‘ಶಿಕ್ಷಕರ ವರ್ಗಾವಣೆ ನಿಯಂತ್ರಣ’ ವಿಧೇಯಕ ಮಂಡನೆ

Update: 2020-03-10 17:53 GMT

ಬೆಂಗಳೂರು, ಮಾ. 10: ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಯಲ್ಲಿ ಪಾರದರ್ಶಕತೆ ಮತ್ತು ಸಮಾನತೆ ಖಚಿತಪಡಿಸಿಕೊಳ್ಳುವುದರ ಜತೆಗೆ ವಲಯವಾರು ವರ್ಗಾವಣೆಗಳಿಗೆ ವಿನಾಯಿತಿ ನೀಡುವ ಸಂಬಂಧದ ‘ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ-2020’ ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಮಂಗಳವಾರ ವಿಧಾನಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ವಿಧೇಯಕ ಮಂಡಿಸಿದರು. 50 ವರ್ಷ ತುಂಬಿದ ಮಹಿಳಾ ಶಿಕ್ಷಕಿಯರಿಗೆ ಮತ್ತು 55 ವರ್ಷ ತುಂಬಿದ ಪುರುಷ ಶಿಕ್ಷಕರಿಗೆ ವಲಯವಾರು ವರ್ಗಾವಣೆಯಿಂದ ವಿನಾಯಿತಿ ನೀಡುವ ಪ್ರಸ್ತಾವನೆ ಇದರಲ್ಲಿ ಸೇರ್ಪಡೆಯಾಗಿದೆ.

ಅಂಗವೈಕಲ್ಯವುಳ್ಳ ಶಿಕ್ಷಕರಿಗೂ ವರ್ಗಾವಣೆ ನೀತಿಯಲ್ಲಿ ಕೆಲ ವಿನಾಯಿತಿ ನೀಡಲಾಗಿದೆ. ವರ್ಗಾವಣೆ ಕೋರಲು ಶಿಕ್ಷಕರು ಒಂದು ಶಾಲೆಯಲ್ಲಿ ಕನಿಷ್ಠ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಬೇಕೆಂಬ ನಿರ್ಬಂಧ ಹೇರಿದೆ. ವಿನಾಯಿತಿಗಳೊಂದಿಗೆ ವಲಯಗಳ ಉದ್ದಗಲಕ್ಕೆ ಶಿಕ್ಷಕರ ಸುತ್ತು ಸರದಿಯನ್ನು ಸಾಧಿಸಲು ವಲಯವಾರು ವರ್ಗಾವಣೆಗೂ ಅವಕಾಶವಿರುತ್ತದೆ.

ನೂತನ ವಿಧೇಯಕ ಶಿಕ್ಷಕರ ಹಲವು ಪ್ರವರ್ಗಗಳಿಗಾಗಿ ಎಲ್ಲ ವಿನಾಯಿತಿಗಳು ಮತ್ತು ಆದ್ಯತೆಗಳೊಂದಿಗೆ ಶಿಕ್ಷಕ ಸಂಪನ್ಮೂಲದ ವರ್ಗಾವಣೆ ಮತ್ತು ಸಮರ್ಪಕ ಮರು ಹಂಚಿಕೆ ಮಾಡುವ ವಿಷಯದಲ್ಲಿ ಶಿಕ್ಷಕ ಸ್ನೇಹಿ ವಿಧಾನ ಅನುಸರಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಪದವಿ ಪೂರ್ವ ಕಾಲೇಜು ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ ವಿಧೇಯಕದಡಿ ಪ್ರಸ್ತಾಪಿಸಲಾಗಿದೆ. ‘ಸಿ’ ಮತ್ತು ‘ಬಿ’ ವಲಯದಲ್ಲಿ ನಿರಂತರ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ‘ಎ’ ವಲಯದ ಶಾಲೆಗಳಿಗಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ವಿಧೇಯಕದಲ್ಲಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News