ಸಚಿನ್ ತೆಂಡುಲ್ಕರ್ ಏಕದಿನ ದಾಖಲೆ ಮುರಿಯುವತ್ತ ವಿರಾಟ್ ಕೊಹ್ಲಿ

Update: 2020-03-11 18:35 GMT

ಧರ್ಮಶಾಲಾ, ಮಾ.11: ಭಾರತದ ನಾಯಕ ವಿರಾಟ್ ಕೊಹ್ಲಿಗೆ ಏಕದಿನ ಕ್ರಿಕೆಟ್‌ನಲ್ಲಿ 12,000 ರನ್ ಪೂರೈಸಲು ಕೇವಲ 133 ರನ್ ಅಗತ್ಯವಿದೆ. ಗುರುವಾರ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿ ಈ ಸಾಧನೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ಕೊಹ್ಲಿ ಈ ತನಕ 239 ಇನಿಂಗ್ಸ್‌ಗಳಲ್ಲಿ ಆಡಿದ್ದಾರೆ. ಒಂದು ವೇಳೆ 12,000 ರನ್ ಪೂರೈಸಿದರೆ, ಅತ್ಯಂತ ವೇಗವಾಗಿ ಈ ಸಾಧನೆ ಮಾಡುವ ಮೂಲಕ ಸಚಿನ್ ತೆಂಡುಲ್ಕರ್‌ರ ದಾಖಲೆಯನ್ನು ಮುರಿಯಲಿದ್ದಾರೆ.

 ತೆಂಡುಲ್ಕರ್ 300 ಇನಿಂಗ್ಸ್‌ಗಳಲ್ಲಿ 12,000 ರನ್ ಮೈಲುಗಲ್ಲು ತಲುಪಿದ್ದರು. ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ 314ನೇ ಇನಿಂಗ್ಸ್‌ನಲ್ಲಿ 12,000 ರನ್ ಪೂರೈಸುವುದರೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ 336 ಇನಿಂಗ್ಸ್‌ಗಳಲ್ಲಿ 12 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಪ್ರಸ್ತುತ ಕಳಪೆ ಫಾರ್ಮ್‌ನಲ್ಲಿರುವ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ ಸರಣಿಯಲ್ಲಿ ತನಗೆ ಲಭಿಸಿರುವ ಅವಕಾಶವನ್ನು ಬಳಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಇತ್ತೀಚೆಗಷ್ಟೇ ನ್ಯೂಝಿಲ್ಯಾಂಡ್ ನೆಲದಲ್ಲಿ ಕೊನೆಗೊಂಡ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿ ಗಳಿಸಿದ ಗರಿಷ್ಠ ಸ್ಕೋರ್ 51. ಇನ್ನೆರಡು ಪಂದ್ಯಗಳಲ್ಲಿ 15 ಹಾಗೂ 9 ರನ್ ಗಳಿಸಿದ್ದರು. 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಅವರು 2,19, 3 ಹಾಗೂ 14 ರನ್ ಗಳಿಸಿದ್ದಾರೆ. ಭಾರತ ಟೆಸ್ಟ್ ಸರಣಿಯನ್ನು 0-2 ಅಂತರದಿಂದ ಸೋತಿತ್ತು.

ಭಾರತ-ದಕ್ಷಿಣ ಆಫ್ರಿಕಾದ ಮಧ್ಯೆ ಮೊದಲ ಏಕದಿನ ಪಂದ್ಯ ಗುರುವಾರ ಧರ್ಮಶಾಲಾದಲ್ಲಿ ನಡೆಯಲಿದೆ. ರವಿವಾರ ಲಕ್ನೊದಲ್ಲಿ ಎರಡನೇ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯ ಕೋಲ್ಕತಾದಲ್ಲಿ ಮಾ.18ರಂದು ನಿಗದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News