ಸಿಎಎ, ಎನ್‌ಆರ್‌ಸಿ ಮೂಲಕ ದೇಶದ ಜನರನ್ನು ಬಿಜೆಪಿ ವಿಭಜಿಸಲು ಮುಂದಾಗಿದೆ: ಪ್ರಕಾಶ್ ಅಂಬೇಡ್ಕರ್
ಬೆಂಗಳೂರು, ಮಾ.11: ಕೇಂದ್ರ ಸರಕಾರ ಜಾರಿಗೆ ಮುಂದಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಮೂಲಕ ಬಿಜೆಪಿ ಮತ್ತು ಆರೆಸ್ಸೆಸ್ ದೇಶದ ಜನರನ್ನು ವಿಭಜಿಸಲು ಮುಂದಾಗಿದೆ ಎಂದು ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಇಂದಿಲ್ಲಿ ಆರೋಪಿಸಿದ್ದಾರೆ.
ಬುಧವಾರ ನಗರದ ಮಡ್ ಟ್ಯಾಂಕ್ ಗ್ರೌಂಡ್‌ನಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಐಕ್ಯತಾ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕೇಂದ್ರ ಸರಕಾರಗಳ ಕಾಯ್ದೆಗಳಿಂದ ಶೋಷಿತ ಸಮುದಾಯಗಳಿಗೆ ಆಗುವ ತೊಂದರೆಗಳು ಏನು? ವಿಷಯದ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಮೂಲಕ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಬಿಜೆಪಿ ಹಾಗೂ ಸಂಘಪರಿವಾರ ಮಾಡುತ್ತಿದೆ. ಸಂಸತ್ತಿನಲ್ಲಿ ಚರ್ಚೆಯೇ ಇಲ್ಲದೆ ನೇರವಾಗಿ ಜಾರಿ ಮಾಡುವ ಮೂಲಕ ಜನರ ಮೇಲೆ ಬಲವಂತವಾಗಿ ಈ ಕಾಯ್ದೆಯನ್ನು ಹೇರಲಾಗುತ್ತಿದೆ. ಇದು ಸಂವಿಧಾನ ವಿರೋಧಿ ಕಾಯ್ದೆಯಾಗಿದ್ದು, ಇದರಿಂದ ಕೇವಲ ಮುಸ್ಲಿಮರು ಅಷ್ಟೇ ಅಲ್ಲದೆ, ಹಿಂದುಳಿದವರು, ದಲಿತರು ಸಹ ತೊಂದರೆಗೆ ಸಿಲುಕಲಿದ್ದಾರೆ ಎಂದು ಹೇಳಿದರು.
ದೇಶದ ಜನಸಂಖ್ಯೆಯಲ್ಲಿ ಶೇ.10 ರಿಂದ 12 ರಷ್ಟು ಜನಸಂಖ್ಯೆಯಿರುವ ಅಲೆಮಾರಿ, ಬುಡಕಟ್ಟು ಜನರು ಈ ಕಾಯ್ದೆಯಿಂದ ನರಳಲಿದ್ದಾರೆ. ಗುಡ್ಡಗಾಡು ಪ್ರದೇಶದ ಜನರು ಎಲ್ಲಿಂದ ದಾಖಲೆ ತಂದು ತೋರಿಸಲು ಸಾಧ್ಯವಾಗುತ್ತದೆ. ಬಿಜೆಪಿಯು ಜನರ ಬದುಕುವ ಹಕ್ಕನ್ನು ಕಸಿಯಲು ಮುಂದಾಗಿದ್ದು, ಅನಗತ್ಯವಾಗಿ ದೇಶದ ಜನರ ಮೇಲೆ ಕಾನೂನು, ಕಾಯ್ದೆಗಳನ್ನು ಹೇರುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ಷೇಪಿಸಿದರು.
ಕೇಂದ್ರ ಸರಕಾರದ ಕಾಯ್ದೆಗಳ ವಿರುದ್ಧ ಮಾತನಾಡುವ, ಪ್ರತಿಭಟಿಸುವವರ ಮೇಲೆ ಆಕ್ರಮಣಕಾರಿ ದಾಳಿ ನಡೆಸುತ್ತಿರುವ ಬಿಜೆಪಿಯು, ಜನರ ಪ್ರತಿಭಟಿಸುವ ಹಕ್ಕನ್ನು ಕಸಿಯುವ ಯತ್ನ ನಡೆಸಿದೆ. ದಿಲ್ಲಿಯ ಜೆಎನ್‌ಯು, ಜಾಮಿಯಾ ವಿವಿ ಸೇರಿದಂತೆ ಹಲವಾರು ಕಡೆಗಳಲ್ಲಿ ಬಿಜೆಪಿಯ ಅಂಗಸಂಸ್ಥೆಗಳಿಂದ ನಡೆದ ದಾಳಿ, ಪೊಲೀಸರನ್ನು ಬಳಸಿಕೊಂಡು ನಡೆಸುತ್ತಿರುವ ದಾಳಿಯ ಉದ್ದೇಶ ಸ್ಪಷ್ಟವಾಗಿದ್ದು, ಇಂತಹ ದಮನಕಾರಿ ನೀತಿಗಳಿಂದ ಚಳವಳಿಯನ್ನು ಹತ್ತಿಕ್ಕಲು ಆಗುವುದಿಲ್ಲ ಎಂದು ತಿಳಿಸಿದರು.
ಕೇಂದ್ರ ಸರಕಾರದ ಸಂವಿಧಾನ ವಿರೋಧಿ ಕಾಯ್ದೆ, ಕಾನೂನುಗಳ ವಿರುದ್ಧ ದೇಶದ ಎಲ್ಲ ಕಡೆಗಳಿಂದಲೂ ಲಕ್ಷಾಂತರ ಜನರು ಒಗ್ಗೂಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಒಟ್ಟುಗೂಡುತ್ತಿರುವುದನ್ನು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಪ್ರತಿಭಟಿಸುವವರ ಮೇಲೆಯೇ ಆಕ್ರಮಣಕ್ಕಿಳಿದಿದೆ ಎಂದು ಅವರು ಆಪಾದಿಸಿದರು.