×
Ad

ಸೃಜನಶೀಲತೆಯನ್ನು ಒಳಗೊಂಡ ಕೃತಿ ‘ಮುಂದಣ ಕಥನ’: ಡಾ.ಬಂಜಗೆರೆ ಜಯಪ್ರಕಾಶ್

Update: 2020-03-10 23:13 IST

ಬೆಂಗಳೂರು, ಮಾ.10: ನಟರಾಜ್ ಹುಳಿಯಾರ್ ಅವರ ‘ಮುಂದಣ ಕಥನ’ ನಾಟಕವು ಏಕಕಾಲದಲ್ಲಿ ಅಧ್ಯಯನ ಶೀಲ, ವಿಶ್ಲೇಷಕತೆ, ಸೃಜನಶೀಲತೆಯನ್ನು ಒಳಗೊಂಡಿರುವ ಕೃತಿಯಾಗಿದೆ ಎಂದು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ ನಗರದ ನಯನ ಸಭಾಂಗಣದಲ್ಲಿ ಬಯಲು ಬಳಗ ಹಾಗೂ ಪಲ್ಲವ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ನಟರಾಜ್ ಹುಳಿಯಾರ್‌ರ ‘ಮುಂದಣ ಕಥನ’ ನಾಟಕ, ‘ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು’ ಹಾಗೂ ‘ಮತ್ತೊಬ್ಬ ಸರ್ವಾಧಿಕಾರಿ’ ಕಥಾ ಸಂಕಲನಗಳ ಮರು ಮುದ್ರಣ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಟರಾಜ್ ಹುಳಿಯಾರ್ ಬಹಳ ಪರಿಶ್ರಮ ಪೂರ್ವಕವಾಗಿ, ಹೊಣೆಗಾರಿಕೆಯಿಂದ ಈ ನಾಟಕವನ್ನು ಕಟ್ಟಿದ್ದಾರೆ. ಪರಂಪರೆ ಅಧ್ಯಯನ ಮಾಡಬೇಕಾಗಿರುವುದು ಕೃತಿಕಾರನಿಗೆ ಇರಬೇಕಾದ ಅಧ್ಯಯನ ಶ್ರದ್ಧೆ ಇದರಲ್ಲಿ ಅಡಕವಾಗಿದೆ. ವರ್ತಮಾನ ಕಾಲ ಗ್ರಹಿಸುವಾಗ ವಿಶ್ಲೇಷಕನಿಗೆ ಇರಬೇಕಾದ ಚಿಕಿತ್ಸಾ ಕ್ರಮ ಸೂಕ್ಷ್ಮವಾಗಿದೆ. ಸೃಜನಶೀಲ ಕೃತಿಕಾರರನಾಗಿ ನಾಳಿನ ಬಗೆಯನ್ನು ವಿಧಾನವನ್ನು ಮಾರ್ಮಿಕವಾಗಿ ಕೃತಿಯಲ್ಲಿ ಹೇಳಿದ್ದಾರೆ ಎಂದರು.

ಆಯಾ ಕಾಲಘಟ್ಟಕ್ಕೆ ಬೇಕಾದ ಒಳನೋಟ ಕೃತಿ ಕಟ್ಟಿಕೊಡುವುದು. ಈ ಹಿನ್ನೆಲೆಯಲ್ಲಿ ನಟರಾಜ್ ಹುಳಿಯಾರ್, ಅಧ್ಯಯನ ಶೀಲ, ವಿಶ್ಲೇಷಕತೆ ಹಾಗೂ ಸೃಜನಶೀಲತೆ ಮೂರು ಶಕ್ತಿಗಳು ಕ್ರೋಡೀಕರಿಸಿದ್ದಾರೆ. ಅದು ಈ ನಾಟಕದ ಅತಿದೊಡ್ಡ ಗೆಲುವಾಗಿದೆ. ಅಲ್ಲದೆ, ಅವರು ಮೊದಲ ಬಾರಿಗೆ ಅತ್ಯಂತ ಪರಿಪೂರ್ಣವಾಗಿ ವಚನ ಕಾಲವನ್ನು ಕೃತಿಯಲ್ಲಿ ಎದುರುಗೊಂಡಿದ್ದಾರೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯದಲ್ಲಿ 12 ನೇ ಶತಮಾನಕ್ಕೆ ಸಂಬಂಧಿಸಿದ ಅನೇಕ ನಾಟಕಗಳಿವೆ. ಅದರ ನಡುವೆಯೂ, ವಸ್ತು ಹಳತಾಗದಂತೆ, ಹೊಸದಾದ ಕಲ್ಪನೆಯ ಮೂಲಕ ಕಥೆಯನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಜಾನಪದ ಕಲಾ ಪ್ರಕಾರ ಹಾಗೂ ವೈವಿಧ್ಯತೆಯನ್ನೂ ಇದು ಒಳಗೊಂಡಿದೆ. ಹಿಂದಣ ಕಥನದ ಜತೆಗೆ ಹೋಲಿಸಿ, ಮುಂದಣ ಕಥೆ ಹೇಳಲು ಕಥಾಕಾರರು ಹೊರಟಿದ್ದಾರೆ ಎಂದು ಬಂಜಗೆರೆ ಜಯಪ್ರಕಾಶ್ ಹೇಳಿದರು.

