ಕೊರೋನ ವೈರಸ್ ಆತಂಕ: ಬಯೋಮೆಟ್ರಿಕ್ ಬಳಸದಂತೆ ಸಿಬ್ಬಂದಿಗೆ ಹೈಕೋರ್ಟ್ ಸುತ್ತೋಲೆ
Update: 2020-03-11 22:10 IST
ಬೆಂಗಳೂರು, ಮಾ.11: ಕೊರೋನ ವೈರಸ್ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹೈಕೋರ್ಟ್ ಪ್ರಧಾನ ಪೀಠ, ಧಾರವಾಡ ಹಾಗೂ ಕಲಬುರಗಿ ಸಂಚಾರ ಪೀಠಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಬಯೋಮೆಟ್ರಿಕ್ ಬದಲು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡುವಂತೆ ಸೂಚಿಸಿ ಹೈಕೋರ್ಟ್ ಸುತ್ತೋಲೆ ಹೊರಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂಚನೆ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರು ಮಾ.11ರಂದು ಸುತ್ತೋಲೆ ಹೊರಡಿಸಿದ್ದು, ತಾವು ಮತ್ತೆ ಸೂಚನೆ ನೀಡುವವರೆಗೂ ಬಯೋಮೆಟ್ರಿಕ್ ಯಂತ್ರದ ಬದಲು ಕಚೇರಿಯಲ್ಲಿರುವ ಹಾಜರಾತಿ ಪುಸ್ತಕದಲ್ಲೇ ಸಹಿ ಮಾಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕೊರೋನ ವೈರಸ್ ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.