ಎತ್ತಿನಹೊಳೆಗೆ 86 ಎಕರೆ ನೀಡುವ ಒಡಂಬಡಿಕೆಗೆ ಸಂಪುಟ ಸಮ್ಮತಿ

Update: 2020-03-11 15:18 GMT

ಬೆಂಗಳೂರು, ಮಾ. 11: ಎತ್ತಿನಹೊಳೆ ಯೋಜನೆ ಕಾಲುವೆಗೆ ತಿಪಟೂರು ತಾಲೂಕಿನ ಕೊನೇಹಳ್ಳಿ ಸಮೀಪದಲ್ಲಿನ (ಬಿದರೆಗುಡಿ ಕಾವಲ್ ಗ್ರಾಮದ ಸರ್ವೆ ನಂ.3ರ) ಪಶು ವೈದ್ಯಕೀಯ ವಿವಿಯ 86 ಎಕರೆ ಭೂಮಿ ನೀಡಲು ವಿಶ್ವೇಶ್ವರಯ್ಯ ನೀರಾವರಿ ನಿಗಮ ಹಾಗೂ ಪಶು ವೈದ್ಯಕೀಯ ವಿವಿ ಒಡಂಬಡಿಕೆ ಮಾಡಿಕೊಳ್ಳಲು ಸಚಿವ ಸಂಪುಟ ಸಮ್ಮತಿಸಿದೆ.

ಬುಧವಾರ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ತಿಳಿಸಿದ್ದು, ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾ.ಜಿಲ್ಲೆಗಳಿಗೆ ಹಾಗೂ ತುಮಕೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಆಯ್ದ ತಾಲೂಕುಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ.

ಪಾಲಾರ್ ಮತ್ತು ಪೆನ್ನಾರ್ ಕೊಳ್ಳಗಳಲ್ಲಿ ಬರುವ ಸಣ್ಣ ನೀರಾವರಿ ಕೆರೆಗಳನ್ನು ಅವುಗಳ ಸಾಮರ್ಥ್ಯದ ಶೇ.50ರಷ್ಟು ತುಂಬಿಸಿ ಕುಡಿಯುವ ನೀರಿನ ಮೂಲಾಧಾರ ಸೃಜಿಸುವುದು, ತಿಪ್ಪಗೊಂಡನಹಳ್ಳಿ ಜಲಾಶಯ ಹಾಗೂ ಹೆಸರುಘಟ್ಟ ಕೆರೆಯ ನೀರಿನ ಕೊರತೆಯನ್ನು ಭಾಗಶಃ ಸರಿದೂಗಿಸುವ ಯೋಜನೆಯಾಗಿದೆ ಎಂದು ತಿಳಿಸಿದರು.

ಈ ಯೋಜನೆಯಲ್ಲಿ ಒಟ್ಟು 527 ಸಣ್ಣ ನೀರಾವರಿ ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ.50ರಷ್ಟು ನೀರನ್ನು ತುಂಬಿಸಿ ಕುಡಿಯುವ ನೀರು ಒದಗಿಸಲು ಯೋಜಿಸಿದ್ದು, ಅದರಲ್ಲಿ ಚಿಕ್ಕಬಳ್ಳಾಪುರ-196, ಕೋಲಾರ-138, ತುಮಕೂರು-113, ಬೆಂಗಳೂರು ಗ್ರಾ.-46 ಮತ್ತು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕೆರೆಗಳಿಗೆ ನೀರು ಒದಗಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News