×
Ad

ಕನ್ನಡಿಗರ ಸವಲತ್ತು ತಮಿಳರಿಗೆ ನೀಡಿರುವುದು ಯಾವ ಪುರುಷಾರ್ಥಕ್ಕೆ ?: ಟಿ.ಎಸ್.ನಾಗಾಭರಣ ಕಿಡಿ

Update: 2020-03-10 23:22 IST

ಬೆಂಗಳೂರು, ಮಾ.10: ಕನ್ನಡಿಗರ ಸ್ಥಾನಕ್ಕೆ ತಮಿಳರನ್ನು ಅಂಪ್ರೆಂಟಿಸ್‌ಗಳಾಗಿ ನೇಮಕ ಮಾಡಿಕೊಂಡಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಎಚ್ಚರಿಕೆ ನೀಡಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್ ನಾಗಾಭರಣ ಭೇಟಿ ನೀಡಿ, ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ನಡೆಸಿದರು. ರಾಜ್ಯ ಸರಕಾರದ ಉದ್ದಿಮೆಯಾಗಿರುವ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ಗೆ, ಕೆಐಎಡಿಬಿಯಿಂದ ಅಭಿವೃದ್ದಿಪಡಿಸಲಾದ ಭೂಮಿಯನ್ನು ನೀಡಿರುವುದು ಕನ್ನಡಿಗರಿಗೆ ಉದ್ಯೋಗ ದೊರೆಯಲಿ, ಆ ಮೂಲಕ ಕನ್ನಡಿಗರು ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಲಿ ಎಂಬ ಕಾರಣಕ್ಕಾಗಿ. ತಾವು ತಮ್ಮ ಕರ್ತವ್ಯ ಮರೆತು ಕನ್ನಡಿಗರ ಸವಲತ್ತುಗಳನ್ನು ತಮಿಳರಿಗೆ ನೀಡಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.

ಈ ರೀತಿ ಆಯ್ಕೆಗೊಂಡವರನ್ನು ಕೂಡಲೇ ಬಿಡುಗಡೆಗೊಳಿಸಿ ಕನ್ನಡಿಗರನ್ನು ನೇಮಿಸಿಕೊಳ್ಳಬೇಕು ಮತ್ತು ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಖಾಯಂ ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವವರ ಕಾರ್ಮಿಕರಿಗೆ ಸಿಗಬೇಕಾದ ಕಲ್ಯಾಣ ಯೋಜನೆಗಳು ಸಮರ್ಪಕವಾಗಿ ಸಿಗುತ್ತಿಲ್ಲವೆಂಬ ದೂರುಗಳಿದ್ದು, ಕೂಡಲೇ ಈ ಬಗ್ಗೆಯೂ ಕ್ರಮವಹಿಸುವಂತೆ ತಾಕೀತು ಮಾಡಿದರು.

ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕನ್ನಡದ ಗ್ರಂಥಾಲಯವನ್ನು ತೆರೆದು ತಾಂತ್ರಿಕ ಪದಕೋಶ, ಕಾರ್ಮಿಕ ಕಾನೂನು, ಸಂವಿಧಾನದಂತಹ ಪುಸ್ತಕಗಳನ್ನು ಈ ಸಂಸ್ಥೆಯ ನೌಕರರಿಗೆ ಓದಲು ವಿತರಿಸಿದರೆ ಕಾರ್ಮಿಕರಿಗೆ ಕಾನೂನಿನ ಅರಿವು ವಿಸ್ತಾರಗೊಳ್ಳುವ ಜೊತೆಗೆ ಕನ್ನಡ ಅನುಷ್ಠಾನಗೊಳಿಸಿದಂತೆಯೂ ಆಗಲಿದೆ. ಅಲ್ಲದೇ, ಇಲ್ಲಿ ಕೆಲಸ ನಿರ್ವಹಿಸಿ ಸಾವನ್ನಪ್ಪಿರುವ ಕಾರ್ಮಿಕರ ಕುಟುಂಬಕ್ಕೆ ದೊರೆಯಬೇಕಾದ ಸೌಲಭ್ಯವನ್ನು ನೀಡದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಡಾ.ವೀರಶೆಟ್ಟಿ, ಕನ್ನಡ ಚಿಂತಕ ಟಿ.ತಿಮ್ಮೇಶ್, ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕಾಧ್ಯಕ್ಷ ಮಾಯಣ್ಣ, ಶಿವಪ್ರಕಾಶ್, ಜಗದೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News