ವಚನಕಾರರ ಮುಂದಣ ಕಥನ, ಮಂಟೇಸ್ವಾಮಿಯ ಭರವಸೆಯ ಮಾತುಗಳು ಕಥೆಯೊಳಗೆ ಧ್ವನಿಸುವ ಕೆಲಸ ಮಾಡಿದ್ದಾರೆ. ಕಥೆಯೊಳಗೆ ಇಬ್ಬರು ವಚನಕಾರರು ನೇರವಾಗಿ ಪ್ರವೇಶಿಸುತ್ತಾರೆ. ಉಳಿದ ಎಲ್ಲರೂ ಅನಾಮಿಕರಾಗಿದ್ದಾರೆ. ವಚನಗಳ ಕಟ್ಟುಗಳ ಉಳಿವಿಗಾಗಿ ಹೋರಾಡುವ ವಿಧಾನ, ಪ್ರಾಣ ನೀಡಿಯಾದರೂ ಕಾಪಾಡಿಕೊಳ್ಳುವ ವಿಧಾನ ಇಂದಿನ ಸಂದರ್ಭದ ವಾಸ್ತವತೆಯನ್ನು ಪ್ರತಿನಿಧಿಸುತ್ತದೆ ಎಂದು ನುಡಿದರು.

ಹೊಸ ಭಾರತ ನಿರ್ಮಾಣ ಮಾಡುತ್ತೇವೆ ಎಂದು ಸಂವಿಧಾನದ ಮೂಲಕ ನಾವು ಕಟ್ಟಿಕೊಂಡಿರುವ ಕನಸು, ಆತಂಕದ ಸ್ಥಿತಿಯಲ್ಲಿದೆ. ಅದನ್ನು ಉಳಿಸಲು ಶರಣರ ತ್ಯಾಗದ ರೂಪಕದ ಮೂಲಕ ಕಟ್ಟಿಕೊಟ್ಟಿದ್ದಾರೆ. ಸನ್ನಿವೇಶಗಳನ್ನು ಅತಿಯಾದ ನಾಟಕೀಯಗೊಳಿಸದೆ, ಸೂಕ್ತವಾದ ಸಂದರ್ಭದಲ್ಲಿ ಮಂಡಿಸಲಾಗಿದೆ. ಹೇಳದೆಯೂ ನಮ್ಮ ಕಾಲಘಟ್ಟದಲ್ಲಿ ನಡೆದ ಕೆಲವು ವಿದ್ರಾವಕ ಘಟನೆಗಳನ್ನು ಕಟ್ಟಲಾಗಿದೆ. ಸನ್ನಿವೇಶ ಪಾತ್ರವಾದ ಸಂದರ್ಭದಲ್ಲಿ ಅದು ನಮಗೆ ಹೊಳೆಯುತ್ತವೆ ಎಂದರು.

ಲೇಖಕ ನಟರಾಜ್ ಹುಳಿಯಾರ್ ಮಾತನಾಡಿ, ನಾವಿಂದು ಹೆಚ್ಚು ಆತಂಕದ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಒಂದು ರೀತಿಯಲ್ಲಿ ಇದೇ ನನಗೆ ಈ ಕಥೆ ಬರೆಯಲು ಕಾರಣವಾಯಿತು ಅನ್ನಿಸುತ್ತದೆ. ಈ ಹಿಂದೆ, ಬಸವಣ್ಣರಿಗೂ, ಗಾಂಧೀಜಿಗೂ ಬೆದರಿಕೆಯಿತ್ತು ಎಂದ ಅವರು, ಇಂದು ದೊರೆಸ್ವಾಮಿಯನ್ನೂ ಮತ್ತೊಬ್ಬ ಗೋಡ್ಸೆ ದೂರುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.

ದೇಶವು ಅತ್ಯಂತ ಬಿಕ್ಕಟ್ಟಿನ ಸಂದರ್ಭದಲ್ಲಿದೆ. ಆದರೂ, ಇಂದು ಶಾಹಿನ್ ಬಾಗ್‌ನಲ್ಲಿ ಮಹಿಳೆಯರು ಹೋರಾಟಕ್ಕಿಳಿದಿದ್ದಾರೆ. ಇನ್ನೊಂದು ಕಡೆ ಪರಿಸರ ರಕ್ಷಣೆಗಾಗಿ ಮಹಿಳೆಯರು ಮರವನ್ನು ಬಿಗಿದಪ್ಪಿಕೋ ಚಳವಳಿ ಮಾಡುತ್ತಿದ್ದಾರೆ. ಈ ವೇಳೆ ಚರಿತ್ರೆ ಮತ್ತು ಸಮಕಾಲೀನತೆ ನೋಡುತ್ತಿದ್ದರೆ ಈ ನಾಟಕದಲ್ಲಿ ಆಶಾಭಾವ ಕಂಡೀತು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕ ಮಾಲತೇಶ್ ಬಡಿಗೇರ್, ಪ್ರಕಾಶಕ ಪಲ್ಲವ ವೆಂಕಟೇಶ್, ಅಧ್ಯಾಪಕ ದೇವರಾಜ್ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News