಳು ಸಿಕ್ಕಿಲ್ಲ. ಇಂದಿನ ದಿನಗಳಲ್ಲಿ ಸ್ಥಳೀಯ ಗುರುತಿಗಾಗಿ ಪಡಿತರ ಕಾರ್ಡು ತುಂಬಾ ಮಹತ್ವವಿದೆ. ಸರಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಬಳಿಕ ಸಚಿವರು, ಬುಧವಾರ ಅಧಿಕಾರಿಗಳ ಸಭೆ ಕರೆದು, ಪಡಿತರ ಕಾರ್ಡು ವಿತರಣೆ ಮಾಡುವ ಕ್ರಮ ಕೈಗೊಳ್ಳುತ್ತೇನೆ. ಅದೇ ರೀತಿ, ಅನಿಲ ಸಂಪರ್ಕ ಹೊಂದಿರುವ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿದಾರರು 1 ಲೀಟರ್ ಸೀಮೆ ಎಣ್ಣೆ ಪಡೆಯಲು ನೋಂದಣಿ ಮಾಡಿದ್ದಲ್ಲಿ ಪ್ರತಿ ತಿಂಗಳು ಯಾವುದೇ ಸಮಸ್ಯೆಗಳಿಲ್ಲದೆ 35 ರೂ.ದರದಲ್ಲಿ ಸೀಮೆ ಎಣ್ಣೆ ವಿತರಣೆ ಮಾಡಲಾಗುವುದು. ಆದರೆ, ಅವರು ಸೀಮೆ ಎಣ್ಣೆ ಪಡೆಯುವಾಗ ಬೆರಳಚ್ಚು ನೀಡುವುದು ಕಡ್ಡಾಯ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News