ಸಂವಿಧಾನ ಬದಲಿಸುವ ಪ್ರಯತ್ನವಾದರೆ ರಕ್ತಪಾತವಾಗುತ್ತದೆ: ವಿಧಾನಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ

Update: 2020-03-11 14:45 GMT

ಬೆಂಗಳೂರು, ಮಾ.11: ಸಂವಿಧಾನವನ್ನು ಭಾರತದ ಸಂಸತ್ತು, ನ್ಯಾಯಾಂಗವೂ ಕದಲಿಸಲು ಸಾಧ್ಯವಿಲ್ಲ. ಒಂದು ವೇಳೆ ಸಂವಿಧಾನ ಬದಲಾಯಿಸುವ ಪ್ರಯತ್ನವಾದರೆ ದೇಶದಲ್ಲಿ ರಕ್ತಪಾತವಾಗುತ್ತದೆ ಎಂದು ಕಾಂಗ್ರೆಸ್‌ನ ಸಿ.ಎಂ.ಲಿಂಗಪ್ಪ ಹೇಳಿದ್ದಾರೆ. 

ಬುಧವಾರ ವಿಧಾನಪರಿಷತ್‌ನಲ್ಲಿ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಸಂವಿಧಾನದ ಕಲಂ 14-34 ರವರೆಗೂ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಈ ಹಕ್ಕುಗಳನ್ನು ಮೊಟಕುಗೊಳಿಸಲು ಯಾರಿಂದಲೂ ಸಾಧ್ಯವಾಗಲ್ಲ. ಹಾಗೆಯೇ, ಸಂವಿಧಾನವನ್ನು ಬದಲಿಸಲೂ ಸಾಧ್ಯವಿಲ್ಲ ಎಂದರು.

ಸಂವಿಧಾನವೇ ಸರಿಯಿಲ್ಲ, ನಾವದನ್ನು ಬದಲಿಸುತ್ತೇವೆ ಎನ್ನುವವರಿದ್ದಾರೆ. ಮೂಲಭೂತ ಹಕ್ಕುಗಳು ಸರಿಯಿಲ್ಲ ಎನ್ನುವವರೂ ಇದ್ದಾರೆ. ಆದರೆ, ಭಾರತದ ನ್ಯಾಯಾಂಗವಾಗಲಿ, ಸಂಸತ್ತಿಗೂ ಇದನ್ನು ಬದಲಿಸುವ ಹಕ್ಕಿಲ್ಲ ಎಂದ ಅವರು, ನಮಗಿರುವ ಮೂಲಭೂತ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಸಂವಿಧಾನಕ್ಕೆ ಅನೇಕ ತಿದ್ಧುಪಡಿಗಳನ್ನು ತರುವ ಮೂಲಕ ಅನಗತ್ಯವಾದವನ್ನು ಸೇರಿಸಲಾಗಿದೆ ಎಂದ ಅವರು, ಮೂಲಭೂತ ಹಕ್ಕುಗಳಿಗೆ ಹಿಡಿತವಿದೆ. ಆದರೆ, ಮೂಲಭೂತ ಕರ್ತವ್ಯಗಳು ಜಾಳುಜಾಳಾಗಿದ್ದು, ಬಿಗಿಯಿಲ್ಲ. ಅವುಗಳನ್ನು ಮನಬಂದಂತೆ ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿದರು.

1976 ರಲ್ಲಿ ಸ್ವಾತಂತ್ರ್ಯ ಪಡೆದ ಯುಎಸ್‌ಎ ಸಂವಿಧಾನದಲ್ಲಿ ಇದುವರೆಗೂ ಕೇವಲ 8-10 ತಿದ್ದುಪಡಿಗಳಾಗಿವೆ. ಅದೇ ರೀತಿಯಲ್ಲಿ ಎರಡು ಸಾವಿರ ವರ್ಷಗಳಿಂದ ಬ್ರಿಟನ್ ಯಶಸ್ವಿ ಪ್ರಜಾಪ್ರಭುತ್ವವನ್ನು ನಡೆಸಿಕೊಂಡು ಬರುತ್ತಿದೆ. ಆದರೆ, ವಿಶಾಲವಾದ ಭಾರತದ ಸಂವಿಧಾನಕ್ಕೆ 123 ತಿದ್ದುಪಡಿಗಳು ಮಾಡಿರುವುದು ಸಲ್ಲ. ಮುಂದಿನ ದಿನಗಳಲ್ಲಿ ಈ ತಿದ್ದುಪಡಿಗಳಿಗೆ ಬ್ರೇಕ್ ಹಾಕಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News