'ಗಾಂಧಿ ಚುನಾವಣೆಗೆ ನಿಂತರೂ...': ರಾಜಕೀಯ ವ್ಯವಸ್ಥೆಯ ಬಗ್ಗೆ ಸಿ.ಟಿ.ರವಿ ಹೇಳಿದ್ದು ಹೀಗೆ...
ಬೆಂಗಳೂರು, ಮಾ.11: ದೇಶದಲ್ಲಿ ರಾಜಕೀಯ ವ್ಯವಸ್ಥೆ ಬೆತ್ತಲೆಯಾಗಿದ್ದು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯೇ ನೇರವಾಗಿ ಚುನಾವಣೆ ಸ್ಪರ್ಧೆ ಮಾಡಿದರೂ ನೀನು ಬೇಡ, ನಿನ್ನ ಭಾವಚಿತ್ರವಿರುವ ನೋಟು ಬೇಕು ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಬುಧವಾರ ವಿಧಾನಪರಿಷತ್‌ನಲ್ಲಿ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡುತ್ತಾ, ಚುನಾವಣೆ ವ್ಯವಸ್ಥೆ ಭ್ರಷ್ಟವಾಗಿದೆ. ಇತ್ತೀಚಿಗೆ ನಡೆದ ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯಿತು ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬಿಜೆಪಿಯ ಸದಸ್ಯರಾದ ತೇಜಸ್ವಿನಿಗೌಡ, ರವಿಕುಮಾರ್ ಹಾಗೂ ಸಚಿವ ಸಿ.ಟಿ.ರವಿ ಮಾತನಾಡಿದರು.
ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿ, ಇಂದಿನ ಚುನಾವಣೆ ವ್ಯವಸ್ಥೆ ಪೂರ್ತಿ ಭ್ರಷ್ಟಗೊಂಡಿದೆ. ಆಯಾ ಪಕ್ಷಗಳ ಅಧಿಕಾರದ ಅವಧಿಯಲ್ಲಿ ಹೇಗೆ ಬೇಕೋ ಹಾಗೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ನಾವು ಚಿಕ್ಕವರಿದ್ದಾಗ ಚುನಾವಣೆಯಲ್ಲಿ ಯಾರಾದರೂ ನಿರ್ದಿಷ್ಟ ಪ್ರದೇಶಗಳಲ್ಲಿ ಪಾಕೆಟ್ ಹಂಚಿದರೆ ದೊಡ್ಡ ಸುದ್ದಿಯಾಗುತ್ತಿತ್ತು. ಈಗ ಚುನಾವಣೆಯಲ್ಲಿ ಹಣ, ಹೆಂಡ ಇಲ್ಲದಿದ್ದರೆ ಮತದಾರರು ಕೈ-ಬಾಯಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಈ ನಡುವೆ ಮಧ್ಯಪ್ರವೇಶಿಸಿದ ಜೆಡಿಎಸ್‌ನ ರಮೇಶ್ ಗೌಡ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಇಡೀ ವ್ಯವಸ್ಥೆಯನ್ನೇ ಹಾಳು ಮಾಡಿದ್ದೀರಿ. ಮಂಡ್ಯ ಉಪ ಚುನಾವಣೆಯಲ್ಲಿ ಗೆಲ್ಲಲು ನೀವು ಎಷ್ಟು ಹಣ ಹಂಚಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪಿಸಿದ ಬಿಜೆಪಿಯ ತೇಜಸ್ವಿನಿ, ರಮೇಶ್, ಪ್ರಾಣೇಶ್, ನಾರಾಯಣಸ್ವಾಮಿ, ಮಂಡ್ಯದಲ್ಲಿ ಚುನಾವಣೆ ನಡೆದಾಗ ನೀವು ಎಷ್ಟು ಹಣ ಖರ್ಚು ಮಾಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತು ಎಂದರು.
ಕಾಂಗ್ರೆಸ್‌ನ ನಾರಾಯಣಸ್ವಾಮಿ ಮಧ್ಯದಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಚುನಾವಣಾ ವ್ಯವಸ್ಥೆಯನ್ನು ಹಾಳು ಮಾಡಿದ್ದೇ ಬಿಜೆಪಿಯವರು. ಬಳ್ಳಾರಿಯ ಗಣಿ ರೆಡ್ಡಿಗಳಿಗೆ ಚುನಾವಣೆ ಉಸ್ತುವಾರಿ ಕೊಟ್ಟು ಮತದಾರರನ್ನೇ ಖರೀದಿ ಮಾಡಿದಿರಿ. ಆಪರೇಷನ್ ಕಮಲದ ಮೂಲಕ ಸರಕಾರಗಳನ್ನೇ ಉರುಳಿಸಿದಿರಿ ಎಂದು ಟೀಕಿಸಿದರು.
ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಬಿಜೆಪಿಯವರು ಕೋಟ್ಯಂತರ ರೂಪಾಯಿ ಹಣದ ಹೊಳೆ ಹರಿಸುವ ಮೂಲಕ ವ್ಯವಸ್ಥೆಯನ್ನೇ ಹಾಳು ಮಾಡಿದರು ಎಂದು ದೂರಿದರು